Advertisement

ಅವರ್‌ ಬಿಟ್‌ ಇವರು, ಇವರ್‌ ಬಿಟ್‌ ಅವರು!

02:58 PM Feb 11, 2022 | Team Udayavani |

ಸಿಂಧನೂರು: ಕಲಬುರಗಿ ವಿದ್ಯುತ್ಛಕ್ತಿ ಸರಬರಾಜು ಕಂಪನಿಯ ಇಲ್ಲಿನ ಕಾರ್ಯನಿರ್ವಾಹಕ ಎಂಜಿನಿಯರ್‌ ಕಚೇರಿಯಲ್ಲಿ ಎಇಇ ಹುದ್ದೆಗೆ ಸಂಬಂಧಿಸಿ ಭಾರಿ ಕುತೂಹಲ, ಕೋಲಾಹಲ ಸೃಷ್ಟಿಯಾದ ಪ್ರಸಂಗ ಬೆಳಕಿಗೆ ಬಂದಿದೆ.

Advertisement

ಇಲ್ಲಿನ ಜೆಸ್ಕಾಂ ಕಚೇರಿಯಲ್ಲಿ ಹಾಲಿ ಮಲ್ಲಿಕಾರ್ಜುನ ಎನ್ನುವವರು ಎಇಇ ಹುದ್ದೆಯಲ್ಲಿ ಕಾರ್ಯಭಾರದಲ್ಲಿದ್ದು, ಇದೇ ಹುದ್ದೆಗೆ ದಾವಲಸಾಬ್‌ ಅವರು ಕೂಡ ಕೋರ್ಟ್‌ ಆದೇಶದ ಪ್ರಕಾರ ಎಇಇ ಎಂದು ಆಗಮಿಸಿದ್ದರಿಂದ ಸಿಬ್ಬಂದಿಯಲ್ಲಿ ಗೊಂದಲ ಮೂಡಿತು.

ಕಳೆದ ಡಿಸೆಂಬರ್‌ನಿಂದ ಇಲಾಖೆ ಆಡಳಿತಾತ್ಮಕ ನಿರ್ಧಾರಗಳು ಇಂತಹ ಗೊಜಲು ಸೃಷ್ಟಿಸುತ್ತಿದ್ದು, ಕೋರ್ಟ್‌ ಮೆಟ್ಟಿಲೇರುವ ಮೂಲಕ ತರುತ್ತಿರುವ ಆದೇಶಗಳು ಕುರ್ಚಿ ಅದಲು-ಬದಲು ಮಾಡಲಾರಂಭಿಸಿವೆ.

ಏನಿದು ಎಇಇ ಕುರ್ಚಿ ಗುದ್ದಾಟ?

ಇಲ್ಲಿನ ಜೆಸ್ಕಾಂ ಎಇಇ ಹುದ್ದೆಯಲ್ಲಿದ್ದ ದಾವಲಸಾಬ್‌ ಅವರನ್ನು ಸೇಡಂ, ಲಿಂಗಸುಗೂರಿನಲ್ಲಿದ್ದ ಮಲ್ಲಿಕಾರ್ಜುನ ಅವರನ್ನು ಸಿಂಧನೂರಿಗೆ ವರ್ಗಾಯಿಸಿ ಕೆಪಿಟಿಸಿಎಲ್‌ ಮಾನವ ಸಂಪನ್ಮೂಲ ಕಚೇರಿ ಡಿಸೆಂಬರ್‌ 23,2021ರಂದು ಆದೇಶ ಹೊರಡಿಸಿತ್ತು. ಆ ಬಳಿಕ ಮಲ್ಲಿಕಾರ್ಜುನ ಅವರು ಚಾರ್ಜ್‌ ಪಡೆದಿದ್ದರು. ಈ ಆದೇಶವನ್ನು ಕೆಪಿಟಿಸಿಎಲ್‌ ಮಾನವ ಸಂಪನ್ಮೂಲ ಆಡಳಿತ ವಿಭಾಗದ ಮೂಲಕ ಯಥಾಸ್ಥಿತಿ ಮಾರ್ಪಡಿಸಿದ್ದರಿಂದ ಮತ್ತೆ ದಾವಲ್‌ಸಾಬ್‌ ವರ್ಗವಾಗಿದ್ದರು. ಈ ಆದೇಶವನ್ನು ಪ್ರಶ್ನಿಸಿ ಮಲ್ಲಿಕಾರ್ಜುನಗೌಡ ಅವರು, ಕೋರ್ಟ್‌ ಮೇಟ್ಟಿಲೇರಿ ತಡೆ ತಂದಿದ್ದರು. ಇದೇ ಆದೇಶವನ್ನು ತೆರವು ಮಾಡಿಸುವ ಮೂಲಕ ಹಿಂದಿನ ಆದೇಶ ಮುಂದುವರಿಸಲು ದಾವಲಸಾಬ್‌ ಆದೇಶ ತಂದು, ಗುರುವಾರ ಕಚೇರಿಗೆ ಹಾಜರಾದರು. ಸಹಜವಾಗಿಯೇ ಒಂದೇ ಕುರ್ಚಿಗೆ ಸಂಬಂಸಿ ಇಬ್ಬರು ಎಇಇಗಳನ್ನು ಕಂಡು ಕಚೇರಿ ಸಿಬ್ಬಂದಿ ದಿಗಿಲುಗೊಂಡರು.

Advertisement

ಜಟಾಪಟಿ ತೀವ್ರ

ಎಇಇ ಹುದ್ದೆಗೆ ಸಂಬಂಧಿಸಿ ಇಬ್ಬರು ಅಧಿಕಾರಿಗಳು ಜಿದ್ದಿಗೆ ಬಿದ್ದಿರುವುದರಿಂದ ಜೆಸ್ಕಾಂ ವಲಯದಲ್ಲಿ ಚರ್ಚೆ ಕಾವೇರಿವೆ. ಎಇಇ ದಾವಲಸಾಬ್‌ ಅವರು ತಾವು ಚಾರ್ಜ್‌ ನೀಡದೇ ಇದ್ದರೂ, ಮಲ್ಲಿಕಾರ್ಜುನ ಅವರು ಕಚೇರಿ ಚಾರ್ಜ್‌, ಸರಕಾರಿ ಬಿಎಸ್ಸೆನ್ನೆಲ್‌ ಸಿಮ್‌, ಸರಕಾರಿ ಬಾಡಿಗೆ ಕಾರು ಉಪಯೋಗಿಸುತ್ತಿದ್ದಾರೆಂಬ ಬಗ್ಗೆ ಧ್ವನಿ ಎತ್ತಿದ್ದಾರೆಂದು ಹೇಳಲಾಗಿದೆ. ನಿಯಮದ ಪ್ರಕಾರ ಚಾರ್ಜ್‌ ತೆಗೆದುಕೊಂಡು ಮುಂದಿನ ಆದೇಶದ ಪ್ರಕಾರ ನಡೆದುಕೊಳ್ಳುವುದಾಗಿ ಮಲ್ಲಿಕಾರ್ಜುನ ಅವರು ಕಾದು ನೋಡುವ ತಂತ್ರದ ಮೊರೆ ಹೋಗಿದ್ದಾರೆ. ಇಬ್ಬರು ಅಧಿಕಾರಿಗಳ ನಡೆ ಕಚೇರಿ ವಲಯದಲ್ಲಿ ಗೊಂದಲಕ್ಕೆ ಕಾರಣವಾಗಿದೆ.

ಜೆಸ್ಕಾಂ ಕಚೇರಿ ಅನುಮಾನದ ಹುತ್ತ ಅಧಿಕಾರಿಗಳ ನಡುವೆ ಏರ್ಪಟ್ಟಿರುವ ಗುಂಪುಗಾರಿಕೆ, ಬಣಗಾರಿಕೆಯಿಂದ ಕಚೇರಿಯೊಳಗಿನ ವಾತಾವರಣ ಕೆಟ್ಟಿದೆ ಎಂಬ ಮಾತು ನಿಷ್ಠಾವಂತ ಸಿಬ್ಬಂದಿಯಿಂದ ಕೇಳಿಬರುತ್ತಿವೆ. ಅಲ್ಲದೇ ಒಬ್ಬರನ್ನು ಮಾತನಾಡಿಸಿದರೆ, ಮತ್ತೂಬ್ಬರಿಗೆ ಸಿಟ್ಟು. ಹೀಗಾಗಿ ಯಾರನ್ನೂ ಮಾತನಾಡಿಸದ ಸ್ಥಿತಿ ಒದಗಿ ಬಂದಿದೆ ಎಂದು ಅಳಲು ತೋಡಿಕೊಳ್ಳುತ್ತಿದ್ದಾರೆ.

ಎಇಇ ದಾವಲಸಾಬ್‌ ಅವರು ಕೋರ್ಟ್‌ ಆದೇಶ ಬಂದಿದೆ ಎಂದು ಕೊಟ್ಟಿದ್ದಾರೆ. ಅವರು ಮ್ಯಾನೇಜಿಂಗ್‌ ಡೈರೆಕ್ಟರ್‌, ನಿರ್ದೇಶಕರನ್ನು ಪಾರ್ಟಿ ಮಾಡಿದ್ದಾರೆ. ಈ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದು, ಅವರ ಸಲಹೆಯಂತೆ ನಡೆದುಕೊಳ್ಳಬೇಕಿದೆ. -ರಾಜೇಶ ಶರ್ಮಾ, ಇಇ, ಜೆಸ್ಕಾ ಉಪವಿಭಾಗೀಯ ಕಚೇರಿ, ಸಿಂಧನೂರು

-ಯಮನಪ್ಪ ಪವಾರ

Advertisement

Udayavani is now on Telegram. Click here to join our channel and stay updated with the latest news.

Next