ಕಲಬುರಗಿ: ಕನ್ನಡ ನಾಡಿನ ನೆಲ, ಜಲ, ಭಾಷೆ, ಸಂಸ್ಕೃತಿ ಕಾವಲುಗಾರನಂತೆ ನಾಡಿಗೆ ಸಾಹಿತಿ, ಇತಿಹಾಸಜ್ಞ, ಲೇಖಕ, ವಿದ್ವಾಂಸ, ಪ್ರಾಧ್ಯಾಪಕ, ವಿಮರ್ಶಕ, ಹೋರಾಟಗಾರ ವಿಶೇಷವಾಗಿ ಸಂಶೋಧನೆಯನ್ನು ಅತ್ಯಂತ ನಿಖರವಾಗಿ ಮಾಡುವ ಮೂಲಕ ಎಲ್ಲ ಸಂಶೋಧಕರಿಗೆ ಸಂಶೋಧಕರಾಗಿ ನಾಡಿಗೆ ತಮ್ಮದೇ ಆದ ಅಮೂಲ್ಯವಾದ ಸೇವೆಯನ್ನು ಡಾ| ಎಂ. ಚಿದಾನಂದ ಮೂರ್ತಿ ನೀಡಿದ್ದಾರೆಂದು ಉಪನ್ಯಾಸಕ ಪ್ರೊ| ಎಚ್.ಬಿ. ಪಾಟೀಲ ತಿಳಿಸಿದರು.
“ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ನಗರದ ಆಳಂದ ರಸ್ತೆಯ ಶಿವನಗರದಲ್ಲಿನ “ಮಲ್ಲಿನಾಥ ಮಹಾರಾಜ ಶಾಲೆ’ಯಲ್ಲಿ ಹಮ್ಮಿಕೊಳ್ಳಲಾಗಿದ್ದ “ಡಾ| ಎಂ. ಚಿದಾನಂದಮೂರ್ತಿ ಅವರಿಗೆ ಶೃದ್ಧಾಂಜಲಿ’ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ನಮನ ಸಲ್ಲಿಸಿ ಮಾತನಾಡಿದರು.
ಕನ್ನಡಕ್ಕೆ ಸಂಬಂಧಿ ಸಿದಂತೆ ಶಾಸನಗಳನ್ನು ಪತ್ತೆಹಚ್ಚಿ, ಅದರಲ್ಲಿನ ವಿಷಯವನ್ನು ನೀಡಿರುವುದು ಪ್ರಮುಖವಾಗಿದೆ. ಹಂಪೆ ಇತಿಹಾಸ, ಪರಂಪರೆ ಉಳಿಸಿ, ಬೆಳೆಸುವಲ್ಲಿ ಸಾಕಷ್ಟು ಶ್ರಮಿಸಿದ್ದಾರೆ. ಕನ್ನಡ ಭಾಷೆಗೆ ಶಾಸ್ತ್ರೀಯ ಸ್ಥಾನಮಾನ ದೊರಕಿಸಿಕೊಡುವಲ್ಲಿ ಮಾಡಿದ ಚಳವಳಿ ಮರೆಯುವಂತಿಲ್ಲ. “ಕನ್ನಡ ಶಾಸನಗಳ ಸಾಂಸ್ಕೃತಿಕ ಅಧ್ಯಯನ’, “ಬಸವಣ್ಣನವರು’ “ಗ್ರಾಮೀಣ’ “ಹೊಸತು ಹೊಸತು’ ಸೇರಿದಂತೆ ಅನೇಕ ಮೌಲಿಕ ಕೃತಿಗಳನ್ನು ರಚಿಸಿ ಕನ್ನಡ ಸಾಹಿತ್ಯ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ ಎಂದರು.
ಸಂಸ್ಥೆ ಅಧ್ಯಕ್ಷ ಅಮರ ಬಂಗರಿ, ಮುಖ್ಯ ಶಿಕ್ಷಕಿ ಚಂಪಾಕಲಾ ನೆಲ್ಲೂರೆ, ಸಹ ಶಿಕ್ಷಕರಾದ ನಿಂಗಮ್ಮ ಬಿರಾದಾರ, ಗಿರಿಜಾ ರ್ಯಾಕಾ, ಸಿಬ್ಬಂದಿ ಶಾರದಾಬಾಯಿ ಗೌಳಿ, ಓಂಕಾರ ಗೌಳಿ, ಗಣೇಶ ಗೌಳಿ, ವಿದ್ಯಾರ್ಥಿ ಪ್ರತಿನಿಧಿಗಳಾದ ಗಿರೀಶ, ಗುರುಕಿರಣ, ಸುನಿಲ, ಐಶ್ವರ್ಯ ಹಾಗೂ ಬಳಗದ ಸದಸ್ಯರು, ಸಿಬ್ಬಂದಿ, ಪಾಲಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.