Advertisement

ಪೊಲೀಸರೇ ಕಸರತ್ತು ಮಾಡಿ

05:57 PM Apr 03, 2019 | |

ಕಲಬುರಗಿ: ಸದಾ ಒತ್ತಡದಲ್ಲಿರುವ ಪೊಲೀಸ್‌ ಅಧಿಕಾರಿ ಹಾಗೂ ಸಿಬ್ಬಂದಿ ಪ್ರತಿದಿನ ಬೆಳಗಿನ ಹೊತ್ತು ನಿಯಮಿತವಾಗಿ ಕನಿಷ್ಠ ಪಕ್ಷ 30 ನಿಮಿಷಗಳ ಕಾಲ ವಾಯುವಿಹಾರ ಅಥವಾ ಕಸರತ್ತು ಮಾಡುವ ರೂಢಿ ಬೆಳೆಸಿಕೊಂಡಲ್ಲಿ ಜೀವನ ಪರ್ಯಂತ ಆರೋಗ್ಯವಾಗಿರಬಹುದಾಗಿದೆ ಎಂದು ನಿವೃತ್ತ ಡಿ.ಎ.ಆರ್‌. ಎ.ಆರ್‌.ಎಸ್‌.ಐ. ಅಪ್ಸರ್‌ ಅಲಿ ಸಲಹೆ ನೀಡಿದರು.

Advertisement

ಜಿಲ್ಲಾ ಸಶಸ್ತ್ರ ಪೊಲೀಸ್‌ ಕವಾಯತು ಮೈದಾನದಲ್ಲಿ ಏರ್ಪಡಿಸಿದ್ದ ಪೊಲೀಸ್‌ ಧ್ವಜ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪರೇಡ್‌ ವಂದನೆ ಸ್ವೀಕರಿಸಿದ ನಂತರ ಪೊಲೀಸ್‌ ಧ್ವಜ ಬಿಡುಗಡೆ ಮಾಡಿ ಅವರು ಮಾತನಾಡಿದರು.

ಪೊಲೀಸ್‌ ಇಲಾಖೆಯ ಸುಮಾರು 10 ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಲಾಗಿದೆ. ಕವಾಯತು ಪ್ರದರ್ಶನ ತುಂಬಾ ಆಕರ್ಷಕವಾಗಿದ್ದು, ಶಿಸ್ತಿನಿಂದ ಕೂಡಿತ್ತು ಎಂದು ಪ್ರಶಂಸೆ ವ್ಯಕ್ತಪಡಿಸಿದರು.

ಜಿಲ್ಲಾ ಪೊಲೀಸ್‌ ಅಧೀಕ್ಷಕ ಯಡಾ ಮಾರ್ಟೀನ್‌ ಮಾರ್ಬನ್ಯಾಂಗ್‌ ಮಾತನಾಡಿ, ನಿವೃತ್ತ ಪೊಲೀಸ್‌ ಅಧಿಕಾರಿಗಳ ಕ್ಷೇಮಾಭಿವೃದ್ಧಿಗೆ ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸದ್ಯ ನಿವೃತ್ತ ಪೊಲೀಸ್‌ ಕಲ್ಯಾಣ ನಿಧಿಯಲ್ಲಿ ಒಟ್ಟು 6 ಲಕ್ಷ ರೂ.ಗಳು ಜಮೆಯಾಗಿದೆ ಎಂದರು.

ನಿವೃತ್ತ ಪೊಲೀಸ್‌ ಅಧಿಕಾರಿಗಳಿಗೆ ಜಿಲ್ಲಾ ಪೊಲೀಸ್‌ ವತಿಯಿಂದ ವೈದ್ಯಕೀಯ ವೆಚ್ಚಕ್ಕಾಗಿ 20 ಸಾವಿರ ರೂ. ವಿನಿಯೋಗಿಸಲಾಗುತ್ತಿದೆ. 2016-17 ಮತ್ತು 2017-18ನೇ ಸಾಲಿನಲ್ಲಿ ನಿವೃತ್ತ ಪೊಲೀಸ್‌ ಕಲ್ಯಾಣ ನಿಧಿಯಡಿಯಲ್ಲಿ ವೈದ್ಯಕೀಯ ಮತ್ತು ಶಿಕ್ಷಣ ವೆಚ್ಚಕ್ಕಾಗಿ 30 ಲಕ್ಷ ರೂ.ಗಳ ಅನುದಾನ ಬಿಡುಗಡೆ ಮಾಡುವಂತೆ ಪ್ರಧಾನ ಕಚೇರಿಯೊಂದಿಗೆ ವ್ಯವಹರಿಸಲಾಗಿದೆ ಎಂದರು.

Advertisement

ಇದೇ ವೇಳೆ ನಿವೃತ್ತ ಪೊಲೀಸ್‌ ಸಿಬ್ಬಂದಿಗಳಾದ ಪಿ.ಐ. ನಾರಾಯಣಪ್ಪ, ಎಸ್‌. ಆರ್‌.ಎಸ್‌.ಐ. ಚಂದಪ್ಪ, ಎಚ್‌.ಸಿ. ಗಳಾದ ಪರುತಪ್ಪಾ, ವೀರಭದ್ರಪ್ಪ, ಮಹ್ಮದ್‌ ಅಬ್ದುಲ್‌ ಸತ್ತಾರ ಅವರನ್ನು ಸನ್ಮಾನಿಸಲಾಯಿತು. ಕಲಬುರಗಿ ಈಶಾನ್ಯ ವಲಯ ಪೊಲೀಸ್‌ ಮಹಾ ನಿರೀಕ್ಷಕ ಮನೀಷ ಖರ್ಬಿಕರ್‌, ಜಿಪಂ ಸಿಇಒ ಡಾ| ರಾಜಾ ಪಿ., ಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್‌, ಐಎಎಸ್‌ ಪ್ರೊಬೇಷನರಿ ಅಧಿ ಕಾರಿ ಸ್ನೇಹಲ್‌ ಸುಧಾಕರ ಲೋಖಂಡೆ, ಹೆಚ್ಚುವರಿ ಎಸ್‌ಪಿ ಪ್ರಸನ್ನ ದೇಸಾಯಿ, ನಿವೃತ್ತ ಪೊಲೀಸ್‌ ಅಧಿಕಾರಿಗಳು ಪಾಲ್ಗೊಂಡಿದ್ದರು.

ಜಿಲ್ಲೆಯ ನಿವೃತ್ತ ಪೊಲೀಸ್‌ ಅಧಿಕಾರಿ ಮತ್ತು ಸಿಬ್ಬಂದಿಗಳ ಕಲ್ಯಾಣ ಚಟುವಟಿಕೆಗಳಿಗಾಗಿ ಈಗಾಗಲೇ ನಿವೇಶನ ಮಂಜೂರಾತಿ ಮಾಡಲಾಗಿದೆ. ಜಿಲ್ಲೆಯ ನಿವೃತ್ತ ಅಧಿಕಾರಿ ಮತ್ತು ಸಿಬ್ಬಂದಿಗಳಿಗೂ ಕ್ಯಾಂಟೀನ್‌ ಸೌಲಭ್ಯ ನೀಡಲಾಗಿದ್ದು, ಈಗಾಗಲೇ 263 ಪೊಲೀಸ್‌
ಕ್ಯಾಂಟೀನ್‌ ಕಾರ್ಡುಗಳನ್ನು ಒದಗಿಸಲಾಗಿದೆ. ಅಧಿಕಾರಿ ಮತ್ತು ಸಿಬ್ಬಂದಿ ಕ್ಷೇಮಾಭಿವೃದ್ಧಿ ದೃಷ್ಟಿಕೋನದಿಂದ ಪೊಲೀಸ್‌ ಕ್ಯಾಂಟೀನ್‌, ಹಿಟ್ಟಿನ ಗಿರಣಿ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ, ಸೋಲಾರ ದೀಪಗಳ ವ್ಯವಸ್ಥೆ ಮಾಡಲಾಗಿದೆ. ಕೇಂದ್ರ ಸ್ಥಾನದಲ್ಲಿ ನೂತನವಾಗಿ 120 ವಸತಿ ಗೃಹಗಳನ್ನು ನಿರ್ಮಾಣ ಮಾಡಿ ಸಿಬ್ಬಂದಿಗಳಿಗೆ ಹಂಚಿಕೆ ಮಾಡಲಾಗಿದೆ. ಬೃಹತ್‌ ಪ್ರಮಾಣದ ಉದ್ಯಾನವನ ನಿರ್ಮಾಣ ಮಾಡಲಾಗಿದ್ದು, ಇದರಲ್ಲಿ ಮಕ್ಕಳ ಪಾರ್ಕ್‌, ವಾಕಿಂಗ್‌ ಟ್ರ್ಯಾಕ್ , ಅಕ್ಯೂಫ್ರೇಶರ್‌ ಪಾಥ್‌ವೇ, ಅತ್ಯಾಧುನಿಕ ವ್ಯಾಯಾಮ ಶಾಲೆ ನಿರ್ಮಿಸಲಾಗಿದೆ.
. ಯಡಾ ಮಾರ್ಟೀನ್‌
ಮಾರ್ಬನ್ಯಾಂಗ್‌,
ಜಿಲ್ಲಾ ಪೊಲೀಸ್‌ ಅಧೀಕ್ಷಕ

Advertisement

Udayavani is now on Telegram. Click here to join our channel and stay updated with the latest news.

Next