ಕಲಬುರಗಿ: ಲಾಕ್‌ಡೌನ್ ಸಂಕಷ್ಟದ ನಡುವೆಯೂ ಜಿಲ್ಲೆಯ ಹತ್ತಿ ಬೆಳೆಗಾರರಲ್ಲಿ ಮೊಗದಲ್ಲಿ ಹರ್ಷದ ಹೊನಲು ಹರಿದಿದೆ. 20 ವರ್ಷಗಳ ನಂತರ ಮೊಟ್ಟ ಮೊದಲ ಬಾರಿಗೆ ಬೆಂಬಲ ಬೆಲೆ ಯೋಜನೆಯಡಿ ಹತ್ತಿ ಬೆಳೆದ ರೈತರಿಂದ ಕೇಂದ್ರ ಸರ್ಕಾರದ ಅಧಿಧೀನ ಸಂಸ್ಥೆಯಾದ ಭಾರತೀಯ ಹತ್ತಿ ನಿಗಮ ನಿಯಮಿತ (ಸಿಸಿಐ) ಹತ್ತಿ ಖರೀದಿಸಿದೆ.
2019-20ನೇ ಸಾಲಿನಲ್ಲಿ ಬೆಂಬಲ ಬೆಲೆ ಯೋಜನೆಯಡಿ ಜಿಲ್ಲೆಯ 5,962 ಬೆಳೆಗಾರರಿಂದ ಒಟ್ಟು 88.04 ಕೋಟಿ ರೂ. ಮೌಲ್ಯದ ಹತ್ತಿಯನ್ನು ಸಿಸಿಐ ಖರೀದಿಸಿದೆ. ತಾಲೂಕಿನ ನಂದಿಕೂರನ ಗಜಾನನ ಮಹಾರಾಜ ಹತ್ತಿ ಮಿಲ್ ಹಾಗೂ ಜೇವರ್ಗಿ ತಾಲೂಕಿನ ಮಂಜೀತ್ ಕಾಟನ್ ಮಿಲ್‌ಗಳನ್ನು ಆಯ್ಕೆ ಮಾಡಿಕೊಂಡು ಹತ್ತಿ ಖರೀದಿಸಿದೆ ಎಂದು ಜಿಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಕಾರ್ಯದರ್ಶಿ ಶೈಲಜಾ ಎಂ.ವಿ. ತಿಳಿಸಿದ್ದಾರೆ.
ನಂದಿಕೂರನಲ್ಲಿರುವ ಗಜಾನನ ಮಹಾರಾಜ ಹತ್ತಿ ಮಿಲ್ ಕಲಬುರಗಿ ಮತ್ತು ಸುತ್ತಮುತ್ತಲಿನ 1,250 ರೈತರಿಂದ 20.07 ಕೋಟಿ ರೂ. ಮೌಲ್ಯದ ಒಟ್ಟು 37,425 ಕ್ವಿಂಟಲ್ ಹತ್ತಿ ಖರೀದಿಸಿದೆ. ಅದೇ ರೀತಿ ಜೇವರ್ಗಿಯ ಮಂಜೀತ್ ಕಾಟನ್ ಮಿಲ್ 4,712 ರೈತರಿಂದ 67.97 ಕೋಟಿ ರೂ. ಮೌಲ್ಯದ 1,28,913 ಕ್ವಿಂಟಲ್ ಹತ್ತಿ ಖರೀದಿ ಮಾಡಿದೆ. ಹತ್ತಿ ಖರೀದಿ ಪ್ರಮಾಣದಲ್ಲಿ ಯಾವುದೇ ಮಿತಿ ನಿಗದಿಗೊಳಿಸದೆ ಗರಿಷ್ಠ ಪ್ರಮಾಣದಲ್ಲಿ ರೈತರಿಂದ ಹತ್ತಿಯನ್ನು ಖರೀದಿಸಿರುವುದು ಇದೇ ಮೊದಲಾಗಿದೆ. ಪ್ರತಿ ಕ್ವಿಂಟಲ್‌ಗೆ ಗುಣಮಟ್ಟಕ್ಕೆ ಅನುಸಾರವಾಗಿ ಕನಿಷ್ಠ 5,005ರೂ. ದಿಂದ ಗರಿಷ್ಠ 5,950ರೂ. ವರೆಗೆ ಹತ್ತಿ ಖರೀದಿಸಲಾಗಿದೆ. ರೈತರಿಂದ ನಿರಂತರವಾಗಿ ಹತ್ತಿ ಖರೀದಿ ಪ್ರಕ್ರಿಯೆ ಕೈಗೊಳ್ಳುವಲ್ಲಿ ಸಿಸಿಐಯ ಪ್ರಮೋದ, ಮಹೇಶ ಹಾಗೂ ಎಪಿಎಂಸಿಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಶ್ರಮಿಸಿದ್ದಾರೆ.
ಕಲಬುರಗಿ ಜಿಲ್ಲೆಯಲ್ಲಿ ಬೆಂಬಲ ಬೆಲೆ ಯೋಜನೆಯಡಿ ಎರಡು ಹತ್ತಿ ಕೇಂದ್ರಗಳ ಮೂಲಕ 5,962 ಬೆಳೆಗಾರರಿಂದ 88.04 ಕೋಟಿ ರೂ. ಮೌಲ್ಯದ ಹತ್ತಿ ಖರೀದಿಸಲಾಗಿದೆ. ಜಿಲ್ಲೆಯಲ್ಲಿ ಜೇವರ್ಗಿ ಮಿಲ್ ಘಟಕದಲ್ಲಿ ಗರಿಷ್ಠ ಪ್ರಮಾಣದ ಹತ್ತಿ ಹಾಗೂ ಹತ್ತಿ ಬೀಜ ಶೇಖರಣೆಯಾಗಿದೆ. ಆದ್ದರಿಂದ ಸಂಸ್ಕರಣೆ ಮತ್ತು ಟೆಂಡರ್ ಮೂಲಕ ವಿಲೇವಾರಿ ಮಾಡುವವರೆಗೂ ಜೇವರ್ಗಿ ಕೇಂದ್ರದಲ್ಲಿ ತಾತ್ಕಾಲಿಕವಾಗಿ ಹತ್ತಿ ಖರೀದಿ ನಿಲ್ಲಿಸಲಾಗಿದೆ. ಸ್ಥಳಾವಕಾಶವಾದ ನಂತರ ಖರೀದಿ ಪ್ರಕ್ರಿಯೆ ಪುನರಾರಂಭಿಸಲು ಕ್ರಮ ಕೈಗೊಳ್ಳಲಾಗುತ್ತದೆ.
ಶೈಲಜಾ,
ಕಾರ್ಯದರ್ಶಿ, ಎಪಿಎಂಸಿ