Advertisement
ಚಿತ್ತಾಪುರ ತಾಲೂಕಿನಾಧ್ಯಂತ ಕೊಳೆತ ಹೆಸರು ಬೆಳೆಗಳದ್ದೇ ದರ್ಶನ. ವಾಡಿ, ನಾಲವಾರ, ಸನ್ನತಿ, ರಾವೂರ ವಲಯದಲ್ಲಿ ಭೂಮಿಯ ತೇವಾಂಶ ಅತಿಹೆಚ್ಚಳದಿಂದ ಹೆಸರು ಬೆಳೆಯ ಹಸಿರೆಲೆಗಳಿಗೆ ಹಳದಿ ರೋಗ ಬಾಧಿಸಿದ್ದು, ರೈತರನ್ನು ಚಿಂತೆಗೀಡು ಮಾಡಿದೆ. ಕೆಸರಿನ ಹೂಳಿನಲ್ಲಿ ಕೊಳೆತು ಹಾಳಾದ ಫಸಲಿಂದಾಗಿ ಇಳುವರಿಗೆ ಕುತ್ತು ಬಂದೆರೆಗಿದೆ. ನೀರು ಹೊತ್ತು ನಿಂತ ಹೊಲಗಳಲ್ಲಿನ ಹೆಸರು ಬೆಳೆಯ ಹಸಿರೆಲೆಗಳು ಹಳಿದಿ ಬಣ್ಣಕ್ಕೆ ಮರಳಿದ್ದು ಒಂದೆಡೆಯಾದರೆ, ಪ್ರವಾಹಕ್ಕೆ ಸಿಲುಕಿ ನರಳಿದ ಸಾವಿರಾರು ಎಕರೆ ಕೃಷಿ ಭೂಮಿಗಳ ಮೇಲೆ ಹಸಿ ಬರದ ಛಾಯೆ ಮೂಡಿದೆ.
Related Articles
Advertisement
ಹಳದಿ ರೋಗದಿಂದ ಶೇ.5೦ ರಷ್ಟು ಇಳುವರಿ ನಷ್ಟ ಉಂಟಾಗಿದೆ. ತಗ್ಗು ಪ್ರದೇಶದ ಜಮೀನುಗಳಲ್ಲಿ ಬೆಳೆ ಸಂಪೂರ್ಣ ನಾಶವಾಗಿ ಶೇ.100 ರಷ್ಟು ನಷ್ಟದ ಹೊಡೆತ ಬಿದ್ದಿದೆ. ಮಳೆಯ ನಂತರ ಬೆಳೆ ವೀಕ್ಷಣೆ ಮತ್ತು ಹಾನಿ ಸರ್ವೆಗೆ ಮುಂದಾಗಬೇಕಿದ್ದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ರೈತರ ಕಷ್ಟದೆಡೆಗೆ ಬೆನ್ನು ತಿರುಗಿಸಿರುವುದು ಅತ್ಯಂತ ಶೋಚನೀಯ.
“ವಿಪರೀತ ಮಳೆಯಿಂದಾಗಿ ನಾಲವಾರ ಕೃಷಿ ಸಂಪರ್ಕ ಕೇಂದ್ರ ವ್ಯಾಪ್ತಿಯಲ್ಲಿ ಸುಮಾರು ೫೧೫೨ ಹೆಕ್ಟೆರ್ ಪ್ರದೇಶದಲ್ಲಿ ಬೆಳೆ ನಷ್ಟ ಉಂಟಾಗಿದೆ. ವಿವಿಧ ರೀತಿಯ ರೋಗ ಬಾಧೆಯಿಂದ ಹೆಸರು ಹಾಳಾಗಿದೆ. ತೇವಾಂಶ ಹೆಚ್ಚಾಗಿ ಬೆಳೆ ಚೇತರಿಸಿಕೊಳ್ಳದೆ ತೊಗರಿ ಫಸಲು ಸಂಪೂರ್ಣ ಕೊಳೆತುಹೋಗಿದೆ. ತೊಗರಿ ಮರು ಬಿತ್ತನೆಗಾಗಿ ಸಕಾಲದಲ್ಲಿ ಬೇಡಿಕೆಯಿದ್ದಷ್ಟು ರೈತರಿಗೆ ಬೀಜ ವಿತರಣೆ ಮಾಡಿದ್ದೇವೆ. ಅಂದಾಜು ರೂಪದಲ್ಲಿ ಈಗಾಗಲೇ ಬೆಳೆ ನಷ್ಟದ ಪಟ್ಟಿ ತಯಾರಿಸಿದ್ದೇವೆ. ತೊಗರಿ 3460 ಹೆಕ್ಟೆರ್, ಹೆಸರು 1120ಹೆಕ್ಟೆರ್, ಉದ್ದು 92 ಹೆಕ್ಟೆರ್ ಹಾಗೂ ೪೮೦ ಹೆಕ್ಟೆರ್ ಹತ್ತಿ ಬೆಳೆ ನಷ್ಟದ ವರಿದಿಯನ್ನು ಸಿದ್ಧಪಡಿಸಿ ಸರಕಾರಕ್ಕೆ ಸಲ್ಲಿಸಿದ್ದೇವೆ. ಬೆಳೆ ಪರಿಹಾರ ನಿರೀಕ್ಷೆಯಲ್ಲಿ ರೈತರಿದ್ದು, ಸರಕಾರ ಸೂಕ್ತ ನಿರ್ಧಾರ ಕೈಗೊಳ್ಳಲಿದೆ.”
– ಸತೀಶಕುಮಾರ ಪವಾರ.
ಕೃಷಿ ಅಧಿಕಾರಿ. ರೈತ ಸಂಪರ್ಕ ಕೇಂದ್ರ ನಾಲವಾರ