•
ಭೀಮರಾಯ ಕುಡ್ಡಳ್ಳಿ ಕಾಳಗಿ
ಕಾಳಗಿ: ಪಟ್ಟಣದ ವಾರ್ಡ್ ನಂ.2ರಲ್ಲಿ ಸುಮಾರು ಒಂದು ಲಕ್ಷ ಲೀಟರ್ ನೀರು ಹೊತ್ತು ನಿಂತ ಓವರ್ ಹೆಡ್ ಟ್ಯಾಂಕ್ ಸಂಪೂರ್ಣ ಶಿಥಿಲಗೊಂಡಿದ್ದು, ಕುಸಿಯುವ ಆತಂಕ ಎದುರಾಗಿದೆ.
ಸುಮಾರು 400ಕ್ಕೂ ಹೆಚ್ಚು ಮಕ್ಕಳು ಓದುತ್ತಿರುವ ಶಾಲಾ ಮೈದಾನದಲ್ಲೇ ಈ ಟ್ಯಾಂಕ್ ಇದೆ. ಅಪಾಯದ ಅರಿವಿದ್ದರೂ ಅಧಿಕಾರಿಗಳು, ಜನಪ್ರತಿನಿಧಿಗಳು ಕಾಳಜಿ ವಹಿಸದಿರುವುದು ಮಕ್ಕಳ ಪಾಲಕರು ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.
ಪಟ್ಟಣದ ಸರಕಾರಿ ಮಾದರಿ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಭಾರಿ ಗಾತ್ರದ ಈ ಟ್ಯಾಂಕ್ ಯಾವುದೇ ಕ್ಷಣದಲ್ಲಿಯೂ ನೆಲಕ್ಕೆ ಅಪ್ಪಳಿಸುವ ಸಾಧ್ಯತೆ ಇದೆ. ದಿನೇ ದಿನೇ ವಾಲುತ್ತಾ ಅಪಾಯದ ಮುನ್ಸೂಚನೆ ನೀಡುತ್ತಿದೆ. ಟ್ಯಾಂಕ್ ಕೆಳಗೆ ಶಾಲಾ ಕೋಣೆಗಳಿವೆ. ಭಯದ ವಾತಾವರಣದಲ್ಲಿ ಮಕ್ಕಳ ಆಟ-ಪಾಠ ನಡೆಯುತ್ತಿದೆ. ಇದರಿಂದ ಶಾಲೆಗೆ ಬರಲು ಮಕ್ಕಳು ಹೆದರುವಂತಾಗಿದೆ. ಟ್ಯಾಂಕ್‌ನ ಆಧಾರ ಸ್ತಂಭಗಳು ಸಂಪೂರ್ಣ ಬಿರುಕು ಬಿಟ್ಟಿವೆ. ಸಿಮೆಂಟ್ ಉದುರಿ ಕಬ್ಬಿಣದ ಸರಳುಗಳು ಹೊರಚಾಚಿವೆ. ಕಬ್ಬಣದ ಸರಳುಗಳು ತುಕ್ಕು ಹಿಡಿದು ಸತ್ವ ಕಳೆದುಕೊಂಡಿವೆ. ಅಲ್ಲದೇ ಟ್ಯಾಂಕ್ ಸೋರುತ್ತಿದೆ.
ಕಳೆದ ಐದಾರು ವರ್ಷಗಳಿಂದ ನಮ್ಮ ಕುಟುಂಬಗಳು ಆತಂಕದಲ್ಲಿ ಕಾಲ ಕಳೆಯುವಂತಾಗಿದೆ. ಟ್ಯಾಂಕ್ ಕುಸಿದರೆ ನಮ್ಮ ಇಡೀ ಕುಟುಂಬ ಸರ್ವ ನಾಶ ಆಗುತ್ತದೆ. ಈಗಾಗಲೇ ಅಪಾಯದ ಅಂಚಿಗೆ ತಲುಪಿರುವ ಟ್ಯಾಂಕಿಗೆ ನೀರು ತುಂಬಿಸುತ್ತಿರುವುದು ನಮಗೆ ಮತ್ತಷ್ಟು ಆತಂಕ ತಂದೊಡ್ಡಿದೆ. ಟ್ಯಾಂಕ್ ತೆರವಿಗೆ ಹಲವು ಬಾರಿ ಮನವಿ ಮಾಡಿದರೂ ಮೊದಲಿನ ಗ್ರಾಮ ಪಂಚಾಯತಿ ಆಡಳಿತ ಸ್ಪಂದಿಸಿಲ್ಲ. ನಿತ್ಯ ನೂರಾರು ಮಕ್ಕಳು ಟ್ಯಾಂಕ್ ಕೆಳಗೆ ಆಟವಾಡುತ್ತಾರೆ, ಅನಾಹುತ ಸಂಭವಿಸುವುದಕ್ಕಿಂತ ಮುಂಚೆ ಎಚ್ಚೆತ್ತುಕೊಳ್ಳಬೇಕು ಎನ್ನುತ್ತಾರೆ ಸ್ಥಳೀಯ ನಿವಾಸಿಗರು.
ಸ್ಥಳೀಯ ಪಟ್ಟಣ ಪಂಚಾಯತಿ ಶಿಥಿಲ ಟ್ಯಾಂಕ್‌ಗೆ ಪ್ರತಿ ದಿನ ಒಂದು ಲಕ್ಷ ಲೀಟರ್‌ಗೂ ಅಧಿಕ ನೀರು ಪೂರೈಕೆ ಮಾಡುತ್ತಿದೆ. ಇದು ಅಪಾಯದ ಭೀತಿ ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಯಾವುದೇ ಕ್ಷಣದಲ್ಲಿ ಮಕ್ಕಳು, ಸುತ್ತಮುತ್ತಲಿನ ನಿವಾಸಿಗಳ ಪ್ರಾಣಕ್ಕೆ ಸಂಚಕಾರ ತರುವ ನೀರಿನ ಟ್ಯಾಂಕ್‌ಗೆ ಮುಕ್ತಿ ನೀಡಬೇಕು. ಪರ್ಯಾಯವಾಗಿ ಸದ್ಗುರಪ್ಪಾ ದೇವಸ್ಥಾನ ಹತ್ತಿರ ಹೊಸದಾಗಿ ನಿರ್ಮಿಸಿರುವ ನೀರಿನ ಟ್ಯಾಂಕ್‌ನಿಂದ ಪ್ರತಿದಿನ ಕುಡಿಯಲು ನೀರು ಒದಗಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಶಿಥಿಲಗೊಂಡಿರುವ ನೀರಿನ ಓವರ್ ಹೆಡ್ ಟ್ಯಾಂಕ್ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಶೀಘ್ರವೇ ಕ್ರಮ ಕೈಗೊಳ್ಳಲಾಗುವುದು.
•
ವೆಂಕಟೇಶ ತೆಲಂಗ್,
ಮುಖ್ಯಾಧಿಕಾರಿ, ಪಟ್ಟಣ ಪಂಚಾಯತ, ಕಾಳಗಿ
ಶಿಥಿಲಗೊಂಡಿರುವ ನೀರಿನ ಟ್ಯಾಂಕ್ ಕೆಳಗೆ ದಿನನಿತ್ಯ ಆತಂಕದಲ್ಲಿ 400ಕ್ಕೂ ಹೆಚ್ಚು ಮಕ್ಕಳ ಆಟ-ಪಾಠ ನಡೆಯುತ್ತಿದೆ. ಈ ಕುರಿತಾಗಿ ಗ್ರಾ,ಪಂ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಗಮಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ.
•
ಮಹಾಂತೇಶ ಪಂಚಾಳ,
ಮುಖ್ಯಶಿಕ್ಷಕ, ಸರಕಾರಿ ಮಾದರಿ ಪ್ರಾಥಮಿಕ ಶಾಲೆ, ಕಾಳಗಿ