ಕಲಬುರಗಿ: ಕೋವಿಡ್ ಸೋಂಕಿತರು ಚಿಕಿತ್ಸೆ ಪಡೆಯುತ್ತಿರುವ ಜಿಮ್ಸ್ ಮತ್ತು ಇಎಸ್‌ಐ ಆಸ್ಪತ್ರೆ ಪ್ರವೇಶದ್ವಾರದ ಬಳಿ ಸಿಸಿ ಕ್ಯಾಮೆರಾ ಅಳವಡಿಸಬೇಕು ಎಂದು ಮೂಲಸೌಕರ್ಯ ಅಭಿವೃದ್ಧಿ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕಪಿಲ್ ಮೋಹನ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಶುಕ್ರವಾರ ಕೋವಿಡ್ ಸೋಂಕು (ಕೋವಿಡ್-19) ನಿಯಂತ್ರಣ ಕುರಿತು ತಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಆಸ್ಪತ್ರೆಯೊಳಗೆ ಬರುವವರ ಮತ್ತು ಹೋಗುವವರ ಮೊಬೈಲ್ ನಂಬರ್ ಸಹಿತ ಸಂಪೂರ್ಣ ಮಾಹಿತಿ ದಾಖಲಿಸಿಕೊಳ್ಳಬೇಕೆಂದು ತಾಕೀತು ಮಾಡಿದರು. ಜಿಮ್ಸ್ ಆಸ್ಪತ್ರೆಯಲ್ಲಿರುವ ಕೋವಿಡ್ ಸೋಂಕಿರುವ ರೋಗಿಗಳ ಕೋವಿಡ್ ವಾರ್ಡ್, ಐಸೋಲೇಷನ್ ವಾರ್ಡ್, ಕ್ವಾರಂಟೈನ್ ಕೇಂದ್ರಗಳಿಗೆ ಹೊರಗಿನ ವ್ಯಕ್ತಿಗಳು ಹೋಗಿ ವಿಡಿಯೋ ಮಾಡುವುದು, ಫೋಟೋ ತೆಗೆಯುತ್ತಿರುವ ಬಗ್ಗೆ ಮಾಹಿತಿ ಬಂದಿದೆ. ಇಂತವರನ್ನು ಪ್ರೈಮರಿ ಕಾಂಟ್ಯಾಕ್ಟ್ ಆಗಿ ಕ್ವಾರಂಟೈನ್ ಮಾಡಬೇಕು. ಜತೆಗೆ ಇಂತಹವರ ವಿರುದ್ಧ ರಾಷ್ಟ್ರೀಯ ವಿಕೋಪ ನಿರ್ವಹಣೆ (ಎನ್‌ಡಿಎಂ) ಕಾಯ್ದೆಯಡಿ ಪ್ರಕರಣ ದಾಖಲಿಸಿ ಬಂ ಧಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ನಿದೇರ್ಶನ ನೀಡಿದರು. ನಗರ ಪೊಲೀಸ್ ಆಯುಕ್ತ ಸತೀಶ ಕುಮಾರ ಮಾತನಾಡಿ, ಆಸ್ಪತ್ರೆಯಲ್ಲಿ ಫೋಟೋ ಮತ್ತು ವಿಡಿಯೋ ಮಾಡಿದ ವ್ಯಕ್ತಿಯೊಬ್ಬರ ಬಗ್ಗೆ ಈಗಾಗಲೇ ಮಾಹಿತಿ ಪಡೆದಿದ್ದು, ಶೀಘ್ರವೇ ಬಂಧಿಸಲಾಗುವುದು. ಅಕ್ರಮವಾಗಿ ಪ್ರವೇಶಿಸಿದವರ ಬಗ್ಗೆ ಆಸ್ಪತ್ರೆ ನಿರ್ದೇಶಕರು ಮಾಹಿತಿ ನೀಡಿದಲ್ಲಿ, ಬಂಧನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.
ತೆಲಂಗಾಣದಿಂದ ಪಾಸ್: ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಿಸುವ ನಿಟ್ಟಿನಲ್ಲಿ ಹೊರ ರಾಜ್ಯ ಮತ್ತು ಹೊರ ಜಿಲ್ಲೆಯಿಂದ ಬರುವವರ ಬಗ್ಗೆ ತೀವ್ರ ನಿಗಾವಹಿಸಬೇಕು. ಜಿಲ್ಲೆಯ ಗಡಿಗಳಲ್ಲಿ ತಪಾಸಣಾ ಶಿಬಿರ ತೆರೆದು, ಜ್ವರ ಸೇರಿದಂತೆ ಕೊರೊನಾ ಸೋಂಕು ಪರೀಕ್ಷಿಸಬೇಕು. ಬಳಿಕ ಅವರನ್ನು 28 ದಿನಗಳ ಕಾಲ ಕ್ವಾರಂಟೈನ್‌ನಲ್ಲಿಟ್ಟು ನಿಗಾವಹಿಸಬೇಕೆಂದು ತಿಳಿಸಿದರು. ತೆಲಂಗಾಣದಲ್ಲಿರುವ ಕಲಬುರಗಿ ಜಿಲ್ಲೆಯ ಜನತೆಗೆ ಅಲ್ಲಿಯ ಸರ್ಕಾರ ಪಾಸ್ ಕೊಟ್ಟು ಕಳುಹಿಸುತ್ತಿದೆ. ಗಡಿಯಲ್ಲಿ ಇವರೆಲ್ಲರನ್ನು ಕೂಡ ತಪಾಸಣೆ ಮಾಡಿ, ಜಿಲ್ಲೆಯೊಳಗೆ ಕರೆದುಕೊಳ್ಳಬೇಕು ಎಂದು ಸೂಚಿಸಿದರು. ಜಿ.ಪಂ ಸಿಇಒ ಡಾ| ರಾಜಾ ಪಿ., ನೆರೆರಾಜ್ಯ ಮತ್ತು ವಿವಿಧ ಜಿಲ್ಲೆಗಳಿಂದ ಜಿಲ್ಲೆಗೆ ಬಂದಿರುವ ಜನರನ್ನು ಹೋಂ ಕ್ವಾರಂಟೈನ್ ನಲ್ಲಿ ಇಡಲಾಗಿತ್ತು. ಹೊರಗಡೆಯಿಂದ ಬಂದ ಐದು ಸಾವಿರ ಮಂದಿಗೆ ಅಜೀಂಪ್ರೇಮ್‌ಜಿ ಫೌಂಡೇಶನ್ ವತಿಯಿಂದ ಆಹಾರ ಸಾಮಗ್ರಿಗಳ ಕಿಟ್‌ಗಳನ್ನು ನೀಡಲಾಗಿದೆ.
ಜಿಲ್ಲಾಡಳಿತದ ವತಿಯಿಂದ ಇಂತಹ ಜನರಿಗೆ ತಾಲೂಕುವಾರು ತಲಾ 5 ಕೆ.ಜಿಯ ಆಹಾರ ಸಾಮಗ್ರಿಗಳ ಕಿಟ್ ಗಳನ್ನು ನೀಡಲು ಕ್ರಮ ಕೈಗೊಳ್ಳಬೇಕೆಂದು ತಿಳಿಸಿದರು. ಜಿಲ್ಲೆಯಲ್ಲಿ 247 ಮಂದಿ ಹೊರರಾಜ್ಯದ ವಲಸೆ ಕಾರ್ಮಿಕರಿದ್ದು, ಅವರಿಗೆ ನಿತ್ಯ ಊಟದ ವ್ಯವಸ್ಥೆ ಮಾಡಲಾಗಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿ ಶ್ರೀಹರಿ ದೇಶಪಾಂಡೆ ಮಾಹಿತಿ ನೀಡಿದರು. ಪ್ರಾದೇಶಿಕ ಆಯುಕ್ತ ಡಾ| ಎನ್. ವಿ. ಪ್ರಸಾದ, ಜಿಲ್ಲಾಧಿಕಾರಿ ಶರತ್ ಬಿ., ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಯಡಾ ಮಾರ್ಟಿನ್ ಮಾರ್ಬನ್ಯಾಂಗ್, ಮಹಾನಗರ ಪಾಲಿಕೆ ಆಯುಕ್ತ ರಾಹುಲ್ ಪಾಂಡ್ವೆ, ಅಪರ ಜಿಲ್ಲಾಧಿ ಕಾರಿ ಶಂಕರ ವಣಿಕ್ಯಾಳ, ಐಎಎಸ್ ಪ್ರೊಬೇಷನರಿ ಅಧಿಕಾರಿ ಗೋಪಾಲಕೃಷ್ಣ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ| ಎಂ.ಎ. ಜಬ್ಟಾರ್, ಜಿಲ್ಲಾ ಸರ್ಜನ್ ಡಾ| ಎ.ಎಸ್. ರುದ್ರವಾಡಿ ಇದ್ದರು.