ಕಲಬುರಗಿ: ಸರ್ಕಾರಿ ಪ್ರೌಢ ಶಾಲಾ ಮುಖ್ಯ ಶಿಕ್ಷಕರ ಹುದ್ದೆ ಬಡ್ತಿಗೆ ಸಿದ್ಧಪಡಿಸಲಾಗಿದ್ದ ಜೇಷ್ಠತಾ ಪಟ್ಟಿ ಬಗ್ಗೆ ಶಿಕ್ಷಕರ ದೂರುಗಳು ಬಂದ ಹಿನ್ನೆಲೆಯಲ್ಲಿ ಪಟ್ಟಿಯ ಲೋಪ-ದೋಷ ಪರಿಶೀಲನೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತಾಲಯ ಆದೇಶ ಹೊರಡಿಸಿದ್ದು, ಆರು ಜಿಲ್ಲೆಗಳ ಡಿಡಿಪಿಐ ಕಚೇರಿಯ ಪ್ರೌಢ ಶಾಲಾ ವಿಭಾಗದ ಸಿಬ್ಬಂದಿ ಪಟ್ಟಿ ಪರಿಶೀಲಿಸಬೇಕೆಂದು ಶುಕ್ರವಾರ ಸೂಚಿಸಲಾಗಿದೆ.
ಕಲಬುರಗಿ ವಿಭಾಗದ ಕಲಬುರಗಿ, ರಾಯಚೂರು, ಬೀದರ್, ಯಾದಗಿರಿ, ಬಳ್ಳಾರಿ ಹಾಗೂ ಕೊಪ್ಪಳ ಜಿಲ್ಲೆಗಳ ಒಟ್ಟು 357 ಮುಖ್ಯ ಶಿಕ್ಷಕ ಮತ್ತು ತತ್ಸಮಾನ ವೃಂದದ ಹುದ್ದೆಗಳಿಗೆ ಬಡ್ತಿ ನೀಡುವ ಸಂಬಂಧ ವಿಭಾಗ ಮಟ್ಟದಲ್ಲಿ ಕಲ್ಯಾಣ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕೇತರ ಕೋಟಾದಲ್ಲಿ ತಲಾ 400ರಂತೆ ಒಟ್ಟು 800 ಸಹ ಶಿಕ್ಷಕರ ಜೇಷ್ಠತಾ ಪಟ್ಟಿ ಸಿದ್ಧಪಡಿಸಲಾಗಿತ್ತು. ಆದರೆ ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಜೇಷ್ಠತಾ ಪಟ್ಟಿ ತಯಾರಿಸುವಲ್ಲಿ ಅಧಿಕಾರಿಗಳು ಎಡವಟ್ಟು ಮಾಡಿದ್ದರು.
ಕಡಿಮೆ ಮೆರಿಟ್ ಹೊಂದಿದ ಕೆಲ ಶಿಕ್ಷಕರಿಗೆ ಹೆಚ್ಚಿನ ಅಂಕ ನೀಡಿದ್ದು ಬೆಳಕಿಗೆ ಬಂದಿತ್ತು. ರಾಯಚೂರಿನ ಶಿಕ್ಷಕರೊಬ್ಬರು ಸ್ವತಃ ತಮಗೆ ಸಿಇಟಿ ರ್‍ಯಾಂಕಿಂಗ್ ಅಂಕಕ್ಕಿಂತ ಹೆಚ್ಚಿನ ಅಂಕ ಕೊಡಲಾಗಿದೆ. ಇದನ್ನು ಸರಿಪಡಿಸಬೇಕೆಂದು ಅ.3ರಂದು ನಡೆದ ಸ್ಥಳ ನಿಯುಕ್ತಿ ಕೌನ್ಸೆಲಿಂಗ್ ಪ್ರಕ್ರಿಯೆಯಂದು ಆಯುಕ್ತರ ಗಮನಕ್ಕೆ ತಂದಿದ್ದರು. ಅಲ್ಲದೇ, ಬಡ್ತಿ ವಂಚಿತ ಶಿಕ್ಷಕರು ಅಧಿಕಾರಿಗಳ ಲೋಪದ ಬಗ್ಗೆ ದೂರು ಸಲ್ಲಿಸಿ, ಪಟ್ಟಿಯನ್ನು ಮರು ಪರಿಶೀಲನೆ ನಡೆಸಬೇಕೆಂದು ಕೋರಿದ್ದರು. ಈ ಬಗ್ಗೆ ‘ಉದಯವಾಣಿ’ ವಿಸ್ತೃತ ವರದಿ ಪ್ರಕಟಿಸಿತ್ತು. ಆದ್ದರಿಂದ ಆಯುಕ್ತಾಲಯವು ಪಟ್ಟಿಯನ್ನು ಸಂಪೂರ್ಣವಾಗಿ ಪರಿಶೀಲಿಸಿ ಸರಿಪಡಿಸಲು ಮುಂದಾಗಿದೆ. ಅ.8ರ ವರೆಗೆ ಡಿಡಿಪಿಐ ಕಚೇರಿ ಮತ್ತು ಬಿಇಒ ಕಚೇರಿಯ ಪ್ರೌಢ ಶಾಲಾ ವಿಭಾಗದ ಸಿಬ್ಬಂದಿ ಆಯುಕ್ತಾಲಯದಿಂದ ಕೇಳಿದ ಅಗತ್ಯ ಮಾಹಿತಿ ಒದಗಿಸಬೇಕೆಂದು ತಾಕೀತು ಮಾಡಲಾಗಿದೆ.
ಕಲ್ಯಾಣ ಕರ್ನಾಟಕ ಕೋಟಾ ಸಂಬಂಧ ಅನುಬಂಧ 1 ಮತ್ತು 2ರ ಪಟ್ಟಿಗಳಲ್ಲೂ ಗೊಂದಲಗಳಿವೆ. ಒಬ್ಬ ಶಿಕ್ಷಕರ ಹೆಸರುಗಳು ಸ್ಥಳೀಯ ವೃಂದ ಹಾಗೂ ಮೂಲ ವೃಂದ ಎರಡೂ ಕಡೆಗಳಲ್ಲಿವೆ. ಹೀಗಾಗಿ ಪ್ರಸ್ತುತ ಯಾವ ಜಿಲ್ಲೆಯಲ್ಲಿ ಶಿಕ್ಷಕರು ನಿರ್ವಹಿಸುತ್ತಿದ್ದಾರೆ ಎಂದು ನಮೂದಿಸಬೇಕು. ಯಾವ ವೃಂದದಲ್ಲಿ ಶಿಕ್ಷಕರ ಹೆಸರನ್ನು ಕೈ ಬಿಡಬೇಕೆಂದು ಸ್ಪಷ್ಟವಾಗಿ ತಿಳಿಸುವಂತೆ ಆದೇಶದಲ್ಲಿ ತಿಳಿಸಲಾಗಿದೆ.