Advertisement

ಕಲಬುರಗಿ ಕೆಎಟಿ ಪೀಠಕ್ಕೆ ಚಾಲನೆ

11:21 AM Sep 18, 2019 | Team Udayavani |

ಕಲಬುರಗಿ: ಕರ್ನಾಟಕ ರಾಜ್ಯ ಆಡಳಿತಾತ್ಮಕ ನ್ಯಾಯಮಂಡಳಿ ಕಲಬುರಗಿ ಪೀಠ ಸ್ಥಾಪಿಸುವ ಮೂಲಕ ಈ ಭಾಗದ ಜನತೆಯ ಬಹುದಿನಗಳ ಬೇಡಿಕೆ ಈಡೇರಿಸಿದ ಸಂತೃಪ್ತಿ ನನಗಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನುಡಿದರು.

Advertisement

ನಗರದ ಕೆ.ಎಚ್.ಬಿ ಕಾಲೋನಿಯಲ್ಲಿ ಕರ್ನಾಟಕ ಸರ್ಕಾರ ಮತ್ತು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಕೆಎಟಿ ಕಲಬುರಗಿ ಪೀಠ ಉದ್ಘಾಟಿಸಿ ಅವರು ಮಾತನಾಡಿದರು.

ಕಲ್ಯಾಣ ಕರ್ನಾಟಕ ದಿನಾಚರಣೆಯಂದು ಕೆಎಸ್‌ಎಟಿ ಕಲಬುರಗಿ ಪೀಠಕ್ಕೆ ಚಾಲನೆ ನೀಡುತ್ತಿರುವುದಕ್ಕೆ ನನಗೆ ಸಂತಸವಾಗುತ್ತಿದೆ ಎಂದು ಹೇಳಿದರು.

ಸರ್ಕಾರಿ ನೌಕರರ ವರ್ಗಾವಣೆ, ನಿವೃತ್ತಿ ಸವಲತ್ತು, ಬಡ್ತಿ ಮುಂತಾದ ಸೇವಾ ವಿಷಯಗಳಿಗೆ ಪ್ರತ್ಯೇಕ ನ್ಯಾಯ ಮಂಡಳಿಯನ್ನು 1986ರಲ್ಲಿಯೇ ಬೆಂಗಳೂರಿನಲ್ಲಿ ಸ್ಥಾಪಿಸಲಾಗಿತ್ತು. ಇದೀಗ ಕಲಬುರಗಿ ಪೀಠ ಸ್ಥಾಪನೆಯಿಂದ ಈ ಭಾಗದ ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ ಎಂದರು.

ತ್ವರಿತ ಮತ್ತು ಕಡಿಮೆ ವೆಚ್ಚದ ನ್ಯಾಯದಾನ ಮಾಡುವ ಸದುದ್ದೇಶವನ್ನು ಈ ವ್ಯವಸ್ಥೆ ಹೊಂದಿದೆ. ಬೆಂಗಳೂರು ಪ್ರಧಾನ ಕೆಎಸ್‌ಎಟಿ ಪೀಠದಲ್ಲಿರುವ 11,978 ಪ್ರಕರಣಗಳ ಪೈಕಿ, 1,002 ಅರ್ಜಿಗಳನ್ನೊಳಗೊಂಡ 617 ಪ್ರಕರಣಗಳು ಕಲಬುರಗಿ ಪೀಠಕ್ಕೆ ವರ್ಗಾವಣೆಯಾಗಲಿವೆ ಎಂದು ತಿಳಿಸಿದರು.

Advertisement

ಮುಖ್ಯ ಅತಿಥಿಗಳಾಗಿದ್ದ ಕಾನೂನು ಮತ್ತು ಸಂಸದೀಯ, ಸಣ್ಣ ನೀರಾವರಿ ಇಲಾಖೆ ಸಚಿವ ಜೆ.ಸಿ. ಮಾಧುಸ್ವಾಮಿ ಮಾತನಾಡಿ, ಬೆಂಗಳೂರು ಕೆಎಸ್‌ಎಟಿ ಸ್ಥಾಪನೆಯಾದಾಗಿನಿಂದ ಇಲ್ಲಿಯ ವರೆಗೆ 2.73,535 ಪ್ರರಣಗಳ ಪೈಕಿ 2.61,335 ಪ್ರಕರಣಗಳನ್ನು ವಿಲೇವಾರಿ ಮಾಡಲಾಗಿದೆ ಎಂದು ಹೇಳಿದರು.

ಕಲಬುರಗಿ ಪೀಠ ವ್ಯಾಪ್ತಿಯಲ್ಲಿ ಕಲಬುರಗಿ, ಬೀದರ, ಯಾದಗಿರಿ, ರಾಯಚೂರು ಹಾಗೂ ವಿಜಯಪುರ ಜಿಲ್ಲೆಗಳು ಬರಲಿದ್ದು, ಪೀಠಕ್ಕೆ ಅಗತ್ಯ ಮೂಲಭೂತ ಸೌಲಭ್ಯಗಳನ್ನು ಸರ್ಕಾರದಿಂದ ಕಲ್ಪಿಸಲಾಗುವುದು ಎಂದು ತಿಳಿಸಿದರು.

ಇದೆ ವೇಳೆ ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಯನ್ನು ಕಲಬುರಗಿ ಪೀಠದ ವ್ಯಾಪ್ತಿಗೆ ತರಬೇಕೆಂದು ಕೆಲ ವಕೀಲರು ಕಾರ್ಯಕ್ರಮದಲ್ಲಿ ಬೇಡಿಕೆ ಇಟ್ಟ ಹಿನ್ನೆಲೆಯಲ್ಲಿ ಈ ಕುರಿತು ಪರಿಶೀಲಿಸಲಾಗುವುದು ಎಂದು ಭರವಸೆ ನೀಡಿದರು.

ಬೆಂಗಳೂರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ ಅಧ್ಯಕ್ಷ ನ್ಯಾಯಮೂರ್ತಿ ಡಾ| ಕೆ.ಭಕ್ತವತ್ಸಲ ಅಧ್ಯಕ್ಷತೆ ವಹಿಸಿ ಮಾತನಾಡಿ, ಲೋಕಾಯುಕ್ತ ಪ್ರಕರಣದಲ್ಲಿ ಸರ್ಕಾರಿ ನೌಕರರನ್ನು ಅಮಾನತು ಅಥವಾ ವಜಾ ಮಾಡುವಂತ ಕ್ರಮ ಸರಿಯಲ್ಲ. ಏಕೆಂದರೆ ಪ್ರಕರಣದಲ್ಲಿ ಸಿಲುಕಿದ ಎಲ್ಲ ಸರ್ಕಾರಿ ನೌಕರರು ತಪ್ಪಿತಸ್ಥರಲ್ಲ. ಸರ್ಕಾರಿ ನೌಕರರ ಅಮಾನತು ಅಥವಾ ವಜಾದಿಂದ ಅವರನ್ನು ನಂಬಿರುವ ಕುಟುಂಬ ಸದಸ್ಯರ ಜೀವನಕ್ಕೆ ತೊಂದರೆಯಾಗ‌ುತ್ತದೆ ಎಂದು ಹೇಳಿದರು.

ಸಂಸದ ಡಾ| ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮಡು, ರಾಜಕುಮಾರ ಪಾಟೀಲ ತೇಲ್ಕೂರ, ಎಂ.ವೈ. ಪಾಟೀಲ, ಸುಭಾಷ ಗುತ್ತೆದಾರ, ಬಿ.ಜಿ.ಪಾಟೀಲ, ತಿಪ್ಪಣಪ್ಪ ಕಮಕನೂರ, ಮಾಜಿ ಶಾಸಕರಾದ ಮಾಲಿಕಯ್ಯ ಗುತ್ತೇದಾರ, ದೊಡ್ಡಪ್ಪಗೌಡ ಪಾಟೀಲ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಕಾರ್ಯದರ್ಶಿ ಸುಬೋಧ ಯಾದವ, ಪೊಲೀಸ್‌ ಆಯುಕ್ತ ಎಂ.ಎನ್‌. ನಾಗರಾಜ, ಜಿಲ್ಲಾಧಿಕಾರಿ ಬಿ.ಶರತ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ವಿನಾಯಕ ಪಾಟೀಲ, ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಬಿ. ಕಿಶೋರ ಬಾಬು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ.ರಾಜಾ, ಸಹಾಯಕ ಆಯುಕ್ತ ರಾಹುಲ್ ತುಕಾರಾಮ ಪಾಂಡ್ವೆ, ಐಎಎಸ್‌ ಪ್ರೊಬೇಷನರಿ ಅಧಿಕಾರಿ ಡಾ| ಗೋಪಾಲಕೃಷ್ಣ, ಕಲಬುರಗಿ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಶರಣಬಸವ ಸಿ ಪಸ್ತಪುರ ಹಾಗೂ ಗೌರವಾನ್ವಿತ ನ್ಯಾಯಮೂರ್ತಿಗಳು ಹಾಗೂ ವಕೀಲರು ಹಾಜರಿದ್ದರು.

ಜಿಲ್ಲಾ ನ್ಯಾಯಾಧೀಶರು ಹಾಗೂ ಬೆಂಗಳೂರು ಕೆ.ಎಸ್‌.ಎ.ಟಿ ವಿಲೇಖನಾಧಿಕಾರಿ ಅಮರನಾರಾಯಣ ಕೆ. ಅವರು ಕೆಎಸ್‌ಎಟಿ ಪೀಠದ ವರದಿ ಮಂಡಿಸಿದರು. ಕಲಬುರಗಿ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ ಬಿ. ಕಿನ್ನಿ ಸ್ವಾಗತಿಸಿದರು. ಹೈಕೋರ್ಟ್‌ನ ಜಂಟಿ ಕಾರ್ಯದರ್ಶಿ ಸಂತೋಷ ವಂದಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next