ಕಲಬುರಗಿ: ಲಾಕ್ ಡೌನ್ ಸಂದರ್ಭದಲ್ಲಿ ನಿರ್ಗತಿಕರು ಊಟ, ವಸತಿ ಇಲ್ಲದೇ ಬಳಲುವುದನ್ನು ತಪ್ಪಿಸಲು ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳನ್ನು ತೆರೆಯಬೇಕೆಂದು ಡಿಸಿಎಂ ಗೋವಿಂದ ಕಾರಜೋಳ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಗುರುವಾರ ಕೊವಿಡ್ -19 ಸೋಂಕು ಕುರಿತಂತೆ ಜಿಲ್ಲಾ ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ನಿರ್ಗತಿಕರು ಊಟ ಇಲ್ಲದೇ ಹಸಿವಿನಿಂದ ಬಳಲು ಬಾರದು. ಯಾರೇ ಬಂದರೂ ಇಂದಿನಿಂದಲೇ ವಸತಿ ನಿಲಯಗಳಲ್ಲಿ ಊಟದ ವ್ಯವಸ್ಥೆ ಮಾಡಿ ಎಂದು ನಿರ್ದೇಶಕ ನೀಡಿದರು.
ರಾಜ್ಯದ ಸಮಾಜ ಕಲ್ಯಾಣ ಇಲಾಖೆಯ ವಸತಿ ನಿಲಯಗಳಲ್ಲಿ 14,800 ಕ್ವಿಂಟಲ್ ಅಕ್ಕಿ, ಉಪ್ಪಿಟ್ಟು ರವೆ, ಇಡ್ಲಿ ರವೆ, ಎಣ್ಣೆ ಅಗತ್ಯ ದಿನಸಿ ಇದೆ. ತರಕಾರಿ ಮಾತ್ರ ಖರೀದಿಸಬೇಕಾಗುತ್ತದೆ. ತಕ್ಷಣವೇ ತರಕಾರಿ ಖರೀದಿಸಿ ಎಲ್ಲಿ ಅವಶ್ಯ ಇದೆಯೋ ಅಲ್ಲಿ ವಸತಿ ನಿಲಯಗಳನ್ನು ಆರಂಭಿಸಿ ನಿರ್ಗತಿಕರಿಗೆ ವ್ಯವಸ್ಥೆ ಕಲ್ಪಿಸಬೇಕೆಂದರು.
1,200 ರೂ. ಕಿಟ್: ಲಾಕ್ ಡೌನ್ ನಿಂದ ಹಡಪದ ಸಮಾಜದವರು ಸಾಕಷ್ಟು ಸಮಸ್ಯೆಗೆ ಸಿಲುಕಿದ್ದಾರೆ. ಕ್ಷೌರಿಕ ಅಂಗಡಿಗಳು ಬಂದ್ ಆಗಿರುವುದರಿಂದ ಅವರು ಸಮಸ್ಯೆ ಎದುರಿಸುತ್ತಿದ್ದಾರೆ. ಹೀಗಾಗಿ ಅವರಿಗೆ ಅಡುಗೆ ದಿನಸಿಯ 1,200 ರೂ. ಮೊತ್ತದ ಕಿಟ್ ನೀಡುವಂತೆ ಜಿಲ್ಲಾಧಿಕಾರಿಗೆ ಸೂಚಿಸಿದರು. ಮಹಾರಾಷ್ಟ್ರದಲ್ಲಿ ಅಫಜಲಪುರ ಕ್ಷೇತ್ರದ ಹೇರೂರ ಗ್ರಾಮದವರು ಸಿಲುಕಿದ್ದಾರೆ. ಅವರನ್ನು ಕರೆ ತರಲು ವ್ಯವಸ್ಥೆ ಮಾಡಿ ಎಂದು ಶಾಸಕ ಎಂ.ವೈ.ಪಾಟೀಲ್ ಅವರು ಡಿಸಿಎಂ ಗಮನ ಸೆಳೆದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಎಂ, ಬೇರೆ ರಾಜ್ಯಗಳಿಂದ ಜನರನ್ನು ಕರೆ ತರಲು ಆಗಲ್ಲ. ಬದಲಿಗೆ ಅವರಿರುವ ಸ್ಥಳದಲ್ಲೇ ಸೌಲಭ್ಯ ಕಲ್ಪಿಸಲಾಗುವುದು. ಯಾರೂ ಆತಂಕಪಡುವ ಅಗತ್ಯವಿಲ್ಲ ಎಂದು ಭರವಸೆ ವ್ಯಕ್ತಪಡಿಸಿದರು.