Advertisement
ಯಲ್ಲಾಪುರ: ಉತ್ತರ ಕನ್ನಡ ಜಿಲ್ಲೆಯ ಕಾಶ್ಮೀರ ಎಂದೇ ಕರೆಸಿಕೊಳ್ಳುತ್ತಿದ್ದ ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮ ಕುಂಭದ್ರೋಣ ಮಳೆಗೆ ಕೊಚ್ಚಿಹೋಗಿದೆ. ಪಶ್ಚಿಮ ಘಟ್ಟದ ತಪ್ಪಲಿನ ಈ ಸುಂದರ ಊರು ವರುಣನ ಆರ್ಭಟಕ್ಕೆ ಸಿಲುಕಿ ಮೂಲ ಸೌಂದರ್ಯವನ್ನೇ ಕಳೆದುಕೊಂಡು ಮಣ್ಣಿನಲ್ಲಿ ಮುಚ್ಚಿಹೋಗಿದೆ. ಇಲ್ಲಿನ ಜನರ ಬದುಕು ಅಕ್ಷರಶಃ ಚಿಂದಿಯಾಗಿದೆ.
Related Articles
Advertisement
ಸುಂದರ ಕಣಿವೆ, ಪ್ರಕೃತಿ, ಸೊಬಗು, ದೇವಾಲಯ, ಶಿವರಾಮ ಕಾರಂತರ ಕಳಚೆಯ ಕಲ್ಲು, ಯಕ್ಷಗಾನ, ನಾಟಕ, ಇದೆಲ್ಲವೂ ಇತಿಹಾಸ. ಈಗ ಗುಳೇ ಹೋಗುವ ಸ್ಥಿತಿ. ವಾಸ್ತವವಾಗಿ ಇರುವ ಒಂದು ಬದಿಯ ದಾರಿಯೂ ಕುಸಿದಿದ್ದರಿಂದಾಗಿ ಜನ ಹೊರಬಿದ್ದು ಹೋಗಲೂ ದಾರಿಯಿಲ್ಲ. ಸಂಪೂರ್ಣ ಕಳಚಿ ಬಿದ್ದ ಕಳಚೆ ಕಂಡರೆ ಯಾರಿಗಾದರೂ ಒಮ್ಮೆ ಕಣ್ತುಂಬಿ ಬರುತ್ತದೆ. ಮಳೆ ಅಂತಹ ನರಕವನ್ನು ಇಲ್ಲಿ ಸೃಷ್ಟಿಸಿದೆ.
ಊರು ಬಿಡುವುದೊಂದೇ ದಾರಿ: ಅಷ್ಟಕ್ಕೂ ಸದ್ಯ ಊರಿಗೆ ಯಾವ ದಾರಿಯೂ ಇಲ್ಲ. ಹೋಗಿದ್ದೆ ದಾರಿ. ಕೊಳ್ಳ ಹಿಡಿದು ಹೋಗುವುದೇ ದಾರಿ. ಕಿಲೋ ಮೀಟರ್ ವರೆಗೆ ಧರೆ ಜಾರಿದೆ. ನೆಲ ಗಟ್ಟಿಯಾಗಿದೆ ಎಂದು ಹೆಜ್ಜೆ ಹಾಕುವುದು ಕೂಡಾ ಕಷ್ಟ. ಪುನರ್ವಸತಿಯೇ ಇವರಿಗೆ ಪರಿಹಾರ ಎಂಬುದರಲ್ಲಿ ಎರಡು ಮಾತಿಲ್ಲ. ಆದರೆ ಆ ವ್ಯವಸ್ಥೆ ಎಂದೋ ಗೊತ್ತಿಲ್ಲ. ಸದ್ಯ ಒಂದೊಂದು ಮನೆಯವರು ಎಲ್ಲೆಲ್ಲೋ ಹೋಗುತ್ತಿದ್ದಾರೆ. ಎಲ್ಲೋ ಇದ್ದವರೂ ಸಣ್ಣಪುಟ್ಟ ನೌಕರಿ ದಂಧೆ ಮಾಡಿಕೊಂಡು ಊರಹೊರಗಿದ್ದವರೂ ಲಾಕ್‌ಡೌನ್‌ಎಂದು ಊರಿಗೆ ಬಂದು ಸೇರಿಕೊಂಡಿದ್ದಾರೆ. ಈಗ ಅವರೆಲ್ಲ ಮುಂದಿನ ದಿಕ್ಕುಕಾಣದೆ ತಲೆ ಮೇಲೆ ಕೈ ಹೊತ್ತು ಕಾಡ ಮಧ್ಯದಲ್ಲೇ ಕುಳಿತಿದ್ದಾರೆ. ಈ ಊರಿನಲ್ಲಿರುವವರಿಗೆ ಈಗ ಹಗಲು ರಾತ್ರಿ ಎರಡೂ ಒಂದೇ. ವಿದ್ಯುತ್, ನೀರು, ದೂರವಾಣಿ ಯಾವ ಸಂಪರ್ಕವೂ ಇಲ್ಲ. ಎಷ್ಟೋ ಕುಟುಂಬಗಳು ನೆಂಟರ ಮನೆ ಸೇರಿದ್ದಾರೆ. ದನಕರುಗಳು ಕೂಡಾ ಅವರೊಂದಿಗೆ ಸೇರಿಕೊಂಡಿವೆ. ಎಲ್ಲೋ ಗಂಜಿಕೇಂದ್ರ ಮಾಡಿಕೊಂಡು ಉಳಿಯುವುದಕ್ಕೂ ವ್ಯವಸ್ಥೆಯ ದೃಷ್ಟಿಯಿಂದ ಸಾಧ್ಯವಿಲ್ಲ. ಸಂಪರ್ಕವಿಲ್ಲದ ಊರಲ್ಲಿ ಸಾಧ್ಯವಿಲ್ಲದ್ದೇ ಹೆಚ್ಚಾಗಿದೆ. ಮಳೆಯಿಂದ ಕೆಲವೆಡೆ ತೋಟ ಮುಳುಗಿದ್ದರೆ ಮನೆ ಚೆನ್ನಾಗಿದೆ. ಮನೆ ಮುಳುಗಿದ್ದರೆ ತೋಟ ಚೆನ್ನಾಗಿದೆ. ಆದರೆ ಕಳಚೆಯಲ್ಲಿ ಇವೆರಡನ್ನೂ ಕಿತ್ತುಕೊಂಡಿದೆ. ಮುಂದೆ ಬದುಕಬಹುದೆಂಬ ಧೈರ್ಯವೂ ಜನರಲ್ಲಿಲ್ಲವಾಗಿದೆ. ಅತಂತ್ರವಾಗುತ್ತಿರುವ ಬದುಕಿಗೆ ದಾರಿ ಯನ್ನು ಸರಕಾರವೇ ತೋರಿಸಬೇಕಿದೆ.
ಬೇಕಿದೆ ನೆರವಿನ ಹಸ್ತ: ಕಳಚೆಯ ಪುನರ್ ಸೃಷ್ಟಿ ಸಾಧ್ಯವಿಲ್ಲ. ಆದರೆ ಮುಂದೆಲ್ಲಿ ಎಂಬುದು ಪ್ರಶ್ನೆಯಂತೂ ಹೌದು. ನಮ್ಮನ್ನಾಳುವವರು ಭೇಟಿ ಸಾಂತ್ವನ ಈ ಎಲ್ಲಕ್ಕಿಂತ ತುರ್ತಾಗಿ ಮುಂದೇನು? ಎಂಬ ಬಗ್ಗೆ ಒಟ್ಟಾಗಿ ಯೋಚಿಸುವ ಅಗತ್ಯತೆ ಇದೆ. ಮುಖ್ಯಮಂತ್ರಿಗಳೇ ಈ ನರಕಸದೃಶ್ಯ ಪ್ರದೇಶಕ್ಕೆ ಬಂದು ನೋಡಿದ್ದಾರೆ. ಹೀಗಾಗಿ ಕತ್ತಲೆಯ ಬದುಕಿಗೆ ಏನಾದರೊಂದು ಬೆಳಕು ಸಿಗಬಹುದು ಎಂಬುದು ಈ ಊರಿನ ಜನರ ಆಸೆ. ಆದರೆ ಎಲ್ಲವೂ ಹೊಸದಾಗಿ ಆಗುವವರೆಗೆ ಈ ಊರಿಗೆ ಜನರಿಗೆ ದಿಕ್ಕು ಯಾರು ಎಂಬುದೇ ಯಕ್ಷ ಪ್ರಶ್ನೆ. ಮಳೆಯಿಂದ ಕೊಂಡಿ ಕಳಚಿ ಬಿದ್ದು ಹೋದ ಕಳಚೆಯ ಜನರಿಗೆ ಈಗ ಜನರೇ ಆಸರೆ. ಅಧಿಕಾರಿಗಳು, ಉಳ್ಳವರು ಇಲ್ಲಿಯ ಜನರಿಗೆ ಧೈರ್ಯ ತುಂಬಿ ಸಹಾಯ ಮಾಡಿ ಮಾನವೀಯತೆ ಮೆರೆಯಲು ಇದು ಸಕಾಲವಾಗಿದೆ.