ಬೆಂಗಳೂರು: ಕಲಬುರಗಿ ಜಿಲ್ಲಾಧಿಕಾರಿ ಶರತ್ ಬಿ. ಅವರನ್ನು ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಇಂದು ಆದೇಶ ಹೊರಡಿಸಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಸುರಾರ್ಲಕರ್ ವಿಕಾಸ್ ಕಿಶೋರ್ ಅವರನ್ನು ತಕ್ಷಣದಿಂದಲೇ ಜಾರಿಗೆ ಬರುವಂತೆ ಕಲಬುರಗಿ ಜಿಲ್ಲಾಧಿಕಾರಿಯನ್ನಾಗಿ ನೇಮಿಸಲಾಗಿದೆ.
ಶರತ್ ಅವರನ್ನು ಮುಂದಿನ ಆದೇಶದವೆರೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕರನ್ನಾಗಿ ನೇಮಿಸಲಾಗಿದೆ ಎಂದು ರಾಜ್ಯ ಸರಕಾರ ತನ್ನ ಆದೇಶದಲ್ಲಿ ತಿಳಿಸಿದೆ.
ಕಲಬುರಗಿಯಲ್ಲಿ ಇಲ್ಲಿಯವರೆಗೆ 33 ಕೋವಿಡ್ ಸೋಂಕಿನ ಪ್ರಕರಣಗಳು ದಾಖಲಾಗಿದೆ ಮತ್ತು ಈ ಜಿಲ್ಲೆಯನ್ನು ರೆಡ್ ಝೋನ್ ವ್ಯಾಪ್ತಿಯಲ್ಲಿರಿಸಲಾಗಿದೆ. ಕರ್ನಾಟಕದಲ್ಲಿ ಕೋವಿಡ್ ಸೋಂಕು ಸಂಬಂಧಿತ ಮೊದಲ ಸಾವು ಈ ಜಿಲ್ಲೆಯಲ್ಲೇ ದಾಖಲಾಗಿತ್ತು.
ಹಾಟ್ ಸ್ಪಾಟ್ ಜಿಲ್ಲೆಗಳಲ್ಲಿ ಒಂದಾಗಿರುವ ಕಲಬುರಗಿಯಲ್ಲಿ ಸೋಮವಾರವಷ್ಟೇ ಇನ್ನೊಬ್ಬ ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರು. ಇದರೊಂದಿಗೆ ಈ ಜಿಲ್ಲೆಯಲ್ಲಿ ಕೋವಿಡ್ ಸಂಬಂಧಿತ ಸಾವಿನ ಸಂಖ್ಯೆ ಐದಕ್ಕೇರಿದಂತಾಗಿದೆ.