Advertisement

ದಲ್ಲಾಳಿ ಹಾವಳಿ ತಪ್ಪಿಸಿದ ನೇರ ಮಾರುಕಟ್ಟೆ

11:47 AM Apr 29, 2020 | Naveen |

ಕಲಬುರಗಿ: ಕಷ್ಟಪಟ್ಟು ಬೆಳೆದ ತರಕಾರಿಯನ್ನು ದಲ್ಲಾಳಿಗಳು ಬೇಡಿದ ಬೆಲೆಗೆ ನೀಡಿ ನಿರಾಸೆಯಿಂದ ಮನೆಗೆ ಮರಳಬೇಕಿತ್ತು. ಇಲ್ಲವೇ ಕೆಲವೊಮ್ಮೆ ದಲ್ಲಾಳಿಗಳ ದೌರ್ಜನ್ಯಕ್ಕೆ ಒಳಗಾಗಿ ರಸ್ತೆಗೆ ಚೆಲ್ಲಿ ಬರಲಾಗುತ್ತಿತ್ತು. ಇಂತಹ ಕೆಟ್ಟ ವ್ಯವಸ್ಥೆ ತೊಲಗಿಸುವಂತೆ ಹಲವಾರು ಬಾರಿ ಮನವಿ ಮಾಡಿದ್ದರೂ ಯಾರೂ ಗಮನಹರಿಸಿರಲಿಲ್ಲ.

Advertisement

ಇದು ನಗರ ಕೇಂದ್ರ ಬಸ್‌ ನಿಲ್ದಾಣ ಹತ್ತಿರದ ಕಣ್ಣಿ ತರಕಾರಿ ಮಾರುಕಟ್ಟೆಯಲ್ಲಿ ತೊಂದರೆ ಅನುಭವಿಸಿದ ರೈತರ ನೋವಿನ ದಿನಗಳು. ಈಗ ಕೊರೊನಾ ಭೀತಿ ಹಿನ್ನೆಲೆಯಲ್ಲಿ ಜನಸಂದಣಿ ಹಾಗೂ ಮಧ್ಯವರ್ತಿ(ದಲ್ಲಾಳಿ) ಗಳ ಹಾವಳಿ ತಪ್ಪಿಸಲೆಂದು ನಗರದ ಕೇಂದ್ರ ಬಸ್‌ ನಿಲ್ದಾಣ ಹತ್ತಿರದಲ್ಲಿದ್ದ ಕಣ್ಣಿ ತರಕಾರಿ ಮಾರುಕಟ್ಟೆಯನ್ನು ನಗರದ ಜೇವರ್ಗಿ ರಸ್ತೆಯ ಅಟಲ್‌ ಬಿಹಾರಿ ವಾಜಪೇಯಿ ಜಿಡಿಎ ಬಡಾವಣೆಗೆ ಸ್ಥಳಾಂತರಿಸಿದ್ದರಿಂದ ರೈತರಿಗೆ ಹೆಚ್ಚಿನ ಅನುಕೂಲವಾಗಿದೆ.

ಕಷ್ಟಪಟ್ಟು ಬೆಳೆದ ಟೋಮ್ಯಾಟೋ ಒಂದು ರೂ.ಕೆ.ಜಿಗೆ ಪಡೆದು ಅದನ್ನು ಗ್ರಾಹಕರಿಗೆ ಕೆ.ಜಿಗೆ 10ರೂ.ನಂತೆ, ಉಳಾಗಡ್ಡಿ, ಸೌತೆಕಾಯಿ, ಆಲೂ ಜತೆಗೆ ತರಕಾರಿಯನ್ನು ಸಹ ಇದೇ ದರದಲ್ಲಿ ರೈತರಿಂದ ಪಡೆದು ಅದನ್ನು ನಾಲ್ಕೈದು ಪಟ್ಟು ಹೆಚ್ಚಿನ ದರದಲ್ಲಿ ಮಾರಾಟ ಮಾಡುತ್ತಿರುವುದನ್ನು ನಾವು ದಶಕಗಳಿಂದ ನೋಡುತ್ತಾ ಬಂದಿದ್ದೇವೆ. ಇಲ್ಲಿ ರೈತ ಹಾಗೂ ಗ್ರಾಹಕ (ಸಾರ್ವಜನಿಕ) ಇಬ್ಬರೂ ನಷ್ಟ ಅನುಭವಿಸುತ್ತಿದ್ದರು. ಆದರೀಗ ಜಿಡಿಎ ಬಡಾವಣೆಯಲ್ಲಿ ಸ್ಥಾಪಿಸಿರುವ ತಾತ್ಕಾಲಿಕ ತರಕಾರಿ ಮಾರುಕಟ್ಟೆಯಲ್ಲಿ ರಾತ್ರಿ 8 ಗಂಟೆಯಿಂದ ಬೆಳಗಿನ ಜಾವದವರೆಗೂ ರೈತರು ಸಾಧ್ಯವಾದ ಮಟ್ಟಿಗೆ ನೇರವಾಗಿ ಮಾರಾಟ ಮಾಡುತ್ತಿರುವುದು ರೈತರಿಗೆ ಹಾಗೂ ಗ್ರಾಹಕರಿಬ್ಬರಿಗೂ ಉಪಯುಕ್ತವಾಗಿದೆ. ಅಲ್ಲದೇ ದಲ್ಲಾಳಿಗಳ ದೌರ್ಜನ್ಯಕ್ಕೆ ತಕ್ಕಪಟ್ಟಿಗೆ ಕಡಿವಾಣ ಹಾಕಿರುವುದು ಪ್ರಶಂಸನೀಯಕ್ಕೆ ಪಾತ್ರವಾಗುತ್ತಿದೆ.

ಕಣ್ಣಿ ಮಾರುಕಟ್ಟೆಯಲ್ಲಿ ಜಾಗ ಇಕ್ಕಟ್ಟಾಗಿತ್ತು. ಅಲ್ಲದೇ ರಾಜ್ಯ ಹೆದ್ದಾರಿ ರಸ್ತೆಯಾಗಿರುವುದರಿಂದ ವಾಹನಗಳ ಓಡಾಟಕ್ಕೆ ತೀವ್ರ ತೊಂದರೆಯಾಗಿತ್ತು. ಸಂಚಾರಿ ಪೊಲೀಸರಿಗಂತೂ ದೊಡ್ಡ ಸವಾಲಾಗಿತ್ತು. ಈಗ ವಿಶಾಲವಾದ ಜಾಗದಲ್ಲಿ ಹೊಸದಾಗಿ ತರಕಾರಿ ಮಾರುಕಟ್ಟೆ ಸ್ಥಾಪಿಸಲಾಗಿದೆ. ಜತೆಗೆ ಕುಡಿಯುವ ನೀರಿನ ಸೌಕರ್ಯ ಕಲ್ಪಿಸಲಾಗಿದೆ. ಸಂಚಾರಿ ಪೊಲೀಸರು ಧ್ವನಿವರ್ಧಕಗಳ ಮೂಲಕ ಸೂಕ್ತ ಮಾಹಿತಿ ನೀಡುತ್ತಿದ್ದಾರೆ. ಅಲ್ಲದೇ ಕೋವಿಡ್‌ ಮಾಹಿತಿ ಕೇಂದ್ರ ಸ್ಥಾಪಿಸಿರುವುದು ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ವಹಿವಾಟು ಎಷ್ಟು?: ಈ ಮಾರುಕಟ್ಟೆಯಲ್ಲಿ ದಿನಾಲು ಏನಿಲ್ಲವೆಂದರೂ 50ರಿಂದ 60 ಲಕ್ಷ ರೂ. ವ್ಯಾಪಾರ-ವಹಿವಾಟು ನಡೆಯುತ್ತಿದೆ. ದಿನಾಲು ನಗರದ ಸುತ್ತಮುತ್ತಲಿನ 175ರಿಂದ 200 ವಾಹನಗಳಲ್ಲಿ ತಾಜಾ ತರಕಾರಿ ಬರುತ್ತದೆ. ಆದರೆ ಈ ವಹಿವಾಟು ಸರಿಯಾದ ನಿಟ್ಟಿನಲ್ಲಿ ನಡೆಯುತ್ತಿಲ್ಲ ಎನ್ನುವುದು ಮಾತ್ರ ಅಸಮಾಧಾನದ ಸಂಗತಿಯಾಗಿದೆ.

Advertisement

ಈಗ ವ್ಯವಸ್ಥೆ ಕಲ್ಪಿಸಿರುವುದು ತಾತ್ಕಾಲಿಕವಾಗಿದೆ. ಏಕೆಂದರೆ ಈ ಜಾಗ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಬೇರೆಡೆ ಇದೇ ತೆರನಾದ ವ್ಯವಸ್ಥೆ ಕಲ್ಪಿಸಿ ರೈತರಿಗೆ ನೇರ ಮಾರುಕಟ್ಟೆಗೆ ವ್ಯವಸ್ಥೆ ಕಲ್ಪಿಸಿದಲ್ಲಿ ಕೃಷಿಕನಿಗೆ ನ್ಯಾಯ ಕಲ್ಪಿಸಿದಂತಾಗುತ್ತದೆ. ಜನಪ್ರತಿನಿಧಿಗಳು ಹಾಗೂ ಸಂಬಂಧಪಟ್ಟ ಇಲಾಖೆಯವರು ಈ ನಿಟ್ಟಿನಲ್ಲಿ ವಿಚಾರ ಮಾಡಿ ಕಾರ್ಯರೂಪಕ್ಕೆ ತರಲಿ ಎಂಬುದೇ ರೈತರ ಒಕ್ಕೊರಲಿನ ಆಗ್ರಹವಾಗಿದೆ.

ಕಲಬುರಗಿ ನಗರದ ಎರಡ್ಮೂರು ಕಡೆ ಮೂಲಭೂತ ಸೌಕರ್ಯಗಳೊಂದಿಗೆ ರೈತರೇ ನೇರವಾಗಿ ತರಕಾರಿ ಮಾರಾಟ ಮಾಡುವ ವ್ಯವಸ್ಥೆ ಜಾರಿಗೆ ತರಬೇಕು. ದಲ್ಲಾಳಿಗಳ ಹಾವಳಿ ತಪ್ಪಿಸಲು ಮಳಿಗೆಗಳನ್ನು ಸುತ್ತಮುತ್ತಲಿನ ಗ್ರಾಮಗಳ ರೈತ ಸಹಕಾರಿ ಸಂಘಗಳಿಗೆ ಹಾಗೂ ರೈತರಿಗೆ ಹಂಚಿಕೆ ಮಾಡಬೇಕು. ಎಪಿಎಂಸಿಯಲ್ಲಿ ಕೃಷಿ ಉತ್ಪನ್ನಗಳಿಗೆ ದರ ಘೋಷಣೆ ಮಾಡುವಂತೆ ತರಕಾರಿಗೂ ದಿನನಿತ್ಯ ದರ ಘೋಷಣೆ ಮಾಡಬೇಕು. ಕೋಲ್ಡ್‌ ಸ್ಟೋರೇಜ್‌ ಸ್ಥಾಪನೆಯಾಗಬೇಕು.
ಬಸವರಾಜ ವ್ಹಿ ಡಿಗ್ಗಾವಿ,
ನಂದಿವನ ಸಂಸ್ಥಾಪಕ

ಲಾಕ್‌ಡೌನ್‌ದಿಂದ ಕಣ್ಣಿ ಮಾರುಕಟ್ಟೆ ಜಿಡಿಎ ನಿವೇಶನ ಬಡಾವಣೆಗೆ ಬಂದಿರುವುದು ಅನುಕೂಲವಾಗಿದೆ. ಕಣ್ಣಿ ಮಾರುಕಟ್ಟೆಯಲ್ಲಿ ದಲ್ಲಾಳಿಗಳು ದೌರ್ಜನ್ಯ ನಡೆಸುತ್ತಿದ್ದರು. ಕೇಳಿದ ದರಕ್ಕೆ ತರಕಾರಿ ನೀಡದಿದ್ದರೆ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅವಕಾಶವೇ ನೀಡುತ್ತಿರಲಿಲ್ಲ. ಕೆಲವೊಮ್ಮೆ ಉಚಿತವಾಗಿಯೇ ಕೊಟ್ಟು ಬಂದಿದ್ದೆವು. ಮುಂಗೈ ಜೋರು ಇದ್ದವರು ಜಾಗ ಪಡೆಯುತ್ತಿದ್ದರು. ಆದರೀಗ ಎಪಿಎಂಸಿಯವರು ಮಳಿಗೆಯನ್ನು ಇಂತಹವರಿಗೆ ಎಂದು ನಿಗದಿ ಮಾಡುತ್ತಿರುವುದರಿಂದ ದಲ್ಲಾಳಿ ಹಾವಳಿ ನಿಂತಿದೆ. ಬೆಳಗ್ಗೆಯೂ ತರಕಾರಿ ಮಾರಲು ವ್ಯವಸ್ಥೆಯಾದರೆ ಉತ್ತಮವಾಗುತ್ತದೆ. ಕಣ್ಣಿ ಮಾರುಕಟ್ಟೆ ಅಂತಹ ಕೆಟ್ಟ ಸ್ಥಿತಿ ಯಾರಿಗೂ ಬರಬಾರದು.
ಯಲ್ಲಾಲಿಂಗ ಪೂಜಾರಿ,
ರೈತ, ಕೂಟನೂರ

ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next