ಕಲಬುರಗಿ: ಸಮ್ಮೇಳನ ಎಂದರೆ ಸಾಹಿತ್ಯ, ಪುಸ್ತಕದ ಜತೆಗೆ ನೆನಪಾಗುವುದೇ ಊಟ. ಕಲಬುರಗಿಯಲ್ಲಿ ನಡೆದ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಕ್ಷರ ಸವಿಯ ಜತೆಗೆ ನಾಲಿಗೆ ರುಚಿಯನ್ನೂ ಸ್ಮರಿಸುವಂತೆ ಮಾಡಿತು.
ಸಮ್ಮೇಳನದ ಮೊದಲನೇ ದಿನ ನಾನಾ ಭಾಗಗಳಿಂದ ಆಗಮಿಸಿದ ಸಾಹಿತ್ಯಾಸಕ್ತರು ಉತ್ತರ ಕರ್ನಾಟಕ ಶೈಲಿಯ ಊಟ ಸವಿದು ನಾಲಿಗೆ ಚಪ್ಪರಿಸಿದರು. ಈ ಭಾಗದ ಊಟವೆಂದರೆ ಉಪ್ಪು ಖಾರದಲ್ಲಿ ತುಸು ಮುಂದೆ. ಜತೆಗೆ ಸಾಂಪ್ರದಾಯಿಕ ಶೈಲಿಯ ಊಟವೆಂದರೆ ಅದರ ಸವಿಯೇ ಅದ್ಭುತ. ಸಮ್ಮೇಳನಕ್ಕೆ ಬರುವ ಜನರಿಗಾಗಿ ವಿಶೇಷ ಆಹಾರಪಟ್ಟಿ ಸಿದ್ಧಪಡಿಸಿದ್ದು, ಜನ ನಾ ಮುಂದು ನೀ ಮುಂದು ಎಂದು ಊಟ ಸವಿಯುತ್ತಿದ್ದರು.
ಬೆಳಗ್ಗೆ 11:30ಕ್ಕೆ ಊಟ ಆರಂಭಿಸಲಾಯಿತು. ಮುಖ್ಯ ವೇದಿಕೆ ಸಮೀಪವೇ ಊಟದ ವ್ಯವಸ್ಥೆ ಮಾಡಿದ್ದು, ಸುಮಾರು 200 ಕೌಂಟರ್‌ಗಳನ್ನು ತೆರೆಯಲಾಗಿದೆ. ಅದರಲ್ಲಿ 100 ಪುರುಷರಿಗೆ, ಉಳಿದ 100ರಲ್ಲಿ ಮಹಿಳೆಯರು, ಮಕ್ಕಳು ವಿಶೇಷಚೇತರಿಗೆ ಮೀಸಲಿಡಲಾಗಿದೆ.
ಲಕ್ಷಕ್ಕೂ ಅಧಿಕ ಜನ: ಖಡಕ್ ಜೋಳ, ಸಜ್ಜೆ ರೊಟ್ಟಿ, ಬಿಸಿ ಚಪಾತಿ, ಬದನೆಕಾಯಿ, ಮಡಿಕೆ ಕಾಳು, ಶೇಂಗಾ ಚಟ್ನಿ, ಮಾವಿನ ಚಟ್ನಿ, ಅನ್ನ ಸಾರು ನೀಡಲಾಯಿತು. ಮಧ್ಯಾಹ್ನ ಒಂದು ಲಕ್ಷಕ್ಕೂ ಅಧಿಕ ಜನ ಊಟ ಸವಿದರು. ಬೆಳಗ್ಗೆ ಅಂದಾಜು 50 ಸಾವಿರಕ್ಕೂ ಅಧಿಕ ಜನ ಉಪ್ಪಿಟ್ಟು, ಸಿರಾ ಸೇವಿಸಿದರು. ರಾತ್ರಿಗೆ ವಾಂಗಿ ಬಾತ್ ಮತ್ತು ಅನ್ನ ಸಾರು ಮಾಡಲಾಗಿತ್ತು. ಬೃಹದಾಕಾರದ ಪೆಂಡಾಲ್ ಹಾಕಿ ನೆಲಹಾಸು ಹಾಕಿದ್ದರಿಂದ ಜನ ನೆಲದ ಮೇಲೆಯೇ ಪಂಕ್ತಿ ಪ್ರಕಾರ ಕುಳಿತು ಭೋಜನ ಸವಿದರು. ಅಡುಗೆ ತಯಾರಿಕೆ ಸಂಸ್ಥೆಯ ಎರಡು ಸಾವಿರ ನೌಕರರ ಜತೆಗೆ ವಿವಿಧ ಶಾಲಾ-ಕಾಲೇಜು ವಿದ್ಯಾರ್ಥಿಗಳು ಕೂಡ ಊಟ ಬಡಿಸಿದರು. ವೇದಿಕೆ ಕಾರ್ಯಕ್ರಮ ಮುಗಿಯುತ್ತಿದ್ದಂತೆ ಜನಸಂದಣಿ ಹೆಚ್ಚಾಗಿ ಅಲ್ಲಲ್ಲಿ ನೂನುಕುಗ್ಗಲು ಉಂಟಾಯಿತು. ಆದರೆ, ಆಯೋಜಕರು ಮಾತ್ರ ಶಿಸ್ತು ಕಾಪಾಡುವಲ್ಲಿ ಹೆಚ್ಚು ಮುತುವರ್ಜಿ ವಹಿಸುತ್ತಿದ್ದು ಕಂಡು ಬಂತು.
ಊಟ ತುಂಬಾ ರುಚಿಯಾಗಿತ್ತು. ಅದರಲ್ಲೂ ರೊಟ್ಟಿ ಊಟ ಹಿಡಿಸಿತು. ನಮ್ಮ ಭಾಗದಲ್ಲಿ ಮುದ್ದೆ ಬಳಸುವ ಕಾರಣ ಇಂಥ ಊಟ ಸಿಗುವುದು ಅಪರೂಪ. ಅಚ್ಚುಕಟ್ಟಾಗಿ ಆಯೋಜನೆ ಮಾಡಿದ್ದಾರೆ. ಎಷ್ಟು ಜನ ಬಂದರೂ ಗಲಾಟೆ ಆಗದಂತೆ ವ್ಯವಸ್ಥೆ ಮಾಡಿದ್ದಾರೆ.
ಉಮಾ, ತುಮಕೂರು
ಬೆಳಗ್ಗೆಯಿಂದಲೇ ಜನ ನಿರೀಕ್ಷೆ ಮೀರಿ ಬರುತ್ತಿದ್ದಾರೆ. ಹೀಗಾಗಿ ಬೇಗನೇ ಊಟ ಆರಂಭಿಸಲಾಯಿತು. ಯಾವ ಪದಾರ್ಥವೂ ಕೊರತೆಯಾಗದಂತೆ ಸಿದ್ಧಪಡಿಸಲಾಗುತ್ತಿದೆ. ಮೊದಲನೇ ದಿನ ಒಂದು ಲಕ್ಷಕ್ಕೂ ಅಧಿಕ ಜನ ಊಟ ಸವಿದಿದ್ದಾರೆ.
ಬಾಬುಲಾಲ್ ಪ್ರಜಾಪತ್,
ಬೆಹರೂ ಕ್ಯಾಟರಸ್ ಮಾಲೀಕ
ಸಿದ್ಧಯ್ಯಸ್ವಾಮಿ ಕುಕನೂರು