ಕಲಬುರಗಿ: ಹೈಕ ಭಾಗದ ಕಲೆ, ಸಾಹಿತ್ಯ, ಸಂಸ್ಕೃತಿ ಉಳಿಸಿ-ಬೆಳೆಸುವ ದೃಷ್ಟಿಯಿಂದ ರಾಜ್ಯ ಸರ್ಕಾರ ಮತ್ತು ಎಚ್ಕೆಆರ್‌ಡಿ ಅನುದಾನದಲ್ಲಿ ನಗರದ ಬುದ್ಧ ವಿಹಾರ ಬಳಿಯ 7.9 ಎಕರೆ ಜಾಗದಲ್ಲಿ ಬೃಹತ್ ಸಾಂಸ್ಕೃತಿಕ ಸಮುಚ್ಛಯ (ಕಲ್ಚರಲ್ ಕಾಂಪ್ಲೆಕ್ಸ್) ಹಾಗೂ ವಸ್ತು ಸಂಗ್ರಹಾಲಯ (ಮ್ಯೂಸಿಯಂ) ನಿರ್ಮಿಸಲು ನಿರ್ಧರಿಸಲಾಗಿದೆ.
ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಹಾಗೂ ಎಚ್.ಕೆ.ಆರ್.ಡಿ.ಬಿ. ಕಾರ್ಯದರ್ಶಿ ಸುಬೋಧ ಯಾದವ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಅವರು ಈ ವಿಷಯ ತಿಳಿಸಿದರು.
ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ರವೀಂದ್ರನಾಥ ಠ್ಯಾಗೋರ ಕಲ್ಚರಲ್ ಕಾಂಪ್ಲೆಕ್ಸ್ ನಿರ್ಮಿಸಲಿದ್ದು, ಇದರಲ್ಲಿ ಆಡಿಟೋರಿಯಮ್, ಕ್ರಾಫ್ಟ್ ಬಜಾರ್, ರಂಗಮಂದಿರ, ಸಭಾಂಗಣ, ಉದ್ಯಾನವನ ಮುಂತಾದವುಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದೇ ಪ್ರಕಾರ ಎಚ್.ಕೆ.ಆರ್.ಡಿ.ಬಿ. ಅನುದಾನದಲ್ಲಿ ಇದೇ ಸಮುಚ್ಛಯದಲ್ಲಿ ಮ್ಯೂಜಿಯಮ್ ನಿರ್ಮಿಸಲು ತೀರ್ಮಾನಿಸಿದೆ ಎಂದು ತಿಳಿಸಿದರು.
ಈ ಮೊದಲು ಕೇಂದ್ರ ಮತ್ತು ರಾಜ್ಯ ಸರ್ಕಾರದ 60:40 ಅನುದಾನದಲ್ಲಿ ಠ್ಯಾಗೋರ ಕಲ್ಚರಲ್ ಕಾಂಪ್ಲೆಕ್ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ ಕೆಲ ಕಾರಣಗಳಿಂದ ಕೇಂದ್ರದ ಅನುದಾನ ಬಿಡುಗಡೆ ಕಷ್ಟವಾಗಿದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆ ಅನುದಾನದಲ್ಲಿ ಠ್ಯಾಗೋರ ಕಲ್ಚರಲ್ ಕಾಂಪ್ಲೆಕ್ಸ್ ಮತ್ತು ಎಚ್.ಕೆ.ಆರ್.ಡಿ.ಬಿ ಅನುದಾನದಲ್ಲಿ ಮ್ಯೂಸಿಯಂ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದರು. ಹೈ.ಕ.ಪ್ರ.ಅ. ಮಂಡಳಿ ಉಪ ಕಾರ್ಯದರ್ಶಿ ಡಾ| ಬಿ. ಸುಶೀಲಾ, ಪ್ರವಾಸೊದ್ಯಮ ಇಲಾಖೆ ಉಪನಿರ್ದೇಶಕ ರಫೀಕ್ ಲಾಡಜಿ, ಭಾರತೀಯ ಪ್ರಾಚ್ಯವಸ್ತು ಸರ್ವೇಕ್ಷಣಾಲಯದ ಕ್ಯೂರೇಟರ್ ವಿನಾಯಕ, ರಾಜ್ಯ ಪ್ರಾಚ್ಯವಸ್ತು ಇಲಾಖೆ ಉಪ ನಿರ್ದೇಶಕ ಶಿವಪ್ಪ, ಲೋಕೋಪಯೋಗಿ ಇಲಾಖೆ ಇಂಜಿನಿಯರ್‌ಗಳಾದ ಮಾಣಿಕ್ ಕಣಕಟ್ಟೆ, ಸಿದ್ರಾಮಪ್ಪ ಮುಂತಾದವರು ಇದ್ದರು.