ಕಲಬುರಗಿ: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ರಾಜ್ಯ ಬಿಜೆಪಿ ಸರ್ಕಾರ ಟಿಪ್ಪು ಸುಲ್ತಾನ್ ಜಯಂತಿಯನ್ನು ರದ್ದುಪಡಿಸಿರುವುದನ್ನು ವಿರೋಧಿಸಿ ಸರ್ವ ಪಕ್ಷಗಳು ಹಾಗೂ ರಾಜಕೀಯೇತರ ಸಂಘಟನೆಗಳ ಒಕ್ಕೂಟದ ವತಿಯಿಂದ ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ಜಿಲ್ಲಾಧಿಕಾರಿ ಕಚೇರಿ ಎದುರು ಮುಸ್ಲಿಂ ಸಮುದಾಯದ ನೂರಾರು ಜನರು ಪ್ರತಿಭಟನೆ ನಡೆಸಿ ಟಿಪ್ಪು ಸುಲ್ತಾನ್ ಜಯಂತಿ ರದ್ಧತಿ ಆದೇಶವನ್ನು ಹಿಂಪಡೆಯಬೇಕೆಂದು ಜಿಲ್ಲಾಧಿಕಾರಿ ಮೂಲಕ ರಾಜ್ಯಪಾಲರಿಗೆ ಮನವಿ ಪತ್ರ ಸಲ್ಲಿಸಿದರು.
ಟಿಪ್ಪು ಸುಲ್ತಾನ್ ಕೇವಲ ಕರ್ನಾಟಕಕ್ಕೆ ಅಲ್ಲ. ದೇಶದಲ್ಲಿಯೇ ಉತ್ತಮ ಆಡಳಿತಗಾರ. ಆಡಳಿತದಲ್ಲಿನ ಧೈರ್ಯ ಹಾಗೂ ಅಭಿವೃದ್ಧಿ ಕಾರ್ಯಗಳು ದೇಶದ ಇತಿಹಾಸದಲ್ಲಿ ಪ್ರಮುಖವಾಗಿವೆ. ಟಿಪ್ಪು ಸುಲ್ತಾನ್ ಕೇವಲ ಒಬ್ಬ ರಾಜನಾಗಿ ಅಲ್ಲ ತಾಂತ್ರಿಕ ಕ್ಷೇತ್ರ, ನೀರಾವರಿ ಕ್ಷೇತ್ರ ಹಾಗೂ ಕೃಷಿ ಮತ್ತು ಕನ್ನಡ ಭಾಷೆ ಅಭಿವೃದ್ಧಿಯೊಂದಿಗೆ ಸಮಾಜ ಸುಧಾರಕ ಎಂದು ಖ್ಯಾತಿ ಪಡೆದವರು ಎಂದರು.
ಟಿಪ್ಪು ಸಾಮ್ರಾಜ್ಯ ಭಾವಕ್ಯತೆಯ ಸಂಕೇತವಾಗಿತ್ತು. ಅವರಿಗೆ ಕನ್ನಡದ ಕಲಿ, ನಾಡ ಪ್ರೇಮಿ, ಮೈಸೂರು ಹುಲಿ ಮುಂತಾದ ಬಿರುದುಗಳಿವೆ. ಅಂತಹ ಮಹಾನ್ ನಾಯಕನ ಜಯಂತಿ ರದ್ದುಪಡಿಸಿದ್ದು ಖಂಡನೀಯವಾಗಿದೆ. ಸರ್ಕಾರದ ನಿರ್ಧಾರದ ವಿರುದ್ಧ ನಿರಂತರವಾಗಿ ಹೋರಾಟ ಮಾಡಲಾಗುವುದು ಎಂದು ಪ್ರತಿಭಟನಾಕರರು ಎಚ್ಚರಿಸಿದರು.
ವಕೀಲ ಸೈಯದ್ ಮಜರ ಹುಸೇನ್, ಎಸ್‌ಡಿಪಿಐ ಜಿಲ್ಲಾಧ್ಯಕ್ಷ ಮೊಹ್ಮದ್ ಮೊಹಸೀನ್, ಅಸಗರ್ ಚುಲಬುಲ್, ಸೈಯದ್ ಹಬೀಬ್ ಸರಮಸ್ತ್, ಜೆಡಿಎಸ್ ಮುಖಂಡ ನಾಸೀರ್ ಹುಸೇನ್ ಉಸ್ತಾದ್, ವಾಹೇಜ್ ಬಾಬಾ, ಶೇಖ್ ಇಜಾಜ್ ಅಲಿ, ಮೌಲಾನಾ ಇಬ್ರಾಹಿಂ, ಮಂಜುನಾಥ್ ನಾಲವಾರಕರ ಹಾಗೂ ಇನ್ನಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.