Advertisement

ಪ್ರವಾಸೋದ್ಯಮ ಅಭಿವೃದ್ಧಿಗೆ ಯೋಜನೆ

11:35 AM Nov 17, 2019 | Naveen |

ಕಲಬುರಗಿ: ಜಿಲ್ಲೆಯಲ್ಲಿ ಪ್ರವಾಸೋದ್ಯಮ ಹೆಚ್ಚಿಸಲು ಮತ್ತು ಪ್ರವಾಸಿಗರನ್ನು ಸೆಳೆಯಲು ಪ್ರವಾಸಿ ತಾಣಗಳ ಪಟ್ಟಿ ಮಾಡಿ ಸಮಗ್ರ ಅಭಿವೃದ್ಧಿ ಯೋಜನೆ ರೂಪಿಸಲು ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

Advertisement

ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶನಿವಾರ ಪ್ರವಾಸೋದ್ಯಮ ಇಲಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಸಕ್ಕರೆ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

ಜಿಲ್ಲೆಯ ಎಲ್ಲ ಪ್ರವಾಸೋದ್ಯಮ ತಾಣಗಳನ್ನು ಮತ್ತೊಮ್ಮೆ ಗುರುತಿಸಬೇಕು. ರಸ್ತೆ ಸಂಪರ್ಕದ ಬಗ್ಗೆ ಮಾಹಿತಿ ಸಂಗ್ರಹಿಸಬೇಕು. ಪ್ರವಾಸಿ ತಾಣಗಳ ಪಟ್ಟಿಯಿಂದ ಬಿಟ್ಟು ಹೋದ ತಾಣಗಳನ್ನು ಪಟ್ಟಿ ಮಾಡಬೇಕು. ಜತೆಗೆ ಪ್ರದೇಶದ ಸಂಸ್ಕೃತಿ ಮತ್ತು ಸಾಂಸ್ಕೃತಿಕ ಚಿತ್ರಣ ಸೇರಿ ಯೋಜನಾ ವರದಿ ಸಿದ್ಧಪಡಿಸಬೇಕು ಎಂದು ಸೂಚಿಸಿದರು.

ಈಗ ವಿಮಾನ ನಿಲ್ದಾಣ ಸೇವೆ ಲಭ್ಯವಾಗುತ್ತಿರುವುದಿಂದ ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಪ್ರವಾಸಿ ತಾಣಗಳನ್ನು ಗುರುತಿಸಲು ಸಾಧ್ಯವಾಗುತ್ತದೆ. ಸನ್ನತಿ, ಮಳಖೇಡ, ಯಾನಾಗುಂದಿ ಹಾಗೂ ಜಿಲ್ಲೆಯ ಎಲ್ಲ ಐತಿಹಾಸಿಕ ತಾಣಗಳಿಗೆ ಸುಲಭವಾಗಿ ಪ್ರವಾಸಿಗರನ್ನು ಸೆಳೆಯಬಹುದಾಗಿದೆ ಎಂದು ಹೇಳಿದರು.

ಕಲ್ಯಾಣ ಕರ್ನಾಟಕ ಉತ್ಸವ: ಸಭೆಯಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಶಾಸಕರು ಈ ಹಿಂದೆ ಹೈದ್ರಾಬಾದ ಕರ್ನಾಟಕ ಉತ್ಸವ ನಡೆಯುತ್ತಿತ್ತು. ಅದರಂತೆ ಈಗ ಕಲ್ಯಾಣ ಕರ್ನಾಟಕ ಉತ್ಸವ ಆರಂಭಿಸಬೇಕೆಂದು ಬೇಡಿಕೆ ಮಂಡಿಸಿದರು. ಇದಕ್ಕೆ ಸಚಿವರು ಸಮ್ಮತಿಸಿ, ಜಿಲ್ಲೆಯಲ್ಲಿ ಪ್ರವಾಸೋದ್ಯಮ ವಿಸ್ತರಣೆ ಮತ್ತು ಸಂಸ್ಕೃತಿ ಉಳಿಸುವ ನಿಟ್ಟಿನಲ್ಲಿ ಮುಂದಿನ ವರ್ಷದಿಂದ ಕಲ್ಯಾಣ ಕರ್ನಾಟಕ ಉತ್ಸವ ನಡೆಸಲಾಗುವುದು ಎಂದು ಪ್ರಕಟಿಸಿದರು.

Advertisement

ಈ ಭಾಗದಲ್ಲಿ ಆಳ್ವಿಕೆ ನಡೆಸಿದ ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ಮೌರ್ಯರು, ಬಹುಮನಿ ಸುಲ್ತಾನರು ಸೇರಿದಂತೆ ಆಯಾ ಪ್ರದೇಶದಲ್ಲಿ ಉತ್ಸವ ಮಾಡಲು ಯೋಜಿಸಲಾಗುವುದು. ಇದರಿಂದ ರಾಜ ಮನೆತನಗಳ ಸಂಸ್ಕೃತಿ ಎತ್ತಿ ಹಿಡಿದಂತೆ ಆಗುತ್ತದೆ. ಜಿಲ್ಲೆಯು ತೊಗರಿ ಕಣಜ ಎಂದೇ ಪ್ರಸಿದ್ಧಿ ಪಡೆದಿದ್ದರಿಂದ ತೊಗರಿ ಉತ್ಸವ ಮಾಡಬಹುದಾಗಿದೆ ಎಂದು ಹೇಳಿದರು.

ಬೋಟಿಂಗ್‌ ವ್ಯವಸ್ಥೆ: ಪ್ರವಾಸೋದ್ಯಮ ಬೆಳೆಸುವ ನಿಟ್ಟಿನಲ್ಲಿ ಜಿಲ್ಲೆಯ ಚಂದ್ರಂಪಲ್ಲಿ, ಅಮರ್ಜಾ, ಕೆರೆಭೋಸಗಾ, ಭೀಮಾ ಸೇರಿದಂತೆ ತಾಲೂಕುವಾರು ಕೆರೆ ಮತ್ತು ಜಲಾಶಯಗಳನ್ನು ಗುರುತಿಸಿ ಬೋಟಿಂಗ್‌ ಮಾಡುವ ಅವಕಾಶ ಇರುವ ಪಟ್ಟಿ ಸಿದ್ಧಪಡಿಸಬೇಕು. ಜತೆಗೆ ಪ್ರವಾಸೋದ್ಯಮ ಇಲಾಖೆಯಿಂದ ಟ್ಯಾಕ್ಸಿ ಪಡೆಯುವವರ ಬೇಡಿಕೆ ಸರ್ವೇ ಮಾಡಿ ವರದಿ ಸಲ್ಲಿಸುವಂತೆ ಸೂಚಿಸಿದರು.

ಯಾತ್ರಿ ನಿವಾಸಗಳಲ್ಲಿ ಸೌಲಭ್ಯ: ಜಿಲ್ಲೆಯಲ್ಲಿರುವ ಯಾತ್ರಿಕ ನಿವಾಸಗಳಲ್ಲಿ ಪ್ರವಾಸಿಗರಿಗೆ ಸರಿಯಾದ ಸೌಲಭ್ಯ ಒದಗಿಸುವ ಸಂಬಂಧ ಆಯಾ ದೇವಸ್ಥಾನ ಮತ್ತು ಸಮಿತಿಗಳೊಂದಿಗೆ ಅಧಿಕಾರಿಗಳು ಸಭೆ ನಡೆಸಬೇಕು. ಜತೆಗೆ ವರದಿ ತಯಾರಿಸಿ, ಯಾತ್ರಿ ನಿವಾಸಗಳ ನಿರ್ವಹಣೆಯನ್ನು ದೇವಸ್ಥಾನ ಮತ್ತು ಸಮಿತಿಗಳಿಗೆ ವಹಿಸಬೇಕೆಂದು ಅಧಿಕಾರಿಗಳಿಗೆ ತಾಕೀತು ಮಾಡಿದರು.

ಸಂಸದ ಡಾ| ಉಮೇಶ ಜಾಧವ, ಶಾಸಕರಾದ ಸುಭಾಷ ಗುತ್ತೇದಾರ, ಎಂ.ವೈ.ಪಾಟೀಲ, ದತ್ತಾತ್ರೇಯ ಪಾಟೀಲ ರೇವೂರ, ರಾಜಕುಮಾರ ತೇಲ್ಕೂರ, ಬಸವರಾಜ ಮತ್ತಿಮಡು, ಅವಿನಾಶ ಜಾಧವ, ವಿಧಾನ ಪರಿಷತ್‌ ಸದಸ್ಯರಾದ ಬಿ.ಜಿ. ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಜಿ.ಪಂ ಅಧ್ಯಕ್ಷೆ ಸುವರ್ಣಾ ಮಲಾಜಿ ಪಾಲ್ಗೊಂಡಿದ್ದರು.

ಜಿಲ್ಲಾಧಿಕಾರಿ ಬಿ. ಶರತ್‌, ಜಿ.ಪಂ ಸಿಇಒ ಡಾ| ಪಿ. ರಾಜಾ, ಪಾಲಿಕೆ ಆಯುಕ್ತ ರಾಹುಲ್‌ ಪಾಂಡ್ವೆ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ರಫೀಕ್‌ ಲಾಡಜಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ರಾಜ್ಯ ಪುರಾತತ್ವ ಹಾಗೂ ಕೇಂದ್ರ ಪುರಾತತ್ವ ಇಲಾಖೆ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next