Advertisement

ಉತ್ತರ ಕ್ಷೇತ್ರದಲ್ಲಿ ಸಂಸದ ಜಾಧವ ಸಂಚಾರ

09:50 AM Jun 14, 2019 | Naveen |

ಕಲಬುರಗಿ: ಸಂಸದ ಡಾ| ಉಮೇಶ ಜಾಧವ ಗುರುವಾರ ಕಲಬುರಗಿ ಮಹಾನಗರದ ಉತ್ತರ ಮತಕ್ಷೇತ್ರದಲ್ಲಿ ಮಿಂಚಿನ ಸಂಚಾರ ಕೈಗೊಂಡು ಪರಿಸ್ಥಿತಿ ಅವಲೋಕಿಸಿದರು.

Advertisement

ಪ್ರಸಿದ್ಧ ಖಾಜಾ ಬಂದೇನವಾಜ್‌ ದರ್ಗಾ ದರ್ಶನ ಕೈಗೊಳ್ಳುವ ಮೂಲಕ ಕಲಬುರಗಿ ಉತ್ತರ ಮತಕ್ಷೇತ್ರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿದ ಸಂಸದರು, ನಾಗರಿಕರ ಸಮಸ್ಯೆಗಳನ್ನು ಆಲಿಸಿದರು.

ಕುಡಿಯುವ ನೀರು ಹಾಗೂ ಚರಂಡಿ ಸಮಸ್ಯೆ ಕುರಿತು ಸಾರ್ವಜನಿಕರು ಸಂಸದರ ಎದುರು ಅಳಲು ತೋಡಿಕೊಂಡು. ತುರ್ತಾಗಿ ಸಮಸ್ಯೆಗಳಿಗೆ ಸ್ಪಂದಿಸಲು ಮುಂದಾಗುವುದರ ಜತೆಗೆ ನನೆಗುದಿಗೆ ಬಿದ್ದ ಕಾಮಗಾರಿಗಳನ್ನು ಹದಿನೈದು ದಿನಗಳೊಳಗೆ ಪೂರ್ತಿಗೊಳಿಳಿಸುವಂತೆ ಪಾಲಿಕೆ ಆಯುಕ್ತರಿಗೆ ಸಂಸದರು ತಾಕೀತು ಮಾಡಿದರು.

ಈಗಾಗಲೇ ಇಎಸ್‌ಐ ಆಸ್ಪತ್ರೆ, ಕೇಂದ್ರೀಯ ವಿವಿಗೆ ಭೇಟಿ ನೀಡಿದ್ದಲ್ಲದೇ ಯಾದಗಿರಿಯಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಪಾಲ್ಗೊಂಡಿರುವ ಸಂಸದ ಡಾ| ಉಮೇಶ ಜಾಧವ, ಕೇಂದ್ರ ಸಂಪುಟ ರಚನೆ ಮರುದಿನವೇ ರೈಲ್ವೆ ಹಾಗೂ ವಿಮಾನಯಾನ ಸಚಿವರಿಗೆ ಮನವಿ ಸಲ್ಲಿಸಿ, ಬೇಡಿಕೆ ಈಡೇರುವಂತೆ ಆಗ್ರಹಿಸಿದ್ದರು.

ಸಂಸತ್‌ ಸದಸ್ಯರಾಗಿ ಕೇಂದ್ರ ಸಂಪುಟ ಪ್ರಮಾಣ ವಚನ ಸಮಾರಂಭದಲ್ಲಿ ಪಾಲ್ಗೊಂಡ ನಂತರ ಜಿಲ್ಲೆಯ ಕಾಳಗಿ ತಾಲೂಕಿನ ಮಂಗಲಗಿ ಗ್ರಾಮದಲ್ಲಿ ಸಿಡಿಲು ಬಡಿದು ಮೃತಪಟ್ಟ ಕುಟುಂಬಕ್ಕೆ ಸಾಂತ್ವನ ಹೇಳುವ ಮುಖಾಂತರ ಸೇವೆ ಆರಂಭಿಸಿರುವ ಸಂಸದ ಜಾಧವ ಅವರು, ದಿನನಿತ್ಯ ಪ್ರವಾಸ ಕೈಗೊಳ್ಳುತ್ತಲೇ ಇದ್ದಾರೆ.

Advertisement

ಲೋಕಸಭೆ ಚುನಾವಣೆಯಲ್ಲಿ ಕಲಬುರಗಿ ಉತ್ತರ ಮತಕ್ಷೇತ್ರದಲ್ಲಿ ಕಡಿಮೆ ಮತಗಳು ಬಂದಿದ್ದರೂ, ಕ್ಷೇತ್ರದ ಅಭಿವೃದ್ಧಿ ಕಾರ್ಯದ ಬಗ್ಗೆ ಸಂಸದರು ಆಸಕ್ತಿ ಹೊಂದಿರುವುದು ಬಡಾವಣೆ ನಾಗರಿಕರ ಮೆಚ್ಚುಗೆಗೆ ಪಾತ್ರವಾಯಿತು.

ಬಿಜೆಪಿ ಯುವ ಮುಖಂಡ ಚಂದು ಪಾಟೀಲ ಕಲಬುರಗಿ ಉತ್ತರ ಕ್ಷೇತ್ರದಲ್ಲಿನ ಸಮಸ್ಯೆಗಳ ಬಗ್ಗೆ ಸಂಸದರಿಗೆ ವಿವರಿಸಿದರು. ಬಿಜೆಪಿ ಮುಖಂಡ ಜಬ್ಟಾರಸಾಬ್‌ ಕಾಳಗಿ, ವಾಹಬ್‌ ಚಿಂಚೋಳಿ, ಪಾಲಿಕೆ ಆಯುಕ್ತೆ ಫೌಜಿಯಾ ತರನ್ನುಮ್‌ ಹಾಗೂ ಇತರ ಅಧಿಕಾರಿಗಳು ಈ ಸಂದರ್ಭದಲ್ಲಿದ್ದರು.

ಜನತಾ ದರ್ಶನ ಆಯೋಜನೆಗೆ ಚಿಂತನೆ
ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಹೇಳಿರುವಂತೆ ಮತದಾರ ಪ್ರಭುಗಳ ಬಳಿ ಬಂದು ಸಮಸ್ಯೆಗಳನ್ನು ಆಲಿಸುತ್ತಿರುವೆ. ಅದೇ ರೀತಿ ಜನತಾ ದರ್ಶನ ಆಯೋಜಿಸಲು ಉದ್ದೇಶಿಸಲಾಗಿದೆ. ಒಟ್ಟಾರೆ ಮುಂದಿನ ದಿನಗಳಲ್ಲಿ ಸಮಸ್ಯೆಗಳನ್ನು ಬಗೆಹರಿಸಲು ಸಮಗ್ರ ಕ್ರಿಯಾಯೋಜನೆ ರೂಪಿಸಲು ಮುಂದಾಗಲಾಗುವುದು. ಒಟ್ಟಾರೆ ತಮ್ಮ ಕಾರ್ಯಗಳ ಆದ್ಯತೆ ಜನಸಾಮಾನ್ಯರದ್ದಾಗಿದೆ.
•ಡಾ| ಉಮೇಶ ಜಾಧವ,
ಸಂಸದರು, ಕಲಬುರಗಿ
Advertisement

Udayavani is now on Telegram. Click here to join our channel and stay updated with the latest news.

Next