ರಾಯಚೂರು: ಕಡು ಬಡತನದಲ್ಲಿ ಬೆಳೆದರೂ ಡಾ| ಎ.ಪಿ.ಜಿ. ಅಬ್ದುಲ್ ಕಲಾಂ ಇಡೀ ವಿಶ್ವವೇ ಬೆರಗಾಗುವ ಮೂಲಕ ವಿಜ್ಞಾನಿಯಾಗಿದರು. ರಾಷ್ಟ್ರಪತಿಯಂತಹ ಹುದ್ದೆಗೇರಿದರೂ ಅವರು ನಡೆಸಿದ ಸರಳ ಜೀವನ ಎಲ್ಲರಿಗೂ ಮಾದರಿ ಎಂದು ಕಿಲ್ಲೆ ಬೃಹನ್ಮಠದ ಪೀಠಾ ಧಿಪತಿ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ನಗರದ ಶ್ರೀ ವೆಂಕಟೇಶ್ವರ ಪದವಿ ಕಾಲೇಜಿನಲ್ಲಿ ಯಾಪಲದಿನ್ನಿಯ ಡಾ|ಎ.ಪಿ.ಜೆ. ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆ ಆಯೋಜಿಸಿದ್ದ ಸಂಸ್ಥೆಯ ದಶಮಾನೋತ್ಸವ ಕಾರ್ಯಕ್ರಮ ಮತ್ತು 5ನೇ ವರ್ಷದ “ಡಾ|ಎ.ಪಿ.ಜೆ. ಅಬ್ದುಲ್ ಕಲಾಂ ಅತ್ಯುತ್ತಮ ಪ್ರಶಸ್ತಿ’ ಪ್ರದಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು. ಮನುಕುಲ ಮತ್ತು ವಿದ್ಯಾರ್ಥಿ ವೃಂದಕ್ಕೆ ಅವರ ಸಾಧನೆ ಮತ್ತು ಸೇವೆ ಎಂದಿಗೂ ಮಾದರಿಯಾಗಿದೆ. ಸಾಧಿಸುವ ಛಲವುಳ್ಳವರಿಗೆ, ಇಂದಿನ ಯುವ ಸಮುದಾಯಕ್ಕೆ ಅಬ್ದುಲ್ ಕಲಾಂ ಅವರ ಜೀವನವೇ ಮಾದರಿ ಎಂದರು.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯದ ರಾಜಯೋಗಿನಿ ಸಹೋದರಿ ಬಿ.ಕೆ. ಸ್ಮಿತಾ ಮಾತನಾಡಿ, ಸಂಸ್ಥೆಯು ದಶಕದಿಂದ ಸಮಾಜಮುಖೀ ಕಾರ್ಯ ಮಾಡಿಕೊಂಡು ಬರುತ್ತಿರುವುದು ಶ್ಲಾಘನೀಯ. ಒಂದು ಶಿಕ್ಷಣಪರ ಮತ್ತು ಸಮಾಜಮುಖೀ ಸಂಸ್ಥೆಯಾಗಿದೆ. ವೈದ್ಯಕೀಯ, ಪತ್ರಿಕೋದ್ಯಮ, ಸಮಾಜಸೇವೆ, ಸಂಗೀತ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 15 ಸಾಧಕರನ್ನು ಗುರುತಿಸಿ ಡಾ| ಎ.ಪಿ.ಜೆ. ಅಬ್ದುಲ್ ಕಲಾಂ ಅತ್ಯುತ್ತಮ ಪ್ರಶಸ್ತಿ ನೀಡಿ ಗೌರವಿಸಿರುವುದು ಉತ್ತಮ ಕಾರ್ಯ ಎಂದು ಬಣ್ಣಿಸಿದರು.
ಸಹಾಯಕ ಆಯುಕ್ತ ಸಂತೋಷ್ ಕಾಮಗೌಡ ಮಾತನಾಡಿ, ಸಮಾಜದ ಏಳಿಗೆಗಾಗಿ ಎಲೆಮರೆಯ ಕಾಯಿಗಳಂತೆ ಶ್ರಮಿಸುತ್ತಿರುವ ಅನೇಕರು ನಮ್ಮ ನಡುವೆಯೇ ಇದ್ದಾರೆ. ಪ್ರಚಾರ ಮತ್ತು ಪ್ರಶಸ್ತಿಗಳನ್ನು ಬಯಸದೇ ತಮ್ಮ-ತಮ್ಮ ಅಂತವರನ್ನು ಗುರುತಿಸುವ ಕಾರ್ಯ ಶ್ಲಾಘನೀಯ ಎಂದರು.
ಗಾಯಕಿ ಮೋನಮ್ಮ, ಶಿಕ್ಷಣ ಪ್ರೇಮಿ ರಮೇಶ್ ಬಲ್ಲಿದ್, ತಜ್ಞ ವೈದ್ಯ ಡಾ| ವೆಂಕಟೇಶ್ ವೈ.ನಾಯಕ, ಬ್ರೆಜಿಲ್‌ನಲ್ಲಿ ಹಿರಿಯ ಇಂಜಿನಿಯರ್ ಆಗಿರುವ ರಂಗಾರಾವ್ ದೇಸಾಯಿ, ರಾಯಚೂರು ವಿವಿ ಪತ್ರಿಕೋದ್ಯಮ ಉಪನ್ಯಾಸಕ ವಿಜಯ್ ಸರೋದೆ, ಇಫಾ ಫೌಂಡೇಶನ್ ಮಹ್ಮದ್ ಸಾಜೀದ್ ಸೇರಿ 15 ಸಾಧಕರಿಗೆ ಪ್ರಶಸ್ತಿ ವಿತರಿಸಲಾಯಿತು. ಡಾ| ಎ.ಪಿ.ಜೆ.ಅಬ್ದುಲ್ ಕಲಾಂ ಸಮಾಜ ಸೇವಾ ಸಂಸ್ಥೆಯ ಅಧ್ಯಕ್ಷ ವಿಶ್ವನಾಥ ರೆಡ್ಡಿ, ಸಾಯಿಕಿರಣ್ ಆದೋನಿ, ರಾಜೇಂದ್ರ ಎಸ್. ಶಿವಾಳೆ, ಅಮರೇಗೌಡ, ರಾಜಶೇಖರಪ್ಪ ಸಾಹುಕಾರ, ರಾಕೇಶ್ ರಾಜಲಬಂಡ ಸೇರಿ ಇತರರಿದ್ದರು.