ಕಲಬುರಗಿ: ಕರಾವಳಿಗರು ನಾಡಿನ ಪ್ರಗತಿಗೆ ವಿಶಿಷ್ಟ ಕೊಡುಗೆ ನೀಡಿ ಜಗದ್ವಿಖ್ಯಾತರಾಗಿದ್ದಾರೆ ಎಂದು ಲೋಕಸಭಾ ಸದಸ್ಯ ಹಾಗೂ ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ ಕಟೀಲ್ ಹೇಳಿದರು.
ಕಲಬುರಗಿ ದಕ್ಷಿಣ ಕನ್ನಡ ಸಂಘ, ಹೋಟೆಲ್ ಮಾಲೀಕರ ಸಂಘದ ವತಿಯಿಂದ ನಗರದ ಆಮಂತ್ರಣ ಹೋಟೆಲ್‌ನ ಅನ್ನಪೂರ್ಣ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಕರಾವಳಿಯ ದೈವ-ದೇಗುಲಗಳ ಅಭಿವೃದ್ಧಿ ಸಹಿತ ಧಾರ್ಮಿಕ ಕ್ಷೇತ್ರ, ಶಿಕ್ಷಣಕ್ಷೇತ್ರ, ಕೈಗಾರಿಕಾ ಕ್ಷೇತ್ರಗಳಿಗೆ ಸಹಾಯಹಸ್ತ ಚಾಚೂವಲ್ಲದೇ, ಪರವೂರಿನಲ್ಲಿ ದುಡಿಯುವ ಕೈಗಳಿಗೆ ಕೆಲಸ ನೀಡುತ್ತಿದ್ದಾರೆ ಎಂದರು.
ಕೇವಲ ಕರಾವಳಿಯಷ್ಟೇ ಅಲ್ಲ, ಅವರ ಕರ್ಮಭೂಮಿಯಲ್ಲಿ ಸಾಮಾಜಿಕ ಸೇವೆಗೆ ಬದ್ಧತೆ ತೋರಿ ಪ್ರಗತಿಗೆ ಕೈಜೋಡಿಸುತ್ತಿದ್ದಾರೆ. 55 ವರ್ಷಗಳಿಂದ ಕಲಬುರಗಿಯ ದಕ್ಷಿಣ ಕನ್ನಡ ಸಂಘದ ಸೇವೆ ಈ ಭಾಗದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ. ಜಗತ್ತಿನಲ್ಲಿ ಎಲ್ಲೆ ಹೋದರೂ ಕರಾವಳಿಗರು ಪ್ರೀತಿ-ವಿಶ್ವಾಸದಿಂದ ಬಾಳ್ವೆ ಮಾಡುತ್ತಿದ್ದಾರೆ. ಕಲಬುರಗಿಯಲ್ಲೂ ಜನಪ್ರತಿನಿಧಿಗಳು, ಅಧಿಕಾರಿಗಳು ಕರಾವಳಿಗರ ಮಸ್ಯೆಗೆ ಸ್ಪಂದಿಸಿ, ಸಹಕರಿಸಬೇಕು ಎಂದು ಕರೆ ನೀಡಿದರು.
ಕರಾವಳಿಗರ ಈ ಸನ್ಮಾನ ನನ್ನ ತವರುಮನೆಗೆ ಬಂದ ಅನುಭವ ಮತ್ತು ಖುಷಿ ನೀಡಿದೆ. ಆತಿಥ್ಯಕ್ಕೆ ಧನ್ಯ ವಾದ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಂಘವು ಇನ್ನಷ್ಟು ಸಮಾಜ ಮುಖೀ ಕಾರ್ಯ ಮುಂದುವರಿಸಲಿ. ಅದಕ್ಕೆ ನನ್ನ ಬೆಂಬಲ ಖಚಿತ ಎಂದರು.
ರಾಜ್ಯ ಬಿಜೆಪಿ ಅಧ್ಯಕ್ಷರಾದ ಮೇಲೆ ಸಂಘಕ್ಕೆ ಮೊದಲ ಬಾರಿಗೆ ಆಗಮಿಸಿದ ನಳಿನ್ ಕುಮಾರ ಕಟೀಲ್ ಅವರಿಗೆ ಶಾಲು, ಹಾರ, ಯಕ್ಷಗಾನದ ಕಿರೀಟ, ಸ್ಮರಣಿಕೆ ನೀಡಿ ಸನ್ಮಾನಿಸಿದರು. ಬೀದರ ಸಂಸದ ಭಗವಂತ ಖೂಬಾ, ವಿಧಾನಪರಿಷತ್ ಸದಸ್ಯರಾದ ಬಿ.ಜಿ. ಪಾಟೀಲ, ವಿಧಾನಪರಿಷತ್ ಮಾಜಿ ಸದಸ್ಯ ಶಶೀಲ್ ಜಿ. ನಮೋಶಿ, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಗಿ, ನಗರ ಘಟಕ ಅಧ್ಯಕ್ಷ ಸಿದ್ದಾಜಿ ಪಾಟೀಲ ಹಾಜರಿದ್ದರು.
ದ.ಕ. ಸಂಘದ ಸದಸ್ಯರು, ಹೋಟೆಲ್ ಮಾಲೀಕರ ಸಂಘದ ಸದಸ್ಯರು, ವಾಣಿಜ್ಯೋದ್ಯಮಿಗಳು ಹಾಜರಿದ್ದರು. ಸಂಘದ ಗೌರವಾಧ್ಯಕ್ಷ ಪ್ರಶಾಂತ ಶೆಟ್ಟಿ ಇನ್ನಾ ಅಧ್ಯಕ್ಷತೆ ವಹಿಸಿದ್ದರು. ಹೋಟೆಲ್ ಮಾಲೀಕರ ಸಂಘದ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮೆಂಡನ್ ಸ್ವಾಗತಿಸಿದರು. ಸಂಘದ ಕಾರ್ಯದರ್ಶಿ ಅರುಣಾಚಲಭಟ್ ಮನವಿ ವಾಚಿಸಿದರು. ಡಾ| ಸದನಂದ ಪೆರ್ಲ ನಿರೂಪಿಸಿದರು.