ಹು.ಬಾ. ವಡ್ಡಟ್ಟಿ
ಮುಂಡರಗಿ: ತಾಲೂಕಿನ ಗ್ರಾಮೀಣ ಪ್ರದೇಶದಲ್ಲಿ ತಾಪಂ ಮತ್ತು ಜಿಪಂ ಚುನಾವಣೆಯ ಕ್ಷೇತ್ರ ಪುನರ್ವಿಂಗಡಣೆ ಪಟ್ಟಿ ರಾಜ್ಯಪತ್ರದಲ್ಲಿ ಪ್ರಕಟವಾಗಿದೆ. ಜನಸಂಖ್ಯೆ ಆಧರಿಸಿ ಜಿಪಂನ ಒಂದು ಸ್ಥಾನ ಹೆಚ್ಚಾಗಿದ್ದರೆ, ತಾಪಂನ ಕದಾಂಪೂರ, ಹೆಸರೂರು ಎರಡು ಸ್ಥಾನ ಕಡಿತಗೊಂಡಿವೆ.
ಕ್ಷೇತ್ರಗಳ ಪುನರ್ವಿಂಗಡಣೆಯಲ್ಲಿ ಜಿಪಂನ ಕಲಕೇರಿ ಕ್ಷೇತ್ರ ಹೆಚ್ಚಾಗಿರುವುದರಿಂದ ಚುನಾವಣೆಗೆ ಸ್ಪರ್ಧಿಸುವ ಆಕಾಂಕ್ಷಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ತಾಲೂಕಿನಲ್ಲಿ 19 ಗ್ರಾಪಂಗಳಿದ್ದು, ಈ ಗ್ರಾಪಂಗೆ ಅನುಗುಣವಾಗಿಯಾದರೂ ತಾಪಂ ಸ್ಥಾನಗಳು ಹೆಚ್ಚಾಗಬೇಕಿತ್ತು. ಜೊತೆಗೆ 19 ಗ್ರಾಪಂಗಳಿಗೆ 10 ತಾಪಂ ಸ್ಥಾನಗಳು ದೊರಕಬೇಕಿತ್ತು. ಕನಿಷ್ಠ ಇರುವ ತಾಪಂ 11 ಕ್ಷೇತ್ರಗಳನ್ನು ಉಳಿಸಿಕೊಳ್ಳಬೇಕಾಗಿತ್ತು ಎನ್ನುವುದು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿರುವ ವಿಷಯವಾಗಿದೆ.
ಡಂಬಳ ಹೋಬಳಿಯಲ್ಲಿ ಕದಾಂಪೂರ, ಮುಂಡರಗಿ ಹೋಬಳಿಯಲ್ಲಿ ಹೆಸರೂರು ಕ್ಷೇತ್ರಗಳು ಕಡಿತಗೊಂಡಂತಾಗಿದೆ. ಜಿಪಂ ಮತ್ತು ತಾಪಂ ಸ್ಥಾನಗಳು ಅಧಿಕೃತವಾಗಿ ತಾಲೂಕು ಆಡಳಿತ ಕಳುಹಿಸಿರುವ ಪ್ರಸ್ತಾವನೆಯಂತೆ, ತಾಲೂಕಿನಲ್ಲಿ ಈ ಹಿಂದೆ ಡಂಬಳ, ಹಿರೇವಡ್ಡಟ್ಟಿ, ಹಮ್ಮಿಗಿ ಮೂರು ಜಿಪಂ ಕ್ಷೇತ್ರಗಳು, ತಾಪಂನಲ್ಲಿ ಹನ್ನೊಂದು ಕ್ಷೇತ್ರಗಳು ಇದ್ದವು. ಅದರಂತೆ ಕಲಕೇರಿ ಜಿಪಂ ಒಂದು ಕ್ಷೇತ್ರ ಹೆಚ್ಚಾಗಿ, ನಾಲ್ಕು ಜಿಪಂ ಕ್ಷೇತ್ರಗಳು, ತಾಪಂನ ಹನ್ನೊಂದು ಸ್ಥಾನಗಳಲ್ಲಿ ಎರಡು ಕಡಿತಗೊಂಡು ಒಂಬತ್ತು ಸ್ಥಾನಕ್ಕೆ ಇಳಿಕೆಯಾಗಿವೆ.
ಜಿಪಂ ಹೆಚ್ಚುವರಿ ಸ್ಥಾನ: ಈಗಾಗಲೇ ಇರುವ ಜಿಪಂ ಕ್ಷೇತ್ರಗಳಲ್ಲಿ ಡಂಬಳ, ಹಿರೇವಡ್ಡಟ್ಟಿ, ಹಮ್ಮಿಗಿಯ ಜೊತೆಗೆ ಕಲಕೇರಿ ಜಿಪಂ ಸ್ಥಾನ ಹೊಸದಾಗಿ ಸೇರ್ಪಡೆಯಾಗಿರುವುದರಿಂದ ನಾಲ್ಕು ಕ್ಷೇತ್ರಗಳಾಗಿವೆ. ಈಗಿರುವ 11 ತಾಪಂ ಸ್ಥಾನಗಳಲ್ಲಿ ಎರಡು ಕಡಿತಗೊಂಡು ಒಂಬತ್ತು ಸ್ಥಾನಗಳಿಗೆ ಇಳಿಕೆಯಾಗಿದ್ದು, ತಾಪಂನ ಅಧಿಕಾರ ನಿಶ್ಯಕ್ತಗೊಂಡಂತಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಜಿಪಂನ ನಾಲ್ಕು ಸ್ಥಾನ-ಡಂಬಳ ಜಿಪಂ ಕ್ಷೇತ್ರ: ಡಂಬಳ, ಕದಾಂಪೂರ, ಶಿವಾಜಿನಗರ, ಡೋಣಿ, ಶಿವಾಜಿನಗರ, ಜಂತ್ಲಿ ಇವೆ. ಹಿರೇವಡ್ಡಟ್ಟಿ ಜಿಪಂ ಕ್ಷೇತ್ರ: ಹಿರೇವಡ್ಡಟ್ಟಿ, ಹಳ್ಳಿಕೇರಿ, ಮೇವುಂಡಿ, ಯಕ್ಲಾಸಪೂರ, ಆಲೂರು ಗ್ರಾಪಂಗಳು. ಹಮ್ಮಿಗಿ ಜಿಪಂ ಕ್ಷೇತ್ರ: ಹಮ್ಮಿಗಿ, ಕೋರ್ಲಹಳ್ಳಿ, ಶಿಂಗಟಾಲೂರು, ಹೆಸರೂರು ಬಿದರಹಳ್ಳಿ ಗ್ರಾಮ ಪಂಚಾಯಿತಿಗಳು ಇವೆ. ಕಲಕೇರಿ ಜಿಪಂ ಕ್ಷೇತ್ರ: ಕಲಕೇರಿ, ಬಾಗೇವಾಡಿ, ಮುರುಡಿ-ಮುರುಡಿತಾಂಡಾ, ಬೀಡನಾಳ, ಹಾರೋಗೇರಿ ಗ್ರಾಪಂಗಳು ಬರುತ್ತವೆ.
ಈ ನಾಲ್ಕು ಜಿಪಂ ಸ್ಥಾನಗಳಲ್ಲಿ ಮೀಸಲಾತಿ ಡಂಬಳ, ಹಿರೇವಡ್ಡಟ್ಟಿ, ಹಮ್ಮಿಗಿ, ಕಲಕೇರಿ ಕ್ಷೇತ್ರಗಳನ್ನು ಮಾತ್ರ ಘೋಷಣೆಯಾಗಿದ್ದು, ಇನ್ನೂ ಈ ಮೀಸಲಾತಿ ಪ್ರಕಟವಾಗಬೇಕಿದೆ. ತಾಪಂ ಕ್ಷೇತ್ರಗಳು; ಒಂಬತ್ತು ತಾಪಂ ಕ್ಷೇತ್ರ ವ್ಯಾಪ್ತಿಯಲ್ಲಿ ಕಡಿತಗೊಂಡ ಎರಡು ಕ್ಷೇತ್ರಗಳ ಪೈಕಿ ಕದಾಂಪೂರ ಜಂತ್ಲಿ ಕ್ಷೇತ್ರದಲ್ಲಿ ವಿಲೀನವಾಗಿದ್ದರೆ, ಹೆಸರೂರು ಕ್ಷೇತ್ರ ಕೋರ್ಲಹಳ್ಳಿಯಲ್ಲಿ ಲೀನವಾಗಿವೆ.