ಕಲಬುರಗಿ: ಬೇಡಿಕೆಗೆ ಅನುಗುಣವಾಗಿ ಸಿರಾಮಿಕ್ ಎಂಜಿನಿಯರ್‌ಗಳನ್ನು ಸೃಷ್ಟಿಸುವ ಜವಾಬ್ದಾರಿ ಹೆಚ್ಚಳವಾಗಿದೆ ಎಂದು ಮುಂಬೈ ಎಸಿಸಿ ಸಿಮೆಂಟ್ ಕಂಪನಿ ಉಪಾಧ್ಯಕ್ಷ ಹಾಗೂ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಹಳೆ ವಿದ್ಯಾರ್ಥಿ ಉಮೇಶ ಹೊಸೂರ ತಿಳಿಸಿದರು.
ನಗರದ ಪೂಜ್ಯ ದೊಡ್ಡಪ್ಪ ಅಪ್ಪ ತಾಂತ್ರಿಕ ಮಹಾವಿದ್ಯಾಲಯದ ಸಿರಾಮಿಕ್ ಮತ್ತು ಸಿಮೆಂಟ್ ವಿಭಾಗವು ದಿ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಇಂಡಸ್ಟ್ರಿ ಇನ್‌ಸ್ಟಿಟ್ಯೂಟ್ ಇಂಟರ್ಯಾಕ್ಷನ್ ಉದ್ಯಮ- ಸಂಸ್ಥೆಗಳ ವಿಚಾರ ವಿನಿಮಯ ಕಾರ್ಯಕ್ರಮ ಉದ್ಘಾಟಿಸಿ ಅವರು ಉಪನ್ಯಾಸ ನೀಡಿದರು.
ಸಿರಾಮಿಕ್ ವಸ್ತುಗಳಾದ ರಿಫ್ರ್ಯಾಕ್ಟರೀಸ್ (ಅತ್ಯುಷ್ಣಸಹಿಷ್ಣು ಇಟ್ಟಿಗೆಗಳು) ಗಳಿಲ್ಲದೇ ಯಾವುದೆ ಸ್ಟೀಲ್, ಸಿಮೆಂಟ್, ಪೇಪರ್, ಪೆಟ್ರೋಲಿಯಂ, ಅಲ್ಯೂಮಿನಿಯಂ ಕಂಪನಿಗಳು ನಡೆಯುವಂತಿಲ್ಲ. ಅಂತಹ ಸಿರಾಮಿಕ್ ವಸ್ತುಗಳ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದೆ. ಪರಿಣಿತ ಸಿರ್ಯಾಮಿಕ್ ತಂತ್ರಜ್ಞರ ಅವಶ್ಯಕತೆ ಹೆಚ್ಚಾಗಿದೆ. ಆದ್ದರಿಂದ ಕರ್ನಾಟಕದ ಏಕೈಕ ಸಿರಾಮಿಕ್ ಎಂಜಿನಿಯರಗಳನ್ನು ಉತ್ಪಾದಿಸುವ ಪಿಡಿಎ ಎಂಜಿನಿಯರಿಂಗ್ ಕಾಲೇಜಿನ ಜವಾಬ್ದಾರಿ ಹೆಚ್ಚಾಗಿದೆ ಎಂದರು.
ಎಸಿಸಿ ಕಂಪನಿಯು ರಿಫ್ರ್ಯಾಕ್ಟರೀಸ್ ಗಳ ಗುಣಮಟ್ಟ ಪರೀಕ್ಷಿಸುವ ನಿಮ್ಮ ಪ್ರಯೋಗಾಲಯದಲ್ಲಿ ಉತ್ಸುಕತೆ ತೋರಿಸುತ್ತಿದ್ದು, ಈ ಸಂಬಂಧ ಮುಂದಿನ ದಿನಗಳಲ್ಲಿ ಕಾಲೇಜಿನ ಜೊತೆ ತಿಳಿವಳಿಕೆ ಪತ್ರ (ಎಂಒಯು)ಕ್ಕೆ ಸಹಿ ಹಾಕುವ ಕುರಿತು ವಿಚಾರ ಮಾಡಲಾಗಿದೆ ಎಂದು ತಿಳಿಸಿದರು.
ದಿ. ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರ್ ಕೇಂದ್ರದ ಚೆರಮನ್ ಬಿ.ಎಸ್. ಮೋರೆ ಮಾತನಾಡಿ, ಇಂತಹ ಕಾರ್ಯಕ್ರಮಗಳಿಗೆ ಸಂಸ್ಥೆ ನೆರವು ನೀಡುತ್ತದೆ ಎಂದರು. ಸಿರಾಮಿಕ್ ಮತ್ತು ಸಿಮೆಂಟ್ ವಿಭಾಗದ ಮುಖ್ಯಸ್ಥ ಡಾ| ಅಮರೇಶ ರಾಯಚೂರ ಉಪನ್ಯಾಸ ನೀಡಿ, ವಿದ್ಯಾರ್ಥಿಗಳ ಸಮಸ್ಯೆ ಹಾಗೂ ಸಲಹೆ ಆಲಿಸಿ ಕಾರ್ಯರೂಪಕ್ಕೆ ತಂದು ಉದ್ಯಮಿಗಳನ್ನು ತಯಾರು ಮಾಡುತ್ತೇವೆ ಎಂದು ಹೇಳಿದರು.
ಕಾಲೇಜಿನ ಪ್ಲೇಸಮೆಂಟ್ ಅಧಿಕಾರಿ ಡಾ| ಮಹಾದೇವಪ್ಪ ಗಾದಗೆ ಇದ್ದರು. ಪ್ರಾಧ್ಯಾಪಕ ಡಾ| ಬಾಬುರಾವ್ ಶೇರಿಕರ್ ಅವರು ಸ್ವಾಗತಿಸಿದರು. ಪ್ರೊ| ರಂಗದಾಳ ಅವರು ವಂದಿಸಿದರು. ಪ್ರೊ| ಗುಂಡು ಕೊಳ್ಳಕೂರ್, ಡಾ| ವಿರೇಶ ಮಲ್ಲಾಪುರ್ ಪರಿಚಯಿಸಿದರು. ಆಕಾಶ ವಡಗೇರಿ ನಿರೂಪಿಸಿದರು.