ಕಲಬುರಗಿ: ನಗರದ ಕೇಂದ್ರ ಜೈಲಿನಿಂದ ಪೆರೋಲ್ ಮೇಲೆ ತೆರಳಿದ್ದ 10 ಕೈದಿಗಳಿಗೂ ಕೋವಿಡ್ ಸೋಂಕು ದೃಢಪಟ್ಟಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಅವರನ್ನೆಲ್ಲ ಬೇರೊಂದು ಕಡೆ ಇರಿಸಲಾದ್ದರಿಂದ ಜೈಲು ಅಧಿಕಾರಿಗಳು ಮತ್ತು ಇತರ ಕೈದಿಗಳು ನಿಟ್ಟುಸಿರು ಬಿಡುವಂತೆ ಆಗಿದೆ.
ಕೋವಿಡ್ ಭೀತಿ ಹಿನ್ನೆಲೆಯಿಂದಲೇ 73 ಜನ ಕೈದಿಗಳು ಪೆರೋಲ್ ಮೇಲೆ ಕಳುಹಿಸಲಾಗಿತ್ತು. ಇದರಲ್ಲಿ ಇತ್ತೀಚಿಗೆ 60 ಜನರಿ ಮರಳಿ ಬಂದಿದ್ದಾರೆ. ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, 10 ಜನರಿಗೆ ಸೋಂಕು ಪತ್ತೆಯಾಗಿದೆ. ಹೀಗಾಗಿ ಎಲ್ಲ ಸೋಂಕಿತರನ್ನು ಈಗ ಐಸೋಲೇಷನ್ ವಾರ್ಡ್‌ಗೆ ದಾಖಲಾಗಿಸಲಾಗಿದೆ. ಕೇಂದ್ರ ಕಾರಾಗೃಹದಲ್ಲಿ ಕೋವಿಡ್ ಹರಡದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಅನುಸರಿಕೊಂಡು ಬರಲಾಗಿದೆ. ಹೊಸ ಆರೋಪಿಗಳು ಮತ್ತು ಪೆರೋಲ್ ಮೇಲೆ ಹೋಗಿರುವ ಕೈದಿಗಳಿಗಾಗಿ ಜೈಲಿನ ಸಮೀಪದ ಕಟ್ಟಡವೊಂದರ ವ್ಯವಸ್ಥೆ ಮಾಡಲಾಗಿದೆ. ಅಲ್ಲಿ ಅವರನ್ನು ಇರಿಸಿ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗುತ್ತದೆ. ಕೋವಿಡ್ ನೆಗೆಟಿವ್ ವರದಿ ಬಂದವರನ್ನು ಮಾತ್ರವೇ ಜೈಲಿನ ಒಳಗಡೆ ಬಿಡಲಾಗುತ್ತದೆ. ಪಾಸಿಟಿವ್ ಬರುವ ಸೋಂಕಿತ ಕೈದಿಗಳಿಗೆ ಪ್ರತ್ಯೇಕ ಐಸೋಲೇಷನ್ ವಾರ್ಡ್ ಮಾಡಲಾಗಿದ್ದು. ಅಲ್ಲಿನ ಅವರನ್ನು ಇರಿಸಿ ಚಿಕಿತ್ಸೆ ನೀಡಲಾಗುತ್ತದೆ. ಐಸೋಲೇಷನ್ ವಾರ್ಡ್ ಗೆ ಪೊಲೀಸ್ ಭದ್ರತೆಯನ್ನು ಕಲ್ಪಿಸಲಾಗಿದೆ ಎಂದು ಜೈಲಿನ ಅಧೀಕ್ಷಕ ರಮೇಶ ಮಾಹಿತಿ ನೀಡಿದ್ದಾರೆ.
ಎಸ್‌ಪಿ ಕಚೇರಿಗೂ ಕಂಟಕ: ಜಿಲ್ಲಾ ಪೊಲೀಸ್ ವರಿಷ್ಠಾ ಧಿಕಾರಿ ಕಚೇರಿಗೂ ಕೋವಿಡ್ ಕಂಟಕ ಶುರುವಾಗಿದ್ದು, ಕಚೇರಿಯ ಏಳು ಮಂದಿ ಸಿಬ್ಬಂದಿಗೂ ಸೋಂಕು ವಕ್ಕರಿಸಿದೆ. ಪೊಲೀಸರಿಗೆ ಸೋಂಕು ಹರಡುತ್ತಿರುವುದರಿಂದ ಎಲ್ಲ ಸಿಬ್ಬಂದಿಗೆ ರ್‍ಯಾಂಡಮ್ ಪರೀಕ್ಷೆ ಮಾಡಲಾಗುತ್ತಿದ್ದು, ಇದರಲ್ಲಿ 47 ವರ್ಷ, 48 ವರ್ಷ, 49 ವರ್ಷ ಹೀಗೆ ವಿವಿಧ ವಯೋಮಾನ ಸಿಬ್ಬಂದಿಗೆ ಕೋವಿಡ್ ಪತ್ತೆಯಾಗಿದೆ. ಒಂದೇ ದಿನ 85 ಜನರಿಗೆ ಸೋಂಕು: ಪೆರೋಲ್ ಮೇಲೆ ತೆರಳಿದ್ದ ಕೈದಿಗಳು ಹಾಗೂ ಎಸ್‌ಪಿ ಕಚೇರಿಯ ಸಿಬ್ಬಂದಿ ಸೇರಿ ಗುರುವಾರ ಒಟ್ಟು 85 ಜನರಿಗೆ ಸೋಂಕು ದೃಢಪಟ್ಟಿದೆ. ಈ ಮೂಲಕ ಒಟ್ಟು ಸೋಂಕಿತರ ಸಂಖ್ಯೆ 1,901ಕ್ಕೆ ಏರಿಕೆಯಾಗಿದೆ.
ಕಲಬುರಗಿ ನಗರದ ಮತ್ತು ತಾಲೂಕಿನಲ್ಲೇ ಸುಮಾರು 65 ಪ್ರಕರಣಗಳು ಪತ್ತೆಯಾಗಿವೆ. ಚಿತ್ತಾಪುರ-7, ಸೇಡಂ-3, ಜೇವರ್ಗಿ-2, ಯಾಡ್ರಾಮಿ, ಚಿಂಚೋಳಿ, ಶಹಾಬಾದ್, ಆಳಂದ ಮತ್ತು ಕಾಳಗಿಯಲ್ಲಿ ತಲಾ ಒಬ್ಬರಿಗೆ ಸೋಂಕು ಕಾಣಿಸಿಕೊಂಡಿದೆ. ಇದರಲ್ಲಿ ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯುಳ್ಳ 30 ಜನರಿಗೆ ಕೊರೊನಾ ಹರಡಿದೆ. 85 ಸೋಂಕಿತರಲ್ಲಿ 19 ಮಹಿಳೆಯರು ಸೇರಿದ್ದು, ಒಂದು ವರ್ಷದ ಗಂಡು ಮಗು, ಮೂರು ವರ್ಷದ ಬಾಲಕಿ-ಬಾಲಕ, ಐದು ವರ್ಷದ ಬಾಲಕ ಸಹ ಇದ್ದಾರೆ. ಪ್ರಾದೇಶಿಕ ವಿಧಿವಿಜ್ಞಾನ ಪ್ರಯೋಗಾಲಯ (ಆರ್‌ಎಫ್‌ಎಸ್ ಎಲ್)ಕ್ಕೂ ಸೋಂಕು ವಕ್ಕರಿಸಿದ್ದು, ಒಂದು ಮಗು, ಐದು ವರ್ಷದ ಮಕ್ಕಳು ಹಾಗೂ 29 ವರ್ಷದ ಮಹಿಳೆಗೆ ಸೋಂಕು ಅಂಟಿಕೊಂಡಿದೆ. ಹಗರಗಾ ಕ್ರಾಸ್‌ನ ಸ್ವಪ್ನಾ ಬೇಕರಿಯಲ್ಲಿ 29 ವರ್ಷದ ವ್ಯಕ್ತಿ, ಕೆಬಿಎನ್ ಆಸ್ಪತ್ರೆಯಲ್ಲಿ 23 ವರ್ಷದ ವ್ಯಕ್ತಿ, ಹಜ್ ಕಮಿಟಿಯಲ್ಲಿ 24 ವರ್ಷದ ವ್ಯಕ್ತಿಗೆ ಸೋಂಕು ವಕ್ಕರಿಸಿದೆ.
ಇದೇ ವೇಳೆ 41 ಸೋಂಕಿತರು ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇದರೊಂದಿಗೆ ಒಟ್ಟು 1,901ಕ್ಕೆ ಸೋಂಕಿತರ ಪೈಕಿ ಇದುವರೆಗೆ 1,392 ಜನರು ಆಸ್ಪತ್ರೆಯಿಂದ ಬಿಡುಗಡೆಗೊಂಡಂತೆ ಆಗಿದೆ. ಇನ್ನು, 477 ಸೋಂಕಿತರು ಐಸೋಲೇಷನ್ ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
32 ಕ್ಕೇರಿದ ಸಾವಿನ ಸಂಖ್ಯೆ
ಕೋವಿಡ್ ಮಹಾಮಾರಿ ಜ್ವರ, ಕೆಮ್ಮು ಮತ್ತು ಉಸಿರಾಟದ ಸಮಸ್ಯೆಯುಳ್ಳವರಿಗೆ ಕಂಟಕವಾಗಿ ಪರಿಣಮಿಸುತ್ತಿದ್ದು, ಗುರುವಾರ ಮತ್ತಿಬ್ಬರು ಸಾವನ್ನಪ್ಪಿರುವುದು ಖಚಿತವಾಗಿದೆ. ಇದರೊಂದಿಗೆ ಒಟ್ಟು 32 ಜನರು ಬಲಿಯಾದಂತಾಗಿದೆ. ನಗರದ ಜಮ್-ಜಮ್ ಕಾಲೋನಿಯ 50 ವರ್ಷದ ಮಹಿಳೆ (ಪಿ-26,670) ಜು.5ರಂದು ಜಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದರು. ಜು.8 ರಂದು ಅವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ಅದೇ ರೀತಿ ಮೆಹಬೂಬ್ ನಗರದ 53 ವರ್ಷದ ವ್ಯಕ್ತಿ (ಪಿ-30,965) ಸಹ ತೀವ್ರ ಉಸಿರಾಟ ಬಳಲುತ್ತಿದ್ದರು. ಹೀಗಾಗಿ ಜು.4ರಂದು ಆಸ್ಪತ್ರೆಗೆ ದಾಖಲಾಗಿದ್ದ ಇವರು ಜು.8ರಂದು ಅಸುನೀಗಿದ್ದಾರೆ.