ಕಲಬುರಗಿ: ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ಕೋವಿಡ್-19 ಹಿನ್ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೋವಿಡ್ ವಾರಿಯರ್ಸ್ (ಸೈನಿಕರು) ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದ ರೋಗಿಯೊಬ್ಬರಿಗೆ ತುರ್ತಾಗಿ ಬೇಕಾಗಿದ್ದ ಮಾತ್ರೆ ತಲುಪಿಸಿ, ಸಹಾಯ ಹಸ್ತ ನೀಡಿದ್ದಾರೆ.
ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮದ ಶಿವಶರಣ ಎನ್ನುವ ರೋಗಿಗೆ ಪ್ರತಿ ತಿಂಗಳು ಸೇವಿಸಬೇಕಾದ ಮಾತ್ರೆಗಳನ್ನು ತಮ್ಮ ಸ್ವಂತ ವಾಹನದಲ್ಲಿ ಕಲಬುರಗಿಯಿಂದ ಹುಮನಾಬಾದ ತಾಲೂಕಿನ ದುಬಲಗುಂಡಿ ಗ್ರಾಮಕ್ಕೆ ಕೊರೊನಾ ಸೈನಿಕರಾದ ಹರ್ಷಲ್, ಸಂದೀಪ ಹೋಗಿ ತಲುಪಿಸಿದ್ದಾರೆ.
ಶಿವಶರಣಪ್ಪ ಅವರಿಗೆ 2014ರಲ್ಲಿ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಒಂದು ಮೂತ್ರಪಿಂಡ ಬದಲಾವಣೆ ಮಾಡಿ ಶಸ್ತ್ರಚಿಕಿತ್ಸೆ ಮಾಡಲಾಗಿತ್ತು. ನಂತರ ಈ ಇವರು ಪ್ರತಿ ತಿಂಗಳು ಬೆಂಗಳೂರಿಗೆ ತೆರಳಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು, ವೈದ್ಯರ ಸಲಹೆಯಂತೆ ಮಾತ್ರೆ ತೆಗೆದುಕೊಂಡು ಬರುತ್ತಿದ್ದರು.
ಸದ್ಯ ರಾಜ್ಯಾದ್ಯಂತ 21 ದಿನಗಳ ಕಾಲ ಲಾಕ್‌ಡೌನ್ ಇರುವ ಕಾರಣ, ರೈಲು, ಬಸ್ ಸೇರಿದಂತೆ ಯಾವುದೇ ಸಾರಿಗೆ ವ್ಯವಸ್ಥೆ ಇರದ ಕಾರಣ ಬೆಂಗಳೂರಿಗೆ ಹೋಗದಂತಾಗಿದೆ. ನಂತರ ವಿಕ್ಟೋರಿಯಾ ಆಸ್ಪತ್ರೆಗೆ ಕರೆ ಮಾಡಿ ಈ ಬಾರಿ ತಪಾಸಣೆಗೆ ಬರಲು ಆಗದಿರುವ ಬಗ್ಗೆ ತಿಳಿಸಿ, ಮಾತ್ರೆ ಕಳುಹಿಸುವಂತೆ ಶಿವಶರಣಪ್ಪ ಕೋರಿದ್ದರು.ಆದರೆ, ಅಲ್ಲಿನ ಸಿಬ್ಬಂದಿ ಬೆಂಗಳೂರಿನಲ್ಲಿ ಸದ್ಯದಲ್ಲಿ ಟ್ರಾನ್ಸ್‌ಫೋರ್ಟ್ ವ್ಯವಸ್ಥೆ ಇಲ್ಲ. ತಾವೇ ಸ್ವತಃ ಬಂದು ತೆಗೆದುಕೊಂಡು ಹೋಗಿ ಎಂದು ತಿಳಿಸಿದ್ದರು. ಆಗ ಶಿವಶರಣಪ್ಪ ಪದೇಪದೆ ಆಸ್ಪತ್ರೆಯವರಲ್ಲಿ ಮನವಿ
ಮಾಡಿದಾಗ ಅಲ್ಲಿನ ಸಿಬ್ಬಂದಿ ಜೈ ಲಕ್ಷ್ಮೀ ಟ್ರಾನ್ಸ್‌ಫೋರ್ಟ್ ಮೂಲಕ ಶಿವಶರಣಪ್ಪ ಅವರ ಮಾತ್ರೆ ಕಳುಹಿಸಿ ಕೊಟ್ಟರು.
ಎರಡು ಮೂರು ದಿನ ಕಾಯ್ದರೂ ಮಾತ್ರೆ ಹುಮನಾಬಾದ್‌ಗೆ ತಲುಪಲಿಲ್ಲ. ಜೈ ಲಕ್ಷ್ಮೀ ಟ್ರಾನ್ಸ್‌ಫೋರ್ಟ್ ನವರಿಗೆ ಕರೆ ಮಾಡಿ ಕೇಳಿದಾಗ, ಕಲಬುರಗಿ ವರೆಗೆ ಮಾತ್ರ ವಾಹನಗಳು ಬರಲು ಸಾಧ್ಯ. ಬೀದರ ವರೆಗೆ ಬರಲು ಸಾಧ್ಯವಿಲ್ಲ. ವಾಹನಗಳನ್ನು ಬಿಡುತ್ತಿಲ್ಲ ಎಂದು ತಿಳಿಸಿದರು. ಆಗ ಕಲಬುರಗಿಯ ಕೊರೊನಾ ಸೈನಿಕರಾದ ಹರ್ಷಲ್ ಮತ್ತು ಸಂದೀಪ ಟ್ರಾನ್ಸ್‌ಫೋರ್ಟ್ ಕಚೇರಿಗೆ ಭೇಟಿ ನೀಡಿ, ಮಾತ್ರೆಗಳನ್ನು ತೆಗೆದುಕೊಂಡು ತಮ್ಮ ವಾಹನದಲ್ಲಿ ತೆರಳಿ, ಶಿವಶರಣಪ್ಪ ಅವರ ಮನೆಗೆ ತಲುಪಿಸಿದರು.
ಆಗ ಶಿವಶರಣಪ್ಪ ಈ ಮಾತ್ರೆ ಇಲ್ಲಿ ತುಂಬಾ ತುಟ್ಟಿ, ಹತ್ತು ಮಾತ್ರೆಗಳಿಗೆ 1500ರೂ. ಇತ್ತು. ಖರೀದಿಸುವುದು ತುಂಬಾ ಕಷ್ಟವಾಗಿತ್ತು.
ಮಾತ್ರೆ ತಂದುಕೊಟ್ಟು, ನೆರವಾಗಿದ್ದೀರಿ. ಇದರಿಂದ ಅನುಕೂಲವಾಗಿದೆ ಎಂದು ಕೃತಜ್ಞತಾ ಭಾವ ಮೆರೆದಿದ್ದಾರೆ.