Advertisement

ಎಸ್‌ಸಿಯಿಂದ ಬಂಜಾರಾ ಸಮಾಜ ತೆಗೆಯಲು ಸಾಧ್ಯವಿಲ್ಲ

04:05 PM Apr 19, 2019 | Naveen |

ಕಲಬುರಗಿ: ಲೋಕಸಭೆ ಚುನಾವಣೆಯಲ್ಲಿ ನಾನು ಗೆದ್ದರೆ ಬಂಜಾರಾ ಸಮುದಾಯವನ್ನು ಪರಿಶಿಷ್ಟ ಜಾತಿಯಿಂದ ತೆಗೆಸುತ್ತೇನೆ ಎನ್ನುವುದು ಸುಳ್ಳು. ನಾನಲ್ಲ, ನಮ್ಮಪ್ಪ ಬಂದರೂ ಪರಿಶಿಷ್ಟ ಜಾತಿಯಿಂದ ಬಂಜಾರಾ ಸಮುದಾಯ ತೆಗೆಯಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್‌ ಸಂಸದೀಯ ನಾಯಕ, ಕಲಬುರಗಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಡಾ| ಮಲ್ಲಿಕಾರ್ಜುನ ಖರ್ಗೆ
ಸ್ಪಪ್ಟಪಡಿಸಿದರು.

Advertisement

ನಗರದ ಏಷ್ಯನ್‌ ಮಾಲ್‌ ಹತ್ತಿರದ ಮೈದಾನದಲ್ಲಿ
ಗುರುವಾರ ಹಮ್ಮಿಕೊಂಡಿದ್ದ ಬಂಜಾರಾ ಸಮುದಾಯದ ಸಮಾವೇಶದಲ್ಲಿ ಮಾತನಾಡಿದ ಅವರು, ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ಬಂಜಾರಾ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲು ನಾನೇ ಸಹಕಾರ ನೀಡಿದ್ದೇನೆ. ಆದರೀಗ ಪರಿಶಿಷ್ಟ ಜಾತಿಯಿಂದ ಬಂಜಾರಾ ಸಮುದಾಯವನ್ನು ತೆಗೆಸುತ್ತೇನೆ ಎಂದು ನನ್ನ ವಿರುದ್ಧವೇ ಅಪಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಬಂಜಾರಾ ಸಮುದಾಯ ಸೊಪ್ಪು ಹಾಕಬಾರದು ಎಂದರು.

70ರ ದಶಕದಲ್ಲಿ ಹಳೆ ಮೈಸೂರು ಭಾಗದಲ್ಲಿ ಮಾತ್ರ ಭೋವಿ ಮತ್ತು ಬಂಜಾರಾ ಸಮುದಾಯ ಪರಿಶಿಷ್ಟ ಜಾತಿಗೆ ಒಳಪಟ್ಟಿತ್ತು. ನಂತರದಲ್ಲಿ ದೇವರಾಜು ಅರಸು ನೇತೃತ್ವದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಹೈಕ ಭಾಗದ ಬಂಜಾರಾ ಸಮುದಾಯವನ್ನು ಪರಿಶಿಷ್ಟ ಜಾತಿಗೆ ಸೇರಿಸಲಾಯಿತು. ಆಗ ನಾನು ಅರಸು ಸಂಪುಟದಲ್ಲಿ ಮಂತ್ರಿಯಾಗಿದ್ದೆ. ಬಂಜಾರಾ ಸಮುದಾಯ ಪರಿಶಿಷ್ಟ ಜಾತಿಗೆ ಸೇರಿಸುವಾಗಲೇ ನಾನು ವಿರೋಧಿಸಿಲ್ಲ. ಈಗೇಕೆ ಬಂಜಾರಾ ಸಮುದಾಯವನ್ನು ತೆಗೆದು ಹಾಕಿಸಲಿ ಎಂದು ಪ್ರಶ್ನಿಸಿದರು.

ನಮ್ಮ ಮಧ್ಯೆಯೇ ಇದ್ದು, ನಮ್ಮನ್ನು ಶೋಷಣೆಗೆ ಗೊಳಪಡಿಸುವವರು ಇದ್ದಾರೆ. ಮೀಸಲಾತಿ ಸಮರ್ಪಕವಾಗಿ ಸದುಪಯೋಗ ಪಡೆಯುತ್ತಿರುವ ಸಮುದಾಯವೆಂದರೆ ಅದು ಬಂಜಾರ ಸಮುದಾಯ ಮಾತ್ರ. ಅಂಬೇಡ್ಕರ್‌ ಬರೆದ ಸಂವಿಧಾನದ ಅಡಿಯಲ್ಲಿ ಬಂಜಾರಾ ಸಮುದಾಯ ಮೀಸಲಾತಿ ಪಡೆಯುತ್ತಿದೆ ಎಂದು ಹೇಳಿದರು.

ತಾಂಡಾಗಳಿಗೆ ಸರ್ಕಾರಿ ಜಮೀನು, ರಸ್ತೆ, ವಿದ್ಯುತ್‌ ಸಂಪರ್ಕ ಕಲ್ಪಿಸುವ ಕೆಲಸ ಮಾಡಿದ್ದೇನೆ. ಕಳ್ಳತನ, ದರೋಡೆಯಂತಹ ಸುಳ್ಳು ಪ್ರಕರಣಗಳಿಂದ ಬಂಜಾರಾ ಸಮುದಾಯದವರನ್ನು ರಕ್ಷಿಸಿದ್ದೇನೆ. ಬಡವರ ಪ್ರತಿನಿಧಿಯಾಗಿ ಬಂಜಾರಾ ಸಮುದಾಯಕ್ಕೆ ಸೇವೆ ಸಲ್ಲಿಸಿದ್ದೇನೆ ಎಂದರು.

Advertisement

ನನ್ನ ರಾಜಕೀಯ ಜೀವನ ಆರಂಭವಾಗಿದ್ದೂ ಬಂಜಾರಾ ಸಮುದಾಯ ಅಧಿಕ ಸಂಖ್ಯೆಯಲ್ಲಿರುವ ಗುರುಮಠಕಲ್‌ ನಿಂದ. ಕಂದಾಯ ಸಚಿವನಾಗಿದ್ದಾಗ ಅನೇಕ ತಾಂಡಾಗಳನ್ನು ಕಂದಾಯ ಗ್ರಾಮಗಳಾಗಿ ಪರಿವರ್ತಿಸಿದ್ದೇನೆ. ಬಂಜಾರಾ ಸಮುದಾಯದ ಗುರು ರಾಮರಾವ ಮಹಾರಾಜರ ಮನವಿ ಮೇರೆಗೆ ಪೌರಾದೇವಿ ದೇವಸ್ಥಾನದ ಹತ್ತಿರ ರೈಲ್ವೆ ನಿಲ್ದಾಣ ನಿರ್ಮಿಸಿ, ರೈಲುಗಳು ನಿಲ್ಲುವಂತೆ ಮಾಡಿದ್ದೇನೆ ಎಂದು ವಿವರಿಸಿದರು. ಮಾಜಿ ಸಚಿವ, ಜೆಡಿಎಸ್‌ ಮುಖಂಡ ರೇವೂ ನಾಯಕ ಬೆಳಮಗಿ ಮಾತನಾಡಿ, ಬಂಜಾರಾ ಸಮುದಾಯದ್ದು ದ್ರೋಹ ಮಾಡುವ ರಕ್ತವಲ್ಲ. ಬಿಜೆಪಿಯವರು ರೇವೂ ನಾಯಕ ಕುತ್ತಿಗೆ ಕೊಯ್ದಾಗ ಉಮೇಶ ಜಾಧವ ಸುಮ್ಮನಿದ್ದರು.

ಈಗ ಬಂಜಾರಾ ಜಾತಿ ಕಾಣಲಿಲ್ಲವೇ? ನಮ್ಮ ಮೇಲೆ ಹಲ್ಲೆ ಮಾಡಿದವರು ಕ್ಷಮೆ ಕೋರಿದ್ದಾರೆ. ಅವರನ್ನು ನಾವು ಕ್ಷಮಿಸಿದ್ದೇವೆ. ಹಲ್ಲೆ ಮಾಡಿದವರು ಸ್ವಯಂ ಪ್ರೇರಿತರಾಗಿ ಹಲ್ಲೆ ಮಾಡಿಲ್ಲ. ಅದಕ್ಕೆ ಜಾಧವ ಕಾರಣವಾಗಿದ್ದು, ಸಮುದಾಯಕ್ಕೆ ಕಪ್ಪುಚುಕ್ಕೆ ತಂದಿದ್ದಾರೆ ಎಂದರು.

ಮುಖಂಡ ಸುಭಾಷ ರಾಠೊಡ ಮಾತನಾಡಿ, ಉಮೇಶ ಜಾಧವಗೆ ಸೇವಾಲಾಲ್‌ ಇತಿಹಾಸ ಗೊತ್ತಿಲ್ಲ. ಬಂಜಾರಾ ಆಚಾರ, ವಿಚಾರಗಳು ಗೊತ್ತಿಲ್ಲ. ಬಿಜೆಪಿಯವರು ಅತ್ಯಂತ ಕೆಳಮಟ್ಟದ ಚುನಾವಣೆ ಮಾಡುತ್ತಿದ್ದಾರೆ ಎಂದು ದೂರಿದರು. ಸಮಾವೇಶದಲ್ಲಿ ಮಾಜಿ ರಾಜ್ಯಸಭಾ ಸದಸ್ಯ ಕೆ.ಬಿ. ಶಾಣಪ್ಪ, ಕೆಪಿಸಿಸಿ ಕಾರ್ಯದರ್ಶಿ ಅಲ್ಲಮಪ್ರಭು ಪಾಟೀಲ, ವಿಧಾನ ಪರಿಷತ್‌ ಸದಸ್ಯ ಸಿಎಂ ಇಬ್ರಾಹಿಂ, ಮೇಯರ್‌ ಮಲ್ಲಮ್ಮ ವಳಕೇರಿ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಕಾಂಗ್ರೆಸ್‌ ಜಿಲ್ಲಾ ಮಹಿಳಾ ಘಟಕದ ಅಧ್ಯಕ್ಷೆ ಲತಾ ರವಿ ರಾಠೊಡ, ಮುಖಂಡರಾದ ಬಾಬು ಹೊನ್ನಾನಾಯಕ,
ರವಿ ರಾಠೊಡ, ಕಿಶನ್‌ ರಾಠೊಡ, ರೇಣುಕಾ ಚವ್ಹಾಣ ಮುಂತಾವದರು ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next