Advertisement

ಮಹಾದೇವಿಯಕ್ಕ ಸ್ತ್ರೀಕುಲಕ್ಕೆ ಮುಕುಟ ಮಣಿ

12:29 PM Aug 11, 2019 | Naveen |

ಕಲಬುರಗಿ: ಮಾನವ ಕುಲಕ್ಕೆ, ಅದರಲ್ಲೂ ಸ್ತ್ರೀ ಕುಲಕ್ಕೆ ಮಹಾದೇವಿಯಕ್ಕ ಮುಕುಟ ಮಣಿಯಾಗಿದ್ದಾರೆ ಎಂದು ಶರಣಬಸವ ವಿದ್ಯಾವರ್ಧಕ ಸಂಘದ ಚೇರಮನ್‌ರಾದ 12ನೇ ಮಹಾದೇವಿಯಕ್ಕಗಳ ಸಮ್ಮೇಳನದ ಸರ್ವಾಧ್ಯಕ್ಷೆ ಮಾತೋಶ್ರೀ ದಾಕ್ಷಾಯಿಣಿ ಶರಣಬಸವಪ್ಪ ಅಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಇಲ್ಲಿನ ಜಯನಗರದ ಅನುಭವ ಮಂಟಪದಲ್ಲಿ ಬಸವ ಸಮಿತಿ ಅಕ್ಕನ ಬಳಗ ವತಿಯಿಂದ ಹಮ್ಮಿಕೊಂಡಿರುವ ಎರಡು ದಿನಗಳ 12ನೇ ಮಹಾದೇವಿಯಕ್ಕಗಳ ಸಮ್ಮೇಳನ ಸರ್ವಾಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

12ನೇ ಶತಮಾನದಲ್ಲಿ ಬಸವವಾದಿ ಶರಣರು ಮಾಡಿದ ಕ್ರಾಂತಿ ಫಲವಾಗಿ 21ನೇ ಶತಮಾನದ ಮಹಿಳೆಯರು ಪ್ರಜ್ವಲಿಸುತ್ತಿದ್ದಾರೆ. ಅಂದಿನ ಕ್ರಾಂತಿ, ಇಂದಿನ ಮಹಿಳೆಯರ ಬದುಕಿಗೆ ಬೆಳಕಾಗಿದೆ. ದಿನೇ ದಿನೇ ಸ್ತ್ರೀ ಶಕ್ತಿ ಪ್ರಬಲವಾಗುತ್ತಿದೆ. ಇದಕ್ಕೆ ಮಹಾದೇವಿಯಕ್ಕನ ಆಶೀರ್ವಾದ ಕಾರಣ ಎಂದರು.

ಪ್ರಸ್ತುತ ದಿನದಲ್ಲಿ ಹೆಣ್ಣು ಸಮಾಜಕ್ಕೆ ಕಣ್ಣಾಗಿದ್ದಾಳೆ. ಗಂಡಿಗೆ ಗಂಡಾಗಿ ಆತನ ಹೆಗಲಿಗೆ ಹೆಗಲಾಗಿ ದುಡಿಯುತ್ತಿದ್ದಾಳೆ. ಎಲ್ಲ ಕ್ಷೇತ್ರದಲ್ಲಿ ತನ್ನದೇಯಾದ ಕೊಡುಗೆ ಕೊಡುತ್ತಿದ್ದಾಳೆ. ಸ್ತ್ರೀ ಸಬಲಿಕರಣಕ್ಕಾಗಿ ಅನೇಕ ಮಠ ಮಾನ್ಯಗಳು ನಿರಂತರ ಪ್ರಯತ್ನಿಸುತ್ತಿವೆ ಎಂದರು.

ಬಸವಣ್ಣನವರ ‘ಕಾಯಕ’ ಮತ್ತು ‘ದಾಸೋಹ’ ಎಂಬ ಎರಡು ಸಾಮಾಜಿಕ, ಆರ್ಥಿಕ ತತ್ವಗಳು ಈಗ ಹೆಚ್ಚು ಪ್ರಸಿದ್ಧವಾಗಿದೆ. ಶ್ರೀಮಂತ ಮತ್ತು ಬಡವರ ನಡುವಿನ ಅಂತರ, ಅಸ್ಪೃಶ್ಯತೆ, ತಾರತಮ್ಯದ ಅಂತರದ ವಿರುದ್ಧ ಧ್ವನಿ ಎತ್ತಿದವರು ಬಸವಣ್ಣನವರು. ಅವರನ್ನೂ ಹಿಂಬಾಲಿಸಿದರೂ ಉಳಿದೆಲ್ಲ ಶಿವಶರಣರು, 12ನೇ ಶತಮಾನದ ತತ್ವಗಳು 21ನೇ ಶತಮಾನಕ್ಕೆ ದಾರಿದೀಪವಾಗಿವೆ. ಸ್ವಸ್ಥ ಭಾರತಕ್ಕೆ ಅಡಿಪಾಯವಾಗಿದೆ ಎಂದು ಹೇಳಿದರು.

Advertisement

ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಸಮಾಜ ಸೇವಕಿ ಮಧುರಾ ಅಶೋಕ, ನಗರದ ಪ್ರದೇಶದಲ್ಲಿ ಲಿಂಗ ತಾರತಮ್ಯ ಕಡಿಮೆ ಇದ್ದು, ಮಹಿಳೆಯರು ಸ್ವಾತಂತ್ರ್ಯದಿಂದ ಬದುಕುತ್ತಿದ್ದಾರೆ. ಆದರೆ, ಗ್ರಾಮೀಣ ಭಾಗದಲ್ಲಿ ಮಹಿಳೆಯರ ಶಿಕ್ಷಣ, ಆರೋಗ್ಯ, ವೇತನದ ವಿಚಾರದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ತಾರತಮ್ಯ ಇದೆ. ಕೂಲಿ ಮಾಡುವ ಗಂಡಾಳಿಗೆ ಹೆಚ್ಚಿನ ವೇತನ ಮತ್ತು ಹೆಣ್ಣಾಳಿಗೆ ಕಡಿಮೆ ವೇತನ ನೀಡುತ್ತಿರುವುದೇ ಲಿಂಗ ತಾರತಮ್ಯಕ್ಕೆ ಸಾಕ್ಷಿ ಎಂದು ಬೇಸರ ವ್ಯಕ್ತಪಡಿಸಿದರು.

ಮಹಿಳೆಯರ ಸಮಸ್ಯೆಗಳು, ಹಕ್ಕುಗಳ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸುವುದು ಅಗತ್ಯವಾಗಿದೆ. ಗ್ರಾಮೀಣ ಭಾಗದಲ್ಲಿ ಸರ್ಕಾರದ ಸೌಲಭ್ಯಗಳನ್ನು ಮಹಿಳೆಯರಿಗೆ ಮುಟ್ಟಿಸಬೇಕಿದೆ. ಸ್ವಯಂ ಆಗಿ ನಿಸ್ವಾರ್ಥದಿಂದ ಸಮಾಜ ಸೇವೆ ಮಾಡಲು ಯಾರಿಗೂ ಭಯ ಪಡುವ ಅಗತ್ಯವಿಲ್ಲ. ಸಮಾಜ ಸೇವೆ ಮಾಡುವ ಮನಸ್ಸಿರಬೇಕಷ್ಟೇ ಎಂದರು.

ಬಸವ ಸಮಿತಿ ಅಕ್ಕನ ಬಳಗ ಅಧ್ಯಕ್ಷೆ ಡಾ| ವಿಲಾಸವತಿ ಖೂಬಾ ಮಾತನಾಡಿ, ಮಹಿಳೆಯರ ಪ್ರತಿಭೆಗೆ ಅವಕಾಶ ಮಾಡಿಕೊಡುವ ಉದ್ದೇಶದಿಂದ ಕಳೆದ 12 ವರ್ಷಗಳಿಂದ ಮಹಾದೇವಿಯಕ್ಕಗಳ ಸಮ್ಮೇಳನವನ್ನು ವಿಜೃಂಭಣೆಯಿಂದ ನಡೆಸಿಕೊಂಡು ಬರಲಾಗುತ್ತಿದೆ. ಶರಣರ ತತ್ವಗಳ ಅಡಿ ಸಮ್ಮೇಳನ ನಡೆಯುತ್ತಿದೆ. ಎರಡು ದಿನಗಳ 160 ಜನ ಮಹಿಳೆಯರು ಭಾಗಿಯಾಗಿತ್ತಾರೆ. ಮಹಿಳೆಯರು ತಾವು ಯಾವುದರಲ್ಲೂ ಕಡಿಮೆ ಇಲ್ಲ ಎನ್ನುವುದನ್ನು ಸಾಬೀತು ಪಡಿಸಬೇಕಿದೆ ಎಂದು ಕರೆ ನೀಡಿದರು.

ಅಕ್ಕನ ಬಳಗದ ಕಾರ್ಯಾಧ್ಯಕ್ಷೆ ಡಾ| ಜಯಶ್ರೀ ದಂಡೆ ಸಮ್ಮೇಳನದ ಸರ್ವಾಧ್ಯಕ್ಷರು ಮತ್ತು ಅತಿಥಿಗಳ ಪರಿಚಯ ಮಾಡಿಕೊಟ್ಟರು. ಶರಣಮ್ಮ ಕಲಬುರಗಿ, ಅನಸೂಯಾ ನಡಕಟ್ಟಿ, ಪ್ರೊ| ಗೌರಮ್ಮ ಗೋಪಶೆಟ್ಟಿ, ಡಾ|ನಿರ್ಮಲಾ ಕೆಳಮನಿ ಹಾಗೂ ಮಹಿಳೆಯರು, ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.

ಇದಕ್ಕೂ ಮುನ್ನ ಬೆಳಗ್ಗೆ ಅನುಭವ ಮಂಟಪದಲ್ಲಿ ಬಸವೇಶ್ವರ ಮೂರ್ತಿ ಮಾಲಾರ್ಪಣೆ, ಷಟ್ಸ್ಥಲ ಧ್ವಜಾರೋಹಣವನ್ನು ಮಾಜಿ ಶಾಸಕಿ ಅರುಣಾ ಪಾಟೀಲ ನೆರವೇರಿಸುವರು. ನಂತರದಲ್ಲಿ ಮಹಾದೇವಿಯಕ್ಕಗಳ ಸಮ್ಮೇಳನದ ಅಂಗವಾಗಿ ಶರಣ ಬಸವೇಶ್ವರ ದೇವಸ್ಥಾನ ಆವರಣದಿಂದ ಅನುಭವ ಮಂಟಪದವರೆಗೆ ಅಕ್ಕ ಮಹಾದೇವಿ ಭಾವಚಿತ್ರ ಹಾಗೂ ಸಮ್ಮೇಳನದ ಸರ್ವಾಧ್ಯಕ್ಷರ ಅದ್ಧೂರಿ ಮೆರವಣಿಗೆ ನಡೆಯಿತು.

ಮಹಿಳೆಯರ ಡೊಳ್ಳು ಕುಣಿತ ಮತ್ತು ಎಲ್ಲರೂ ಇಲಕಲ್ ಸೀರೆ ಉಟ್ಟು ಪಾಲ್ಗೊಂಡಿದ್ದು ವಿಶೇಷ ಮೆರಗು ತಂದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next