Advertisement

ಕಗ್ಗೋಡದಲ್ಲಿ ಕಂಗೊಳಿಸಲಿದೆ ಕಲಾಗ್ರಾಮ

12:50 PM Dec 20, 2018 | |

ವಿಜಯಪುರ: ಡಿ. 24ರಿಂದ ಆರಂಭಗೊಳ್ಳುವ ಎಂಟು ದಿನಗಳ ಭಾರತೀಯ ಸಂಸ್ಕೃತಿ ಉತ್ಸವಕ್ಕಾಗಿ ಕಗ್ಗೋಡ ಗ್ರಾಮದಲ್ಲಿ ಅಪರೂಪದ ಕಲಾಗ್ರಾಮ ನಿರ್ಮಾಣಗೊಳ್ಳುತ್ತಿದೆ. ಶಣರ ನಾಡಿನಲ್ಲಿ ಶರಣರ ಜೀವನ ಗಾಥೆ ಬಿಂಬಿಸುವ ಕಲಾಕೃತಿಗಳು ಜೀವ ಪಡೆಯುತ್ತಿದ್ದು ಹಬ್ಬದ ಸಂಭ್ರಮ ಇಮ್ಮಡಿಗೊಳಿಸಲು ಸಜ್ಜಾಗುತ್ತಿವೆ.

Advertisement

ಕಗ್ಗೋಡ ಗ್ರಾಮದಲ್ಲಿರುವ ಸಿದ್ದೇಶ್ವರ ಸಂಸ್ಥೆಯ ರಾಮನಗೌಡ ಬಸನಗೌಡ ಪಾಟೀಲ ಯತ್ನಾಳ ಗೋಸಂರಕ್ಷಣಾ ಕೇಂದ್ರದ ಸುತ್ತಲಿನ ಆವರಣದಲ್ಲಿ ಭಾರತೀಯ ಸಂಸ್ಕೃತಿ ಉತ್ಸವಕ್ಕಾಗಿ ಬೃಹತ್‌ ವೇದಿಕೆ ನಿರ್ಮಿಸುತ್ತಿದ್ದಾರೆ. ಇದರ ಪಕ್ಕದಲ್ಲೇ ಶರಣರು ಹಾಗೂ ಸಂತರ ವ್ಯಕ್ತಿತ್ವ ವಿವರಿಸುವ ಕಲಾಕೃತಿಗಳು ನಿರ್ಮಾಣಗೊಳ್ಳುತ್ತಿದ್ದು ಅಂತಿಮ ಸ್ಪರ್ಶ ಪಡೆಯುತ್ತಿವೆ.

ಬಸವಾದಿ ಶರಣರ ಹಲವು ಕಲಾಕೃತಿಗಳು ಅರಳುತ್ತಿದ್ದು, ಇಷ್ಟಲಿಂಗ ಪೂಜಾ ನಿರತ ಬಸವೇಶ್ವರ, ಮಹರ್ಷಿ ವಾಲ್ಮೀಕಿ ಮಾತ್ರವಲ್ಲ ವಿವಿಧ ಸಂತರ ಸುಂದರ ಮೂರ್ತಿಗಳು ಅರಳುತ್ತಿವೆ. ವೇದಿಕೆ ಪಕ್ಕದಲ್ಲೇ ಪ್ರತ್ಯೇಕವಾಗಿ ಬಸವೇಶ್ವರರು ತಮ್ಮ ಆರಾಧ್ಯ ಕೂಡಲಸಂಗಮನಾಥನಲ್ಲಿ ಐಕ್ಯರಾದ ಐಕ್ಯಮಂಟ ಅದಾಗಲೇ ಸಿದ್ಧಗೊಂಡಿದ್ದು, ನೋಡುಗರ ಚಿತ್ತ ಸೆಳೆಯುತ್ತಿದೆ. ಇದೆಲ್ಲಕ್ಕಿಂತ ಹೆಚ್ಚಾಗಿ ಗೋ ಸಂರಕ್ಷಣೆಗಾಗಿ ಬೃಹತ್‌ ನಂದಿಶ್ವರ ಜನ್ಮ ತಳೆಯುತ್ತಿದ್ದಾನೆ.

ಇದಲ್ಲದೇ ಸಿದ್ಧರಾಮ ಶರಣರ ಜೀವನ ವೃತ್ತಾಂತ ಹೇಳುವ ಹಲವು ಕಲಾಕೃತಿಗಳು ರೂಪುಗೊಳ್ಳುತ್ತಿದ್ದು,
ಶಿವದರ್ಶನಕ್ಕಾಗಿ ಕುರಿಗಾಯಿ ಸಿದ್ದರಾಮ ಗುಡ್ಡದಿಂದ ಹಾರುವ ಸನ್ನಿವೇಶವನ್ನು ಮನೋಜ್ಞವಾಗಿ ಹೇಳುವುದಕ್ಕೆ ಕೃತಕ ಬೆಟ್ಟವನ್ನೇ ಸೃಷ್ಟಿಸಲಾಗಿದೆ. ಸದರಿ ಬೆಟ್ಟದ ಮೇಲಿಂದ ಸಿದ್ದರಾಮ ಶರಣರು ಹಾರುವ ಸಂದರ್ಭದಲ್ಲಿ ಶಿವನೇ ಪ್ರತ್ಯಕ್ಷನಾಗಿ ಕೈ ಹಿಡಿದು ಕಾಪಾಡುವ ಸನ್ನಿವೇಶ ಅತ್ಯಂತ ಹೃದಯಸ್ಪರ್ಶಿಯಾಗಿದೆ.

ಕಗ್ಗೋಡ ಗ್ರಾಮದಲ್ಲಿ ಕಳೆದ ಎರಡು ವಾರಗಳಿಂದ ಬೀಡು ಬಿಟ್ಟಿರುವ ಬೆಂಗಳೂರಿನ ಪ್ರಕಾಶ ಶೆಟ್ಟಿ ನೇತೃತ್ವದ 50 ನುರಿತ ಕಲಾವಿದರ ತಂಡ ಕಗ್ಗೋಡ ಗ್ರಾಮದ ಕಲಾ ಗ್ರಾಮ ಸೃಷ್ಟಿಕೆಗೆ ಮುಂದಾಗಿದ್ದಾರೆ. ತಿಂಗಳ ಮೊದಲೇ ಬೆಂಗಳೂರಿನಲ್ಲಿ ಕಲಾಕೃತಿಗಳ ಮಾದರಿಗಳನ್ನು ಸಿದ್ಧಪಡಿಸಿಕೊಂಡು ತಂದಿರುವ ಕಲಾವಿದರ ತಂಡ, ಕಗ್ಗೋಡ
ಗ್ರಾಮದ ಕಲಾ ಗ್ರಾಮದಲ್ಲಿ ಅಂತಿಮ ರೂಪ ನೀಡುವ ಮೂಲಕ ಜೀವ ನೀಡುತ್ತಿದ್ದಾರೆ. 

Advertisement

ಇದಕ್ಕಾಗಿ ಹಗಲು-ರಾತ್ರಿ ಎನ್ನದೇ ಸ್ಥಳದಲ್ಲೇ ಕುಳಿತ ಕಲಾವಿದರು ಯುದ್ದೋಪಾದಿಯಲ್ಲಿ ಕಲಾಕೃತಿಗಳಿಗೆ ಜೀವ ತುಂಬುವ ಕೆಲಸದಲ್ಲಿ ತಲ್ಲೀರಾಗಿದ್ದಾರೆ. ಇದಕ್ಕಾಗಿ ಉತ್ಸವ ಸಮಿತಿ ಕಲಾವಿದರಿಗೆ ಸ್ಥಳದಲ್ಲೇ ಊಟ-ಉಪಹಾರ ವ್ಯವಸ್ಥೆ ಮಾಡುತ್ತಿದೆ. 

Advertisement

Udayavani is now on Telegram. Click here to join our channel and stay updated with the latest news.

Next