Advertisement

ಫಲಿತಾಂಶ ಏರಿಳಿತ: ತಡವರಿಸಿದ ಅಧಿಕಾರಿಗಳು

11:04 AM Oct 31, 2019 | Naveen |

ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಆಗುತ್ತಿರುವ ಏರಿಳಿತ. ಅನೇಕ ಸೌಕರ್ಯಗಳನ್ನು ಕಲ್ಪಿಸಿದರೂ ಸುಧಾರಣೆ ಕಾಣದ ಶೈಕ್ಷಣಿಕ ಗುಣಮಟ್ಟ. ಶಿಕ್ಷಕರು ಮತ್ತು ಶಿಕ್ಷಣ ಇಲಾಖೆ ಅಧಿಕಾರಿಗಳ ಕಾರ್ಯ ಶೈಲಿ…ಹೀಗೆ ಶಿಕ್ಷಣಕ್ಕೆ ಸಂಬಂಧಿಸಿದ ಪ್ರಶ್ನೆಗಳಿಗೆ ಡಿಡಿಪಿಐ, ಬಿಇಒ ಮತ್ತು ಡಯಟ್‌ ಪ್ರಾಂಶುಪಾಲರು ನಿಖರವಾಗಿ ಉತ್ತರಿಸದೆ ತಡಬಡಾಯಿಸಿದ ಪ್ರಸಂಗ ಬುಧವಾರ ನಡೆಯಿತು.

Advertisement

ಜಿ.ಪಂ ಸಭಾಂಗಣದಲ್ಲಿ ಸತತ ನಾಲ್ಕು ಗಂಟೆಗಳ ಕಾಲ ನಡೆದ ಕಲ್ಯಾಣ ಕರ್ನಾಟಕ ಭಾಗದ ಆರು ಜಿಲ್ಲೆಗಳ ಶೈಕ್ಷಣಿಕ ಪ್ರಗತಿ ಪರಿಶೀಲನೆಯಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್‌.ಸುರೇಶ ಕುಮಾರ ಮತ್ತು ಕಲಬುರಗಿ ಪ್ರಾದೇಶಿಕ ಆಯುಕ್ತರಾದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ ಅಧಿಕಾರಿಗಳ ನೀರಿಳಿಸಿದರು.

ಬೀದರ್‌, ಕಲಬುರಗಿ, ರಾಯಚೂರು, ಯಾದಗಿರಿ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳ ಪ್ರತ್ಯೇಕ ಮಾಹಿತಿ ಪಡೆದರು. ಕಳೆದ ಮೂರು ವರ್ಷಗಳ ಎಸ್ಸೆಸ್ಸೆಲ್ಸಿ ಪರೀಕ್ಷಾ ಫಲಿತಾಂಶದ ವರದಿ ಮಂಡಿಸಿದ ಅಧಿಕಾರಿಗಳು, ಫಲಿತಾಂಶ ಏರಿಳಿತ ಸಂಬಂಧ ಸಿದ್ಧ ಉತ್ತರಗಳನ್ನೇ ಪಟ್ಟಿ ಮಾಡಿಕೊಂಡು ಹೇಳಲು ಪ್ರಯತ್ನಿಸಿ ಸಿಕ್ಕಿ ಬಿದ್ದರು.

ಬೀದರ್‌ ಡಿಡಿಪಿಐ ಎಚ್‌.ಸಿ ಚಂದ್ರಶೇಖರ, ಜಿಲ್ಲೆಯಲ್ಲಿ ಫಲಿತಾಂಶ ಏರುಗತಿಯಲ್ಲಿ ಸಾಗುತ್ತಿದೆ. ಬಸವಕಲ್ಯಾಣ, ಹುಮನಾಬಾದ ತಾಲೂಕಿನಲ್ಲಿ ಉತ್ತಮವಾಗಿ ಫಲಿತಾಂಶ ಬಂದಿದೆ ಎಂದರು. ಆಗ ಸಚಿವ ಸುರೇಶಕುಮಾರ, ಎರಡು ತಾಲೂಕುಗಳಲ್ಲಿ ಫಲಿತಾಂಶ ಹೆಚ್ಚಳಕ್ಕೆ ಕಾರಣವೇನು ಎಂದು ಪ್ರಶ್ನಿಸಿದರು.

ಇದಕ್ಕೆ ಡಿಡಿಪಿಐ, ಕಡಿಮೆ ಫಲಿತಾಂಶದ ಶಾಲೆಗಳ ಮಕ್ಕಳನ್ನು ಶಿಕ್ಷಕರಿಗೆ ದತ್ತು ನೀಡುತ್ತೇವೆ. ತೀವ್ರ ಕಲಿಕಾ ಘಟಕ ತರಗತಿಗಳನ್ನು ನಡೆಸುತ್ತೇವೆ ಎಂದರು. ಈ ವೇಳೆ ಸುಬೋಧ ಯಾದವ, ಎಲ್ಲ ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಈ ಕಾರ್ಯಕ್ರಮಗಳನ್ನು ಅನುಸರಿಸಲಾಗಿದೆ. ನಮ್ಮದೇ ಜಿಲ್ಲೆಯ ಬೇರೆ ತಾಲೂಕುಗಳಲ್ಲಿ ಯಾಕೆ ಫಲಿತಾಂಶ ಹೆಚ್ಚಳವಾಗಿಲ್ಲ ಎಂದು ಪ್ರಶ್ನಿಸಿದರು. ಇದಕ್ಕೆ ಡಿಡಿಪಿಐ ಹಳೇ ಉತ್ತರ ನೀಡಿದರು. ಇದರಿಂದ ಸಿಟ್ಟಾದ ಸುಬೋಧ ಯಾದವ, ಹಳೆ ಮಾಹಿತಿ, ಹೊಸ ಮಾಹಿತಿ ಸೇರಿ ಏನೇನೋ ಉತ್ತರ ಕೊಟ್ಟು ಸಚಿವರ ದಾರಿ ತಪ್ಪಿಸಬೇಡಿ ಎಂದು ಚಾಟಿ ಬೀಸಿದರು.

Advertisement

ಅದೇ ರೀತಿ ಬಳ್ಳಾರಿ ಡಿಡಿಪಿಐ ವರದಿ ಮಂಡಿಸಿದಾಗ ಸಚಿವರು, ಜಿಲ್ಲೆಯ ಹಡಗಲಿಯಲ್ಲಿ 2016-17ರಲ್ಲಿ ಶೇ.70.79, 2017-18ರಲ್ಲಿ ಶೇ.80.09 ಮತ್ತು 2018-19ರಲ್ಲಿ ಶೇ.38.93ರಷ್ಟು ಫಲಿತಾಂಶ ಇದೆ.

2018-19ನೇ ಸಾಲಿನಲ್ಲಿ ಫಲಿತಾಂಶ ಕುಸಿತಕ್ಕೆ ಕಾರಣವೇನು ಎಂದು ನಿಖರವಾದ ಉತ್ತರ ಹೇಳಿ ಎಂದು ಕೇಳಿದರು. ಇದಕ್ಕೆ ಡಿಡಿಪಿಐ ಏನೇನೋ ಉತ್ತರ ಕೊಡಲು ಮುಂದಾದರು. ಆಗ ನೇರವಾದ ಉತ್ತರ ಕೊಡಿ ಸುತ್ತಿ ಬಳಸಿ ಹೇಳಬೇಡಿ ಎಂದ ಸಚಿವರು, ಹಡಗಲಿ ಬಿಇಒ ಅವರಿಗೆ ಉತ್ತರಿಸುವಂತೆ ಸೂಚಿಸಿದರು. ಗುಣಮಟ್ಟದ ಸುಧಾರಣೆಗಾಗಿ ಅನುಸರಿಸಿದ ವಿವಿಧ ಕಾರ್ಯಕ್ರಮಗಳ ಹೆಚ್ಚಿನ ಒತ್ತಡದಿಂದ ಫಲಿತಾಂಶ ಕಡಿಮೆಯಾಗಿದೆ ಎಂದು ಬಿಇಒ ಹೇಳಿ ಅಚ್ಚರಿ ಮೂಡಿಸಿದರು. ನಂತರ ಆ ವರ್ಷ ಪಾರದರ್ಶಕವಾಗಿ ಪರೀಕ್ಷೆ ನಡೆಸಿದ್ದರಿಂದ ಫಲಿತಾಂಶ ಕುಸಿದಿದೆ ಎಂದು ಬಿಇಒ ತಾವೇ ಒಪ್ಪಿಕೊಂಡರು.

ಯಾದಗಿರಿ ನೋಡಲ್‌ ಅಧಿಕಾರಿ ಮಲ್ಲಪ್ಪ ಕೂಡ ಕಾಪಿ-ಚೀಟಿಗೆ ಅವಕಾಶ ನೀಡುವುದರಿಂದ ಹೆಚ್ಚಿನ ಫಲಿತಾಂಶ ಬರುತ್ತದೆ ಎಂದು ಒಪ್ಪಿಕೊಂಡರು. ತೀವ್ರ ನಿಗಾ ಕಲಿಕಾ ಕಾರ್ಯಕ್ರಮದ ಸಮಯ ತಿಳಿಯದೇ ರಾಯಚೂರು ಡಿಡಿಪಿಐ ಬಿ.ಕೆ.ನಂದನೂರ ಮತ್ತು ತಮ್ಮ ಕ್ಷೇತ್ರದ ಫಲಿತಾಂಶದ ಮಾಹಿತಿ ತಿಳಿಯದೇ ಕಲಬುರಗಿ ಜಿಲ್ಲೆಯ ಬಿಇಒ ಒಬ್ಬರು ಸುಬೋಧ ಯಾದವ ಕೆಂಗಣ್ಣಿಗೆ ಗುರಿಯಾದರು.

ಸಭೆಯಲ್ಲಿ ಸಂಸದ ಡಾ| ಉಮೇಶ ಜಾಧವ, ಚಿಂಚೋಳಿ ಶಾಸಕ ಡಾ| ಅವಿನಾಶ ಜಾಧವ, ಸಾರ್ವಜನಿಕ ಶಿಕ್ಷಣ ಇಲಾಖೆಯ ಕಲಬುರಗಿ ಅಪರ ಆಯುಕ್ತ ನಳಿನಿ ಅತುಲ್‌, ಕಲಬುರಗಿ ಜಿಲ್ಲಾಧಿಕಾರಿ ಬಿ.ಶರತ್‌, ಜಿಪಂ ಸಿಇಒ ಡಾ| ಪಿ. ರಾಜಾ, ರಾಯಚೂರು ಜಿ.ಪಂ ಸಿಇಒ ಲಕ್ಷ್ಮೀ ಕಾಂತ ರೆಡ್ಡಿ, ಯಾದಗಿರಿ ಸಿಇಒ ಶಿಲ್ಪಾ ಶರ್ಮಾ ಹಾಗೂ ಆರು ಜಿಲ್ಲೆಗಳ ಬಿಇಒಗಳು, ನೋಡಲ್‌ ಅಧಿಕಾರಿಗಳು, ಡಯಟ್‌ ಪ್ರಾಂಶುಪಾಲರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next