ಕಲಬುರಗಿ: ಜಿಲ್ಲೆಯ ಕೊರೊನಾ ಶಂಕಿತ ವ್ಯಕ್ತಿಯೊಬ್ಬರು ಹೈದರಾಬಾದ್ ನಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
ನಗರದ ಮಿಲ್ ಪ್ರದೇಶದ ನಿವಾಸಿಯಾಗಿದ್ದ 76 ವರ್ಷದ ವ್ಯಕ್ತಿಯೋರ್ವರು ಮೃತಪಟ್ಟಿದ್ಧಾರೆ.
ವ್ಯಕ್ತಿಗೆ ಕೊರೊನಾ ಸೋಂಕು ಇರುವ ಬಗ್ಗೆ ಶಂಕೆ ಮಾತ್ರವಾಗಿದ್ದು, ಇದುವರಗೆ ದೃಢವಾಗಿಲ್ಲ. ಆದರೂ ಇದು ಜಿಲ್ಲಾಡಳಿತ ಮತ್ತು ಜನರಲ್ಲಿ ಆತಂಕ ಮೂಡುವಂತಾಗಿದೆ.
ಶಂಕಿತ ವ್ಯಕ್ತಿ ಫೆ.29ರಂದು ದುಬೈನಿಂದ ಮರಳಿದ್ದರು. ತೀವ್ರ ಕೆಮ್ಮು ಮತ್ತು ಜ್ವರದಿಂದ ಬಳಲುತ್ತಿದ್ದ ಕಾರಣ ಮಾ.5ರಂದು ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಸೋಮವಾರ ರಾತ್ರಿ ನಗರದ ತಪಾಸಣೆ ವೇಳೆ ಕೊರೊನಾ ಲಕ್ಷಣಗಳು ಪತ್ತೆಯಾಗಿದ್ದು, ತಕ್ಷಣವೇ ಜಿಮ್ಸ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾಗಿದ್ದ ಕೊರೊನಾ ವಿಶೇಷ ಘಟಕಕ್ಕೆ ಸ್ಥಳಾಂತರ ಮಾಡಲಾಗಿತ್ತು.
ಜಿಮ್ಸ್ ಆಸ್ಪತ್ರೆಯಲ್ಲಿ ಗಂಟಲು ದ್ರವ ಮಾದರಿ ಸಂಗ್ರಹಿಸಿ ಪರೀಕ್ಷೆ ಗೆಂದು ಬೆಂಗಳೂರಿಗೆ ರವಾನಿಸಲಾಗಿತ್ತು. ಮಂಗಳವಾರ ವೈದ್ಯರ ಸಲಹೆ ಮೀರಿ ವೃದ್ಧನನ್ನು ಕುಟುಂಬಸ್ಥರು ಹೈದರಾಬಾದ್ ಗೆ ಕರೆದುಕೊಂಡು ಹೋಗಿದ್ದರು ಎಂದು ಹೇಳಲಾಗಿದೆ. ಮಂಗಳವಾರ ರಾತ್ರಿಯೇ ಹೈದ್ರಾಬಾದ್ ನಿಂದ ಮರಳಿ ಬರಬೇಕಾದರೆ ಮಾರ್ಗ ಮಧ್ಯದಲ್ಲಿ ಮೃತ ಪಟ್ಟಿದ್ದಾರೆ ಎಂದು ಗೊತ್ತಾಗಿದೆ.
ಜಿಲ್ಲೆಯ ಜಾಗೃತಿ ವಹಿಸಲು ಆರೋಗ್ಯ ಅಧಿಕಾರಿಗಳು ಮನವಿ ಮಾಡಿದ್ದಾರೆ. ಅಲ್ಲದೆ ಅಂತ್ಯಕ್ರಿಯೆ ನಡೆಯುವವರೆಗೂ ಉಸ್ತುವಾರಿ ಮತ್ತು ಜಾಗೃತಿ ಕ್ರಮ ವಹಿಸಲು ತಾಲೂಕು ಆರೋಗ್ಯ ಅಧಿಕಾರಿ ಡಾ.ಶರಣಬಸಪ್ಪ ಅವರನ್ನು ಉಸ್ತುವಾರಿ ಆಗಿ ಡಿಎಚ್ಒ ನೇಮಿಸಿದ್ದಾರೆ.