ಕಲಬುರಗಿ: ಶಾಲೆ-ಕಾಲೇಜುಗಳಲ್ಲಿ ಮಾನವೀಯ ಮೌಲ್ಯ ಕುರಿತು ಕಲಿಸುವುದಿಲ್ಲ, ಆದ್ದರಿಂದ ಮಾನವೀಯ ಮೌಲ್ಯಗಳಿಂದ ಕೂಡಿದ ವಚನ ಸಾಹಿತ್ಯ ಅಧ್ಯಯನ ಮತ್ತು ಅಳವಡಿಕೆ ಅತ್ಯಗತ್ಯವಾಗಿದೆ ಎಂದು ಜಿಪಂ ಸಿಇಒ ಡಾ| ರಾಜಾ ಪಿ. ಹೇಳಿದರು.
ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ವತಿಯಿಂದ ಶರಣರಾದ ಲಿಂಗಣ್ಣ ಸತ್ಯಂಪೇಟೆ, ಸಿದ್ರಾಮಪ್ಪ ಬಾಲಪ್ಪಗೋಳ ಸ್ಮರಣಾರ್ಥ ಸರ್ಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ‘ಸಮತತ್ವ ಬಿತ್ತ ಬನ್ನಿ ಸರ್ವೋದಯಕ್ಕಾಗಿ, ಮನಬೆಸೆದು ಮಾಡೋದಿದೆ ಮಾನವೀಕರಣ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜ್ಞಾನ ಮತ್ತು ವ್ಯಕ್ತಿತ್ವ ವಿಕಸನ ಕುರಿತು ಎಲ್ಲೆಡೆ ಸಾಕಷ್ಟು ಹೇಳಲಾಗುತ್ತದೆ. ಆದರೆ ಮಾನವೀಯತೆ ಬಗ್ಗೆ ಹೇಳಿಕೊಡುವುದು ಕಮ್ಮಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದರು.
‘ಮಾನವೀಯ ಚಿಂತನೆಯಲ್ಲಿ ವಚನ ಮತ್ತು ಸಂವಿಧಾನ’ ವಿಷಯದ ಕುರಿತು ಬೀದರಿನ ಶರಣ ಸಾಹಿತಿ ವಿಜಯಲಕ್ಷ್ಮೀ ಕೌಟಗೆ ಮಾತನಾಡಿ, ಮನುಕುಲದ ಉದ್ಧಾರಕ, ವಿಶ್ವಗುರು ಬಸವಣ್ಣ ಸಮಾಜದಲ್ಲಿ ಮಾನವೀಯ ಸಂಬಂಧ ಗಟ್ಟಿಗೊಳಿಸಿದರು. ವಚನ ಬಿಟ್ಟು ಸಂವಿಧಾನವಿಲ್ಲ, ಸಂವಿಧಾನ ಬಿಟ್ಟು ವಚನ ಸಾಹಿತ್ಯವಿಲ್ಲ. ಆತ್ಮಗೌರವ, ಆತ್ಮವಿಶ್ವಾಸ, ಸ್ವಾಭಿಮಾನ ಕಲಿಸಿಕೊಡುವ ವಚನಗಳ ಆಶಯವನ್ನು ಭಾರತದ ಸಂವಿಧಾನದಲ್ಲಿ ಕಾಣಬಹುದು ಎಂದರು.
ಬಸವಣ್ಣ ನವರ ‘ಕಳಬೇಡ ಕೊಲಬೇಡ’ ವಚನ ಸಂವಿಧಾನವಾದರೆ, ಭಾರತದ ಸಂವಿಧಾನ ಅದನ್ನು ಕಾನೂನು ರೂಪದಲ್ಲಿ ಅಳವಡಿಸಿಕೊಂಡಿದೆ. ಜಗತ್ತಿನ ಮೊಟ್ಟ ಮೊದಲ ಪಾರ್ಲಿಮೆಂಟ್ ಎಂದು ಕರೆಯಲ್ಪಡುವ ಅನುಭವ ಮಂಟಪದಲ್ಲಿ ಸಮಾನತೆ, ಸ್ವಾತಂತ್ರ್ಯ ಕಲ್ಪಿಸಲಾಗಿತ್ತು. ಅದೇ ರೀತಿಯಾಗಿ ನಮ್ಮ ಸಂವಿಧಾನದಲ್ಲೂ ಈ ಅಂಶಗಳಿರುವುದನ್ನು ಗಮನಿಸಬಹುದು ಎಂದು ಹೇಳಿದರು.
ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ಪಾಟೀಲ ತೇಗಲತಿಪ್ಪಿ ಮಾತನಾಡಿದರು. ಕಾಲೇಜಿನ ಪ್ರಾಚಾರ್ಯರಾ ಜಯಲಕ್ಷ್ಮೀ ಎಲ್.ಕೆ. ಅಧ್ಯಕ್ಷತೆ ವಹಿಸಿದ್ದರು. ಡಾ| ಮಲ್ಲಿಕಾರ್ಜುನ ವಡ್ಡನಕೇರಿ, ಸಚಿನ್ ಫರಹತಾಬಾದ, ಎ.ಜೆ. ಖತೀಬ್, ರುಕ್ಮೀಣಿ, ಅಕಾಡೆಮಿಯ ಶಿವರಾಜ ಅಂಡಗಿ, ಡಾ| ಕೆ.ಗಿರಿಮಲ್ಲ, ಶಿವಾನಂದ ಮಠಪತಿ, ಶ್ರೀಕಾಂತ ಪಾಟೀಲ ತಿಳಗೂಳ, ಪರಮೇಶ್ವರ ಶಟಕಾರ, ಜಗದೀಶ ಮರಪಳ್ಳಿ, ರವೀಂದ್ರಕುಮಾರ ಭಂಟನಳ್ಳಿ ಮತ್ತಿತರರು ಹಾಜರಿದ್ದರು.