Advertisement

ಯಶಸ್ವಿಗೆ ಪಂಚ ಸೂತ್ರ ಅಳವಡಿಸಿಕೊಳ್ಳಿ

11:13 AM Nov 07, 2019 | Naveen |

ಕಲಬುರಗಿ: ಮನುಷ್ಯ ತನ್ನ ಜೀವನದಲ್ಲಿ ಶಿಸ್ತು, ಶ್ರದ್ಧೆ, ವೃತ್ತಿ, ಪ್ರಾಮಾಣಿಕತನ, ಸತತ ಪ್ರಯತ್ನ ಎನ್ನುವ ಪಂಚ ಸೂತ್ರ ಅಳವಡಿಸಿಕೊಂಡರೆ ಮಾತ್ರ ಯಶಸ್ಸು ಕಾಣಲು ಸಾಧ್ಯ ಎಂದು ಕ್ಲಾರಿಯೋನೇಟ್‌ ವಾದಕ ಡಾ| ಪಂಡಿತ ನರಸಿಂಹಲು ವಡವಾಟಿ ಹೇಳಿದರು.

Advertisement

ಗುಲಬರ್ಗಾ ವಿಶ್ವವಿದ್ಯಾಲಯದ ಡಾ| ಬಿ.ಆರ್‌. ಅಂಬೇಡ್ಕರ್‌ ಭವನದಲ್ಲಿ ಬುಧವಾರದಿಂದ ಆರಂಭವಾದ ಮೂರು ದಿನಗಳ ಅಂತರ್‌ ಮಹಾವಿದ್ಯಾಲಯಗಳ ಯುವಜನೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಓದಿ ಡಾಕ್ಟರ್‌, ಇಂಜಿನಿಯರ್‌ ಅಥವಾ ಮತ್ತೂಂದಾಗಿ ಬಾಳುವುದಲ್ಲ. ಓದಿನ ಜತೆಗೆ ಸಂಸ್ಕಾರವೂ ಇರಬೇಕು. ವಿದ್ಯಾವಂತರಿಗೆ ಸಂಸ್ಕಾರವೇ ಇರದಿದ್ದರೆ, ಅವನು ಬುದ್ಧಿವಂತ ಪಿಶಾಚಿ ಆಗುತ್ತಾನೆ. ಮಹಾನ್‌ ನಾಯಕರ, ಸಾಧಕರ ಪುಸಕ್ತಗಳನ್ನು ಓದಿ, ಧಾರ್ಮಿಕ ವಿಚಾರಗಳನ್ನು ತಿಳಿದುಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

ವ್ಯಕ್ತಿ ಮತ್ತು ಮನಸ್ಸಿನ ನಡುವೆ ವ್ಯತ್ಯಾಸ ಇದೆ. ಸನ್ನಿವೇಶಕ್ಕೆ ಅನುಗುಣವಾಗಿ ಮನಸ್ಸು ಬದಲಾಗಬಹುದು. ಆದರೆ, ವ್ಯಕ್ತಿ ಬದಲಾಗಲಾರ. ವ್ಯಕ್ತಿತ್ವ ನಿರ್ಮಾಣ ಮಾಡಿಕೊಳ್ಳಲು ಸ್ವಾಮಿ ವಿವೇಕಾನಂದರ ಪುಸ್ತಕಗಳನ್ನು ಓದಿ. ಜೀವನದಲ್ಲಿ ಎದುರಾಗುವ ಅಡೆ-ತಡೆಗಳನ್ನು ಮೆಟ್ಟಿ ನಿಲ್ಲಲು ಅಬ್ರಾಹಂ ಲಿಂಕನ್‌ರ ಜೀವನ ಚರಿತ್ರೆ ಓದಬೇಕು ಎಂದರು.

ಜೀವನದಲ್ಲಿ ಛಲ ಇರಬೇಕು. ಛಲ ಅಳವಡಿಸಿಕೊಂಡರೆ ದೊಡ್ಡ ಸಾಧನೆ ಮಾಡಲು ಸಾಧ್ಯ. ಗುರುಗಳ ಅಂತಃಕರಣದಿಂದ ಆರ್ಶೀವಾದ ಪಡೆಯುವ ಶಿಷ್ಯರಾಗಬೇಕು. ಸಣ್ಣ ಕನಸು ಕಾಣುವ ಬದಲು ದೊಡ್ಡ ಕನಸು ಕಾಣಬೇಕು. ಏನಾದರೂ ಸಾಧಿಸುತ್ತೇನೆಂಬ ಹುಚ್ಚುತನ ಹೊಂದಿದ್ದರೆ ಮಾತ್ರ ಸಾಧಿಸಲು ಸಾಧ್ಯವಾಗುತ್ತದೆ ಎಂದು ಪ್ರತಿಪಾದಿಸಿದರು.

Advertisement

ಅಧ್ಯಕ್ಷತೆ ವಹಿಸಿದ್ದ ಕುಲಪತಿ ಪ್ರೊ| ಪರಿಮಳಾ ಅಂಬೇಕರ್‌ ಮಾತನಾಡಿ, ಗುವಿವಿ ವ್ಯಾಪ್ತಿಯಲ್ಲಿ ಸುಮಾರು 490 ವಿದ್ಯಾಲಯಗಳು ಬರುತ್ತವೆ. ಆದರೆ, ಪ್ರತಿ ವರ್ಷವೂ ಕೇವಲ 25ರಿಂದ 30 ಕಾಲೇಜುಗಳು ಮಾತ್ರ ಭಾಗವಹಿಸುವುದು ದುಃಖದ ಸಂಗತಿ. ಮುಂದಿನ ದಿನಗಳಲ್ಲಾದರೂ ಹೆಚ್ಚಿನ ವಿದ್ಯಾಲಯಗಳು ಪಾಲ್ಗೊಳ್ಳಲಿ ಎನ್ನುವ ಆಶಯ ವ್ಯಕ್ತಪಡಿಸಿದರು.

ಕನ್ನಡ ಅಧ್ಯಯನ ಮತ್ತು ಸಂಶೋಧನಾ ಸಂಸ್ಥೆ ನಿರ್ದೇಶಕ ಪ್ರೊ|ಎಚ್‌.ಟಿ.ಪೋತೆ ಉದ್ಘಾಟಕರಾದ ಪಂಡಿತ್‌ ವಡವಾಟಿ ಅವರ ಪರಿಚಯ ವಾಚಿಸಿ, ರಾಯಚೂರಿನ ನರಸಿಂಹಲು ವಡವಾಟಿ ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದಿದ್ದು ಈ ಭಾಗದ ಹೆಮ್ಮೆ. ಅವರ ಜನ್ಮ ದಿನವಾದ ಜ.21ರಂದು ದೇಶಾದ್ಯಂತ ‘ಕಲಾವಿದರ ದಿನ’ವನ್ನಾಗಿ ಆಚರಿಸುತ್ತಿರುವುದು ವಡವಾಟಿ ಅವರ ಸಾಧನೆ ನಿರೂಪಿಸುತ್ತದೆ ಎಂದರು.

ಸಿಂಡಿಕೇಟ್‌ ಸದಸ್ಯ ವಿಜಯ ಭಾಸ್ಕರ್‌, ವಿದ್ಯಾವಿಷಯಕ ಪರಿಷತ್‌ ಸದಸ್ಯ ಪ್ರೊ| ಸಿ.ಎಸ್‌. ಬಸವರಾಜ, ಕುಲಸಚಿವ ಪ್ರೊ| ಸಿ. ಸೋಮಶೇಖರ, ಮೌಲ್ಯಮಾಪನ ಕುಲಸಚಿವ ಪ್ರೊ| ಸಂಜೀವಕುಮಾರ ಕೆ.ಎಂ, ವಿತ್ತಾಧಿಕಾರಿ ಪ್ರೊ| ಬಿ. ವಿಜಯ, ವಿದ್ಯಾರ್ಥಿ ಕಲ್ಯಾಣಾಧಿಕಾರಿ ಪ್ರೊ| ಕೆ. ಸಿದ್ದಪ್ಪ ಹಾಗೂ ವಿಶ್ವದ್ಯಾಲಯ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಇದ್ದರು.

ಗಮನ ಸೆಳೆದ ಮೆರವಣಿಗೆ: ಇದಕ್ಕೂ ಮುನ್ನ ಯುವಜನೋತ್ಸವ ಅಂಗವಾಗಿ ವಿಶ್ವವಿದ್ಯಾಲಯ ಆವರಣದಲ್ಲಿ ಸಂಭ್ರಮದ ಮೆರವಣಿಗೆ ನಡೆಯಿತು. ವಿವಿಧ ಜಿಲ್ಲೆಗಳಿಂದ ಬಂದಿದ್ದ ವಿದ್ಯಾರ್ಥಿಗಳು ಅನೇಕ ವೇಷಭೂಷಣ ತೊಟ್ಟು ಕುಣಿದು ಕುಪ್ಪಳಿಸಿದರು.

ಡಾ| ಪಂಡಿತ ನರಸಿಂಹಲು ವಡವಾಟಿ, ಕುಲಪತಿ ಪ್ರೊ|ಪರಿಮಳಾ ಅಂಬೇಕರ್‌ ಹಾಗೂ ಪ್ರಾಧ್ಯಾಪಕರು ವಿದ್ಯಾರ್ಥಿಗಳೊಂದಿಗೆ ಹೆಜ್ಜೆ ಹಾಕಿ, ಮೆರವಣಿಗೆಗೆ ಮತ್ತಷ್ಟು ಮೆರಗು ತುಂಬಿದರು. ಡೊಳ್ಳು ಕೊರಳಿಗೆ ಹಾಕಿಕೊಂಡು ಬಾರಿಸಿ ವಿದ್ಯಾರ್ಥಿಗಳಲ್ಲಿ ಹುಮ್ಮಸ್ಸು ಹೆಚ್ಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next