ಕಲಬುರಗಿ: ಜಿಲ್ಲೆಯಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೋವಿಡ್-19 (ಕೊರೊನಾ) ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಗಡಿ ಭಾಗದ ಮಹಾರಾಷ್ಟ್ರ , ತೆಲಂಗಾಣ ಹಾಗೂ ಹೊರ ಜಿಲ್ಲೆಗಳಿಂದ ಬರುವ ಜನರನ್ನು ತಡೆಯಬೇಕು. ಒಂದು ವೇಳೆ ಕದ್ದುಮುಚ್ಚಿ ಒಳಗೆ ಬರುವಂತ ಜನರನ್ನು ಆಯಾ ತಾಲೂಕಿನ ಹಾಸ್ಟೆಲ್‌ಗಳಲ್ಲೇ 14 ದಿನಗಳ ಕಾಲ ಕಡ್ಡಾಯವಾಗಿ ಕ್ವಾರಂಟೈನ್‌ನಲ್ಲಿ ಇಡಬೇಕೆಂದು ಸಂಸದ ಡಾ| ಉಮೇಶ ಜಾಧವ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೋವಿಡ್-19 ಪಾಸಿಟಿವ್ ಪ್ರಕರಣಗಳು ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಗುರುವಾರ ನಗರದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಜನಪ್ರತಿನಿಧಿ ಗಳು, ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು. ಸಂಸದರ ಸಲಹೆಗೆ ಪ್ರತಿಕ್ರಿಯಿಸಿದ ಜಿಪಂ ಸಿಇಒ ಡಾ| ಪಿ. ರಾಜಾ, ಕ್ವಾರಂಟೈನ್‌ಗಾಗಿ ಈಗಾಗಲೇ ವಸತಿ ನಿಲಯಗಳನ್ನು ಗುರುತಿಸಲಾಗಿದ್ದು, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾಧಿಕಾರಿ ಶರತ್ ಬಿ. ಮಾತನಾಡಿ, ಬೇರೆಡೆಯಿಂದ ಜಿಲ್ಲೆಗೆ ಜನ ಬರುವುದು ನಿಲ್ಲುತ್ತಿಲ್ಲ. ಇದು ದೊಡ್ಡ ಸಮಸ್ಯೆಯಾಗಿದೆ ಎಂದರು. ಇದಕ್ಕೆ ಧ್ವನಿಗೂಡಿಸಿದ ಎಸ್‌ಪಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಬೆಂಗಳೂರು ಸೇರಿದಂತೆ 500-600 ಕಿ.ಮೀ ದೂರದಿಂದ ಬರುತ್ತಾರೆ. ಒಂದು ವೇಳೆ ಜಿಲ್ಲೆಯ ಗಡಿಯಲ್ಲಿ ತಡೆದರೂ, ಹೊಲಗಳ ಮಧ್ಯೆ ಕಾಲುದಾರಿಗಳಲ್ಲಿ ಅವರವರ ಊರು ಸೇರಿಕೊಳ್ಳುತ್ತಿದ್ದಾರೆ ಎಂದು ಹೇಳಿದರು.
ಪ್ರಾದೇಶಿಕ ಆಯುಕ್ತ ಡಾ| ಎನ್.ವಿ. ಪ್ರಸಾದ್ ಮಾತನಾಡಿ, ಪೊಲೀಸರು, ಗ್ರಾಮ ಪಂಚಾಯಿತಿ ಅ ಧಿಕಾರಿಗಳು, ಆಶಾ ಕಾರ್ಯಕರ್ತೆಯರು ನಿತ್ಯ ಗ್ರಾಮಗಳಿಗೆ ಭೇಟಿ ನೀಡಿ, ಹೊಸದಾಗಿ ಬರುವವರ ಮಾಹಿತಿ ಪಡೆಯಬೇಕೆಂದು ಸೂಚಿಸಿದರು. ನಗರ ಪೊಲೀಸ್ ಅಯುಕ್ತ ಎನ್. ಸತೀಶಕುಮಾರ ಮಾತನಾಡಿ, ಆರೋಗ್ಯ ಮತ್ತಿತರ ಅನಿವಾರ್ಯ ಕಾರ್ಯಗಳ ನಿಮಿತ್ತ ಕೊರೊನಾ ಪಾಸ್‌ಗಳನ್ನು ಪಡೆದು ಬೇರೆ ರಾಜ್ಯ ಅಥವಾ ಜಿಲ್ಲೆಗಳಿಗೆ ಹೋದವರು ಅಲ್ಲಿಯೇ ಇರಬೇಕು. ಒಂದು ವೇಳೆ ವಾಪಸ್ ಬಂದಲ್ಲಿ ಅವರನ್ನು 14 ದಿನ ಹೋಂ ಕ್ವಾರಂಟೈನ್‌ನಲ್ಲಿ ಇಡಲಾಗುತ್ತದೆ ಎಂದರು.
ವೈದ್ಯರಿಗೂ ಕ್ವಾರಂಟೈನ್: ಇಎಸ್‌ಐ, ಜಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾ ಐಸೋಲೇಷನ್ ವಾರ್ಡ್‌ಗಳಲ್ಲಿ ಸೇವೆ ಸಲ್ಲಿಸುವ ಕೆಲ ವೈದ್ಯರು, ಪ್ಯಾರಾಮೆಡಿಕಲ್ ಸಿಬ್ಬಂದಿ, ನರ್ಸ್ ಕರ್ತವ್ಯದ ಬಳಿಕ ಅವರವರ ಮನೆಗೆ ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದ ಸಂಸದರು, ವೈದ್ಯರು ಮತ್ತು ಸಿಬ್ಬಂದಿಯನ್ನು ಕ್ವಾರಂಟೈನ್ ಮಾಡಬೇಕು ಎಂದು ಸೂಚಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾಧಿಕಾರಿಗಳು, ವೈದ್ಯರು, ಸಿಬ್ಬಂದಿ ಕ್ವಾರಂಟೈನ್‌ಗಾಗಿ ಗ್ರ್ಯಾಂಡ್ ಹೋಟೆಲ್ ಕಾಯ್ದಿರಿಸಲಾಗಿದೆ ಎಂದರು. ಸಿಇಒ ಡಾ| ರಾಜಾ ಪಿ. ಮಾತನಾಡಿ, ಇಎಸ್‌ಐ ಆಸ್ಪತ್ರೆಯಲ್ಲಿ 40 ಕೊಠಡಿ ಗುರುತಿಸಲಾಗಿದೆ. ವೈದ್ಯಕೀಯ ಸಿಬ್ಬಂದಿಗೂ ಇಲ್ಲಿ ಉಳಿದುಕೊಳ್ಳಲು ವ್ಯವಸ್ಥೆ ಇದೆ. ಯಾರೂ ಕ್ವಾರಂಟೈನ್ ಆಗುತ್ತಿಲ್ಲ ಎಂದು ಮಾಹಿತಿ ನೀಡಿದರು. ಇದಕ್ಕೆ ಉತ್ತರಿಸಿದ ಸಂಸದ ಜಾಧವ, ಅವರವರ ಕುಟುಂಬದವರ ಆರೋಗ್ಯದ ದೃಷ್ಟಿಯಿಂದ ಕಡ್ಡಾಯವಾಗಿ ಕ್ವಾರಂಟೈನ್ ಆಗಬೇಕು ಎಂದು ವೈದ್ಯಕೀಯ ಸಿಬ್ಬಂದಿಯಲ್ಲಿ ಮನವಿ ಮಾಡಿದರು. ಅಲ್ಲದೇ ಕೂಡಲೇ ಈ ಕುರಿತು ಕ್ರಮ ಕೈಗೊಳ್ಳುವಂತೆ ಡಿಎಚ್‌ಒ ಡಾ| ಜಬ್ಟಾರ್‌ಗೆ ಸೂಚಿಸಿದರು.
ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮುತ್ತಿಮಡು, ವಿಧಾನ ಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ತಿಪ್ಪಣ್ಣಪ್ಪ ಕಮಕನೂರ, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಇಎಸ್‌ಐ ಆಸ್ಪತ್ರೆ ಡೀನ್ ನಾಗರಾಜ, ಜಿಮ್ಸ್ ನಿರ್ದೇಶಕಿ ಡಾ| ಕವಿತಾ ಪಾಟೀಲ ಮುಂತಾದವರು ಹಾಜರಿದ್ದರು.