ಕಲಬುರಗಿ: ಮಲ್ಲಿಕಾರ್ಜುನ ಖರ್ಗೆ 50 ವರ್ಷದಿಂದ ಅಧಿಕಾರದಲ್ಲಿದ್ದರೂ ಈ ಭಾಗ ಏಕೆ ಹಿಂದುಳಿಯಿತು? ಜಿಲ್ಲೆಯ ಸಮಗ್ರ ಅಭಿವೃದ್ಧಿ ಬದಲು ಕೇವಲ ತಮ್ಮ ಅಭಿವೃದ್ಧಿ ಮಾಡಿಕೊಂಡಿರುವುದೇ ಸಾಧನೆಯಾಗಿದೆ ಎಂದು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಷ್ಟ್ರೀಯ ಉಪಾಧ್ಯಕ್ಷ ಶಿವರಾಜಸಿಂಗ್ ಚವ್ಹಾಣ ಟೀಕಿಸಿದರು.
ಮಂಗಳವಾರ ನಗರದ ಸೂಪರ್ ಮಾರ್ಕೆಟ್, ಗಣೇಶ ನಗರದಲ್ಲಿ ರೋಡ ಶೋ ನಡೆಸಿ ಮಾತನಾಡಿದ ಅವರು, ಕಲಬುರಗಿ ಸಮಗ್ರ ವಿಕಾಸ ಹಾಗೂ ಹೊಸ ಯೋಜನೆಗಳು ಬರುವಂತಾಗಲು ಈ ಸಲ ಬಿಜೆಪಿ ಅಭ್ಯರ್ಥಿ ಡಾ| ಉಮೇಶ ಜಾಧವ ಅವರನ್ನು ಗೆಲ್ಲಿಸುವಂತೆ ಮನವಿ ಮಾಡಿದರು. ಈ ಹಿಂದೆ ಯುಪಿಎ ಸರ್ಕಾರ ಇದ್ದಾಗ ಮುಂಬೈ ದಾಳಿಯಾದಾಗ ಉಗ್ರರ ವಿರುದ್ಧ ಏನೂ ಕ್ರಮ ಕೈಗೊಳ್ಳಲಿಲ್ಲ.
ಉಗ್ರರಿಗೆ ಬಿರಿಯಾನಿ ತಿನ್ನಿಸಿದ್ದೇ ಇವರ ಸಾಧನೆ. ಆದರೆ ಇವತ್ತು ಮೋದಿ ಸರ್ಕಾರ ಪುಲ್ವಾಮಾ ದಾಳಿ ಖಂಡಿಸಿ ಏರ್ ಸ್ಟ್ರೆಕ್ ಮಾಡಿ ಸುಮಾರು 400ಕ್ಕಿಂತ ಹೆಚ್ಚು ಉಗ್ರರಿಗೆ ತಕ್ಕಪಾಠ ಕಲಿಸಿದ್ದಾರೆ. ಇಡೀ ವಿಶ್ವವೇ ಮೆಚ್ಚುಗೆ ವ್ಯಕ್ತಪಡಿಸಿದರೆ ನಮ್ಮ ವಿರೋಧ ಪಕ್ಷಗಳು ಸಾಕ್ಷಿ ಕೇಳುತ್ತಿರುವುದು ದುರಂತ ಎಂದು ವಾಗ್ಧಾಳಿ ನಡೆಸಿದರು.
ಇನ್ನೂ ರಾಜ್ಯದ ಸಿಎಂ ಎಚ್.ಡಿ. ಕುಮಾರಸ್ವಾಮಿ ಯಾವಾಗಲೂ ಅಳುತ್ತಾರೆ. ಇಂತಹ ಅಳುವ ಸಿಎಂನ್ನು ತಾವೆಂದೂ ನೋಡಿಲ್ಲ. ಅವರಿಗೆ ಏನಿದ್ದರೂ ರಾಜ್ಯದ ಹಿತಕ್ಕಿಂತ ತಮ್ಮ ಕುಟುಂಬವೇ ಹಿತವೆನಿಸುತ್ತಿದೆ ಎಂಬುದು ರಾಜ್ಯದ ಜನರಿಗೆ ಈಗಾಗಲೇ ಮನವರಿಕೆಯಾಗಿದೆ ಎಂದರು. ಮಹಾಘಟಬಂದನ್ ದಿನೇ-ದಿನೇ ಕುಸಿಯುತ್ತಿದೆ. ಯಾರು ಈ ದೇಶದ ಪ್ರಧಾನಿಯಾಗುತ್ತಾರೆಂದು ಗೊತ್ತಿಲ್ಲ.
ಮಾಯಾವತಿ, ಚಂದ್ರಬಾಬು ನಾಯ್ಡು, ದೇವೇಗೌಡ ಸೇರಿದಂತೆ ದಿನಕ್ಕೊಬ್ಬರು ಆಡಳಿತ ನಡೆಸಬಹುದು. ಆದರೆ ಕೇಂದ್ರದಲ್ಲಿ ಬಿಜೆಪಿ ಮತ್ತೂಮ್ಮೆ ಸುಭದ್ರ ಸರ್ಕಾರವಾಗಿ ಹೊರಹೊಮ್ಮಲಿದೆ. ಪ್ರಣಾಳಿಕೆ ದೇಶದ ಅಭಿವೃದ್ಧಿಪೂರಕವಾಗಿವೆ ಎಂದು ಹೇಳಿದರು.
ಲೋಕಸಭಾ ಅಭ್ಯರ್ಥಿ ಡಾ| ಉಮೇಶ ಜಾಧವ, ಮಾಜಿ ಸಚಿವ ಮಾಲೀಕಯ್ಯ ವಿ. ಗುತ್ತೇದಾರ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಿ.ಜಿ.ಪಾಟೀಲ, ಬಸವರಾಜ ಮತ್ತಿಮಡು, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ, ಎಂಎಸ್‌ಐಎಲ್ ಮಾಜಿ ಅಧ್ಯಕ್ಷ ಡಾ| ವಿಕ್ರಂ ವೈಜನಾಥ ಪಾಟೀಲ ಮುಂತಾದವರಿದ್ದರು.