ಕಲಬುರಗಿ: ರಾಜ್ಯ ಸರ್ಕಾರ 2019-2024ನೇ ಸಾಲಿಗೆ ತಯಾರಿಸಿರುವ ಹೊಸ ಕೈಗಾರಿಕಾ ನೀತಿಯಲ್ಲಿ ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಎರಡನ್ನೂ ಒಂದೇ ವಲಯದಲ್ಲಿ ಅಳವಡಿಸುವ ಮೂಲಕ ಅನ್ಯಾಯ ಮಾಡಲು ಹೊರಟಿದೆ ಎಂದು ಹೈದ್ರಾಬಾದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ಅಧ್ಯಕ್ಷ ಅಮರನಾಥ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಳೆ ಕೈಗಾರಿಕಾ ನೀತಿಯಲ್ಲಿ ಹಿಂದುಳಿದ ಕಲ್ಯಾಣ ಕರ್ನಾಟಕ ಭಾಗ ಪ್ರತ್ಯೇಕವಾದ ವಲಯ-1ರಲ್ಲಿ ಇತ್ತು. ಆದರೆ, 2019-2024ರ ಕೈಗಾರಿಕಾ ನೀತಿಯಲ್ಲಿ ಕಲ್ಯಾಣ ಕರ್ನಾಟಕದೊಂದಿಗೆ ಮುಂಬೈ ಕರ್ನಾಟಕ ಪ್ರದೇಶವನ್ನು ವಲಯ-1ರಲ್ಲಿ ಸೇರಿಸಲು ಉದ್ದೇಶಿಸಲಾಗಿದೆ.
ಇದು ಈ ಭಾಗಕ್ಕೆ ಮತ್ತಷ್ಟು ಮಾರಕವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಪ್ರಾದೇಶಿಕ ಸಮತೋಲನ ಕಾಪಾಡುವ ನಿಟ್ಟಿನಲ್ಲಿ ಕೈಗಾರಿಕಾ ನೀತಿಯನ್ನು ನಾಲ್ಕು ವಲಯಗಳನ್ನಾಗಿ ವಿಂಗಡಿಸಿ ರೂಪಿಸಲಾಗುತ್ತಿದೆ. ಅದರಂತೆ ಹಿಂದುಳಿದ ಕಲ್ಯಾಣ ಕರ್ನಾಟಕ ಪ್ರದೇಶ ಪ್ರತ್ಯೇಕವಾಗಿ ವಲಯ-1, ಕಲ್ಯಾಣ ಕರ್ನಾಟಕಯೇತರ ಭಾಗದ ಪಾಲಿಕೆ, ಜಿಲ್ಲಾ ಕೇಂದ್ರಗಳ ರಹಿತ ವಲಯ-2, ಕಲ್ಯಾಣ ಕರ್ನಾಟಕಯೇತರ ಭಾಗದ ಎಲ್ಲ ಪಾಲಿಕೆ, ಜಿಲ್ಲಾ ಕೇಂದ್ರಗಳ ಸಹಿತ ವಲಯ-3 ಮತ್ತು ಬೆಂಗಳೂರು ನಗರ, ಬೆಂಗಳೂರು ಗ್ರಾಮೀಣ ಮತ್ತು ರಾಮನಗರ ತಾಲೂಕು ಒಳಗೊಂಡ ವಲಯ-4 ಎಂದು ಗುರುತಿಸಲಾಗಿತ್ತು.
ಈಗ ಹೊಸ ಕೈಗಾರಿಕಾ ನೀತಿಯಲ್ಲಿ ವಲಯ-1ರಲ್ಲೇ ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಸೇರಿಸಲಾಗಿದ್ದು, ಇದು ಖಂಡನೀಯವಾಗಿದೆ ಎಂದರು.
ಕಲ್ಯಾಣ ಕರ್ನಾಟಕ ಹಾಗೂ ಮುಂಬೈ ಕರ್ನಾಟಕ ಎರಡನ್ನು ಒಂದೇ ವಲಯದಲ್ಲಿ ಸೇರ್ಪಡೆ ಮಾಡಿರುವುದರಿಂದ ಕಲ್ಯಾಣ ಕರ್ನಾಟಕ ಭಾಗ ವಂಚಿತವಾಗಲಿದೆ. ಈ ಭಾಗಕ್ಕೆ ಸಿಗಬೇಕಾದ ಸೌಕರ್ಯಗಳು, ಕೈಗಾರಿಕೆಗಳು ಮುಂಬೈ ಕರ್ನಾಟಕದ ಪಾಲಾಗುವ ಸಾಧ್ಯತೆ ಇದೆ. ಆದ್ದರಿಂದ ಕಲ್ಯಾಣ ಕರ್ನಾಟಕ ಪ್ರದೇಶವನ್ನು ಪ್ರತ್ಯೇಕವಾಗಿ ವಲಯ-1ರಲ್ಲೇ ಉಳಿಸಬೇಕು. ಈ ಭಾಗದ ಕೈಗಾರಿಕೆಗಳಿಗಾಗಿ ಅತ್ಯವಶ್ಯಕವಿರುವ ವಿದ್ಯುತ್ಛಕ್ತಿ, ನೀರು ಮತ್ತು ಸಂಪರ್ಕ ರಸ್ತೆಗಳ ಸೌಲಭ್ಯಗಳನ್ನು ಒದಗಿಸುವ ಕೆಲಸವನ್ನು ಸರ್ಕಾರ ಮಾಡಬೇಕೆಂದು ಒತ್ತಾಯಿಸಿದರು.
ಹೊಸ ಕೈಗಾರಿಕಾ ನೀತಿಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಕ್ಕಾಗಿ ವಿಶೇಷ ಆರ್ಥಿಕ ವಲಯ (ಎಸ್‌ಇಜೆಡ್)ಗಳನ್ನು ಮತ್ತು ಕೈಗಾರಿಕಾ ಕಾರಿಡಾರ್‌ಗಳನ್ನು ಘೋಷಿಸಬೇಕು. ಈಗಾಗಲೇ ರಾಜ್ಯ ಸರ್ಕಾರ ಮೆಗಾ, ಅಲ್ಟ್ರಾ, ಸೂಪರ್ ಮೆಗಾ ಯೋಜನೆಗಳ ಜಾರಿಗೆ ಆಲೋಚಿಸುತ್ತಿದೆ. ಅದರಲ್ಲಿ ಕಲಬುರಗಿಯಲ್ಲಿ ಹಲವು ವರ್ಷಗಳಿಂದ ನನೆಗುದಿಗೆ ಬಿದ್ದಿರುವ ರಾಷ್ಟ್ರೀಯ ಹೂಡಿಕೆ ಮತ್ತು ಉತ್ಪಾದನಾ ವಲಯ (ನೀಮ್ಜ್ )ವನ್ನು ಸ್ಥಾಪಿಸಬೇಕು. ದಾಲ್ ಮಿಲ್‌ಗಳನ್ನು ಕೃಷಿ ಆಧಾರಿತ ಕೈಗಾರಿಕೆ ಎಂದು ಪರಿವರ್ತಿಸಬೇಕು. ಸಣ್ಣ-ಮಧ್ಯಮ ಕೈಗಾರಿಕೆಗಲ್ಲಿ ಸಾಲ ಬಡ್ಡಿ ಸಬ್ಸಿಡಿ ಶೇ.6ಕ್ಕೆ ಹೆಚ್ಚಿಸಿ 10 ವರ್ಷಕ್ಕೆ ವಿಸ್ತರಿಸಬೇಕು. ಈ ಸಂಬಂಧ ಮುಖ್ಯಮಂತ್ರಿ ಬಿ.ಎಸ್.
ಯಡಿಯೂರಪ್ಪ, ಬಹೃತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್, ಕಂದಾಯ ಸಚಿವ ಆರ್. ಅಶೋಕ ಅವರಿಗೆ ಪತ್ರ ಬರೆಯಲಾಗಿದೆ ಎಂದು ತಿಳಿಸಿದರು. ಶರಣು ಪಪ್ಪಾ, ಶಶಿಕಾಂತ ಪಾಟೀಲ, ಚನ್ನಬಸಪ್ಪ ನಂದಿಕೋಲ ಇದ್ದರು.