•ಹಣಮಂತರಾವ ಭೈರಾಮಡಗಿ
ಕಲಬುರಗಿ: ಹೈದ್ರಾಬಾದ ಕರ್ನಾಟಕ ಭಾಗದ ಆರು ಜಿಲ್ಲೆಗಳ 41 ಕ್ಷೇತ್ರಗಳ ಪೈಕಿ 17 ಬಿಜೆಪಿ ಶಾಸಕರಿದ್ದು, ಕೇವಲ ಒಬ್ಬರಿಗೆ ಮಾತ್ರ ಸಚಿವ ಸ್ಥಾನ ನೀಡಿದ್ದು ಅಸಮಾಧಾನ ಭುಗಿಲೇಳುವಂತೆ ಮಾಡಿದೆ.
ಸಿಎಂ ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಬೀದರ್ ಜಿಲ್ಲೆ ಔರಾದ ಮೀಸಲು ಕ್ಷೇತ್ರದಿಂದ ಸತತ ಮೂರು ಸಲ ಗೆದ್ದಿರುವ ಬಂಜಾರಾ ಸಮುದಾಯದ ಪ್ರಭು ಚವ್ಹಾಣ ಅವರಿಗೆ ಸಚಿವ ಸ್ಥಾನ ಒಲಿದು ಬಂದಿದೆ. ದತ್ತಾತ್ರೇಯ ಪಾಟೀಲ ರೇವೂರ, ರಾಜುಗೌಡ, ಶಿವನಗೌಡ ನಾಯಕ, ಸುಭಾಷ ಗುತ್ತೇದಾರ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ ಸಚಿವ ಸ್ಥಾನದ ಆಕಾಂಕ್ಷಿಗಳಲ್ಲಿ ಮುಂಚೂಣಿಯಲ್ಲಿದ್ದರು.
ಹೈದ್ರಾಬಾದ ಕರ್ನಾಟಕದ ಬೀದರ 1, ಕಲಬುರಗಿ 5, ಯಾದಗಿರಿ 2, ರಾಯಚೂರು 2, ಕೊಪ್ಪಳ 3 ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ 4 ಸೇರಿ ಒಟ್ಟು 17 ಬಿಜೆಪಿ ಶಾಸಕರಿದ್ದಾರೆ. 2018ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 15 ಸ್ಥಾನ ಹೊಂದಿತ್ತು. ಆದರೆ ದಾವಣಗೆರೆ ಜಿಲ್ಲೆಯಲ್ಲಿದ್ದ ಹರಪನಳ್ಳಿ ಚುನಾವಣೆ ನಂತರ ಬಳ್ಳಾರಿಗೆ ಸೇರಿದ್ದರಿಂದ ಹಾಗೂ ಚಿಂಚೋಳಿಯಲ್ಲಿ ಬಿಜೆಪಿ ಗೆದ್ದಿದ್ದರಿಂದ 17 ಸ್ಥಾನಗಳಾಗಿವೆ.
ಕೊನೆ ಗಳಿಗೆಯಲ್ಲಿ ಕೈಬಿಟ್ಟರು: ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಹೆಸರು ಪಟ್ಟಿಯಲ್ಲಿತ್ತು. ಆದರೆ ಕೊನೆ ಗಳಿಗೆಯಲ್ಲಿ ಕೈ ಬಿಡಲಾಗಿದೆ. ವಿಭಾಗೀಯ ಕೇಂದ್ರವಾಗಿರುವ ಕಲಬುರಗಿ ಜಿಲ್ಲೆಗೆ ಹೊರಗಿನವರೇ ಜಿಲ್ಲಾ ಉಸ್ತುವಾರಿ ಸಚಿವರು ಎನ್ನುವುದು ಮತ್ತೆ ಮುಂದುವರಿದಿದೆ. ಎಚ್ಕೆಆರ್‌ಡಿಬಿಗೆ ಹೈ.ಕ ಭಾಗದ ಸಚಿವರೇ ಅಧ್ಯಕ್ಷರಾಗಬೇಕೆಂಬ ನಿಯಮವಿದೆ. ಈಗ ಪ್ರಭು ಚವ್ಹಾಣ ಅವರೊಬ್ಬರೇ ಸಚಿವರಾಗಿದ್ದಾರೆ. ಅವರೇ ಎಚ್ಕೆಆರ್‌ಡಿಬಿಗೆ ಅಧ್ಯಕ್ಷರಾದರೂ ಆಶ್ಚರ್ಯವಿಲ್ಲ. ಆದರೆ ಹೈಕ ಭಾಗದ ಉಸ್ತುವಾರಿ ಸಚಿವರೂ ಅಧ್ಯಕ್ಷರಾಗುವ ಅವಕಾಶವಿದೆ.
ಲಕ್ಷ್ಮಣ ಸವದಿ ಸೋತಿದ್ದರೂ ಸಚಿವ ಸ್ಥಾನ ಕಲ್ಪಿಸಲಾಗಿದೆ. ಇದರ ಬದಲು ಮಾಜಿ ಸಚಿವರಾದ ಮಾಲೀಕಯ್ಯ ಗುತ್ತೇದಾರ, ಬಾಬುರಾವ್ ಚಿಂಚನಸೂರ ಇಬ್ಬರಲ್ಲಿ ಒಬ್ಬರಿಗೆ ಸಚಿವ ಸ್ಥಾನ ಕಲ್ಪಿಸಬಹುದಿತ್ತು. ಜಿಲ್ಲೆಯಲ್ಲಿ ದತ್ತಾತ್ರೇಯ ಪಾಟೀಲ ರೇವೂರ, ಸುಭಾಷ ಗುತ್ತೇದಾರ, ರಾಜಕುಮಾರ ಪಾಟೀಲ ಸೇರಿದಂತೆ ಐವರು ಬಿಜೆಪಿ ಶಾಸಕರಿದ್ದರೂ ಒಬ್ಬರಿಗೂ ಸಚಿವ ಸ್ಥಾನ ಸಿಗಲಿಲ್ಲ.