Advertisement

600 ವರ್ಷದ ಬಾವಿಯಲ್ಲಿ ಬತ್ತದ ಝರಿ

09:50 AM Jun 05, 2019 | Naveen |

ಒಂದು ಕಾಲದಲ್ಲಿ ಬಾವಿಗಳು ಗತವೈಭವ ಕಂಡಿದ್ದವು. ನೂರಾರು ಜನರು ಬಾವಿಗಳನ್ನು ಸುತ್ತುವರಿದು ಜೀವ ಜಲ ಪಡೆಯುತ್ತಿದ್ದರು. 15ರಿಂದ 20 ವರ್ಷಗಳ ಹಿಂದೆ ನಗರ ಪ್ರದೇಶದ ಜನತೆ ಬಹುಮಟ್ಟಿಗೆ ನೀರಿಗಾಗಿ ಬಾವಿಗಳನ್ನು ಆಶ್ರಯಿಸಿದ್ದರು. ಇತ್ತೀಚೆಯ ವರ್ಷಗಳಲ್ಲಿ ಬಾವಿಗಳ ಬಳಕೆ ನಿಂತಿದ್ದರಿಂದ ಕೆಲವು ಕಸ ತೊಟ್ಟಿಗಳಾಗಿ ಮಾರ್ಪಟ್ಟಿವೆ.

Advertisement

ಕಲಬುರಗಿ: ಬರಗಾಲದ ಪರಿಸ್ಥಿತಿಯಲ್ಲೂ ಜಿಲ್ಲೆಯ ಕೆಲ ಬಾವಿಗಳು ಜೀವ ಸೆಲೆ ಹೊಂದಿವೆ. ಈಗಿನ ಕಾಲದಲ್ಲೂ ಜನರ ದಾಹ ನೀಗಿಸುವ ಆಶ್ರಯ ತಾಣಗಳು ಎನ್ನುವುದಕ್ಕೆ ನಗರದ ಪುರಾತನ ಬಾವಿಗಳೇ ಜೀವಂತ ಸಾಕ್ಷಿಯಾಗಿವೆ.

ನಗರದ ಬಹುಮನಿ ಕೋಟೆ ಬಳಿಯ ಆಳಂದ ನಾಕಾ ಸಮೀಪದ ಬಂದೇ ನವಾಜ್‌ ಖಾನಖಾ ಅಥವಾ ತಖ್ತ್ (ಸೂಫಿ ಆಶ್ರಮ-ಆಶ್ರಯ ತಾಣ) ಹತ್ತಿರ ಇರುವ ಪುರಾತನ ಬಾವಿಯಲ್ಲಿ ನಿರಂತರವಾಗಿ ಝರಿ ಬಸಿಯುತ್ತದೆ. ನಿತ್ಯ ಸುಮಾರು 50 ಸಾವಿರ ಲೀಟರ್‌ ನೀರು ಹೊರ ತೆಗೆದರೂ ಹೊಸದಾಗಿ ಮತ್ತೆ ನೀರು ಸಂಗ್ರಹವಾಗುತ್ತ. ಮರು ದಿನ ಮತ್ತೆ 50 ಸಾವಿರ ಲೀಟರ್‌ ನೀರು ತೆಗೆಯಬಹುದು.

600 ವರ್ಷಗಳ ಇತಿಹಾಸ: ಅಂತರಗಂಗೆ ಹರಿಸುವ ಈ ಬಾವಿ 600 ವರ್ಷಗಳ ಇತಿಹಾಸ ಹೊಂದಿದೆ. ಸೂಫಿ ಸಂತ ಹಜರತ್‌ ಖಾಜಾ ಬಂದೇ ನವಾಝ ಈ ಸ್ಥಳದಲ್ಲಿ 29 ವರ್ಷ ಉಳಿದಿದ್ದರು. ಖಾಜಾ ಬಂದೇ ನವಾಝ ಅವರಿಗಾಗಿ ಆಗಿನ ಸುಲ್ತಾನ್‌ ಫಿರೋಜ್‌ ಶಹಾ ಬಹುಮನಿ ಇಲ್ಲಿ ಖಾನಖಾ ಕಟ್ಟಿಸಿ ಈ ಬಾವಿ ನಿರ್ಮಿಸಿದ್ದರು. ಈ ಬಾವಿಯ ನೀರನ್ನು ಖಾಜಾ ಬಂದೇ ನವಾಝ ಬಳಸಿದ್ದರು ಎನ್ನುವ ಐತಿಹಾಸಿಕ ಹಿನ್ನೆಲೆಯಿದೆ. 1972ರಲ್ಲಿ ಭೀಕರ ಬರಗಾಲ ಎದುರಾಗಿತ್ತು. ಆಗ ಇದೇ ಬಾವಿಯಿಂದ ಸಾರ್ವಜನಿಕರು ನೀರು ಪಡೆದು ದಾಹ ನೀಗಿಸಿಕೊಂಡಿದ್ದರು. 1972ರ ಬರಗಾಲದ ಪರಿಸ್ಥಿತಿಯೇ ಈಗ ಮತ್ತೆ ತಲೆದೋರಿದೆ. ಮಳೆ ಕೊರತೆಯಿಂದ ಅಂತರ್ಜಲ ಕುಸಿದಿದೆ. ಕುಡಿಯುವ ನೀರಿಗಾಗಿ ಪರಿತಪಿಸುವ ಸ್ಥಿತಿ ನಗರದ ಜನತೆಯನ್ನು ಕಾಡುತ್ತಿದೆ. ಬೋರ್‌ವೆಲ್ಗಳನ್ನು ಕೊರೆಸಿದರೂ ನೀರು ಸಿಗುತ್ತಿಲ್ಲ. ಆದರೆ, ಈ ಬಾವಿ ಎಂದಿಗೂ ಬತ್ತದೆ ಜನರ ನೀರಿನ ಬವಣೆ ನೀಗಿಸುತ್ತಿದೆ.

ಬಾವಿ ನೀರು ಸಿಹಿ-ತಿಳಿ: ಈ ಬಾವಿ ನೋಡಲು ಚಿಕ್ಕದಾಗಿದ್ದರೂ ತುಂಬಾ ಆಳವಾಗಿದೆ. ನೀರು ಸಿಹಿ ಮತ್ತು ತಿಳಿಯಾಗಿದೆ. ಬಾವಿಯಲ್ಲಿನ ನೀರಿನ ಝರಿ ಮೇಲಿಂದ ಕೆಳಗೆ ಬಸಿಯುವುದು ವಿಶೇಷ. ಬಾವಿಯನ್ನು ಇಂದಿಗೂ ಹಾಳಾಗದಂತೆ ಉಳಿಸಿಕೊಂಡು ಬರಲಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಕುಡಿಯುವ ನೀರಿಗೂ ಜನತೆ ಹಪಹಪಿಸುತ್ತಿದ್ದಾರೆ. ಸಾರ್ವಜನಿಕರ ಸಂಕಟ ನೋಡಲಾಗದೆ ಛೋಟಿ ದರ್ಗಾ ಕುಟುಂಬಸ್ಥರು ಈ ಪುರಾತನ ಬಾವಿ ಮೂಲಕ ಉಚಿತ ನೀರು ಸರಬರಾಜು ಮಾಡುತ್ತಿದ್ದಾರೆ.

Advertisement

ನಾಗರಿಕರಿಗೆ ಉಚಿತ ನೀರು ಪೂರೈಕೆ
ಬರಗಾಲ ಹಿನ್ನೆಲೆಯಲ್ಲಿ ನಗರದ ಎಲ್ಲೆಡೆ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಜನತೆ ಕುಡಿಯಲು ನೀರು ಸಿಗದೆ ಪರದಾಡುತ್ತಿದ್ದಾರೆ. ಹೀಗಾಗಿ ಏಪ್ರಿಲ್ ತಿಂಗಳಿಂದ ಈ ಬಾವಿ ನೀರನ್ನು ನಾಗರಿಕರಿಗೆ ಉಚಿತವಾಗಿ ಪೂರೈಸಲಾಗುತ್ತಿದೆ. ಮೊದಲಿಗೆ ನಾಲ್ಕು ಸಾವಿರ ಲೀಟರ್‌ ಸಾಮರ್ಥ್ಯದ ಒಂದೇ ಟ್ಯಾಂಕರ್‌ ಇತ್ತು. ಈಗ ಎರಡು ಟ್ಯಾಂಕರ್‌ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ನಿತ್ಯ ಎರಡು ಟ್ಯಾಂಕರ್‌ಗಳಿಂದ ನಾಲ್ಕೈದು ಟ್ರಿಪ್‌ನಂತೆ ಸುಮಾರು 50 ಸಾವಿರ ಲೀಟರ್‌ ನೀರು ಪೂರೈಸಲಾಗುತ್ತಿದೆ ಎನ್ನುತ್ತಾರೆ ಛೋಟಿ ದರ್ಗಾದ ಸಜ್ಜಾದೆ ನಶೀನ್‌ ಅವರ ಪುತ್ರ ಸೈಯದ್‌ ಯಾದುಲ್ಲಾ ಹುಸೇನಿ ನಿಜಾಮ್‌ ಬಾಬಾ.

ಮಸೀದಿಗಳಿಗೂ ಉಚಿತ ನೀರು
ಈಗ ರಂಜಾನ್‌ ತಿಂಗಳಾಗಿರುವುದಿಂದ ಮಸೀದಿಗಳಿಗೂ ಉಚಿತ ನೀರು ಸರಬರಾಜು ಮಾಡಲಾಗುತ್ತಿದೆ. ಸ್ಟೇಷನ್‌ ಬಜಾರ್‌, ಮಾರ್ಕೆಟ್ ಪ್ರದೇಶದ ಮಸೀದಿ ಸೇರಿದಂತೆ ನಗರದ ಐದಾರು ಮಸೀದಿಗಳಿಗೆ ನೀರು ಒದಗಿಸಲಾಗುತ್ತಿದೆ. ನೀರು ಸರಬರಾಜಿನ ಉಸ್ತುವಾರಿಯನ್ನು ತಾಹೇರ್‌ ಹುಸೇನ್‌ ಎನ್ನುವರಿಗೆ ವಹಿಸಲಾಗಿದೆ.

ಮತ್ತೊಂದು ಬಾವಿಗೆ ಕಾಯಕಲ್ಪ
ಖಾನಖಾ ಬಳಿಯ ಬಾವಿಯಿಂದ ಆಗುತ್ತಿರುವ ಉಪಯೋಗ ಕಂಡು ಮತ್ತೂಂದು ಬಾವಿಗೆ ಕಾಯಕಲ್ಪ ನೀಡಲಾಗಿದೆ. ಖಾಜಾ ಬಂದಾ ನವಾಜ್‌ ದರ್ಗಾ ಸಮೀಪ ಪಾಳು ಬಿದ್ದಿದ್ದ ಪುರಾತನ ಬಾವಿಯನ್ನು ನಿಜಾಮ್‌ ಬಾಬಾ ಸ್ವಚ್ಛಗೊಳಿಸಿದ್ದಾರೆ. ಹತ್ತಾರು ಜನರ ಮೂಲಕ ಬಾವಿಯಲ್ಲಿನ ಹೂಳು, ತ್ಯಾಜ್ಯವನ್ನು ಕ್ರೇನ್‌ ಬಳಸಿ ಹೊರ ತೆಗೆಯಲಾಗಿದೆ. ಬಾವಿಯೊಳಗೆ ತುಂಬಿದ್ದ ತ್ಯಾಜ್ಯ ತೆರವುಗೊಳಿಸುತ್ತಿದ್ದಂತೆ ಜಲ ಮೂಲಗಳಿಂದ ನೀರು ಉಕ್ಕಿದೆ. ಈ ಬಾವಿ 300 ವರ್ಷಗಳಷ್ಟು ಹಳೆಯದಾಗಿದ್ದು, ಇಲ್ಲಿಯೂ ತಿಳಿ ನೀರು ಸಂಗ್ರಹವಾಗಿದೆ. ಈ ನೀರನ್ನು ಮನೆಗಳಿಗೆ ನೇರವಾಗಿ ಪೂರೈಸುವ ಉದ್ದೇಶ ಹೊಂದಲಾಗಿದೆ ಎಂದು ನಿಜಾಮ್‌ ಬಾಬಾ ತಿಳಿಸಿದ್ದಾರೆ.

ಬಂದೇ ನವಾಜ್‌ ಖಾನಖಾ ಸಮೀಪದ ಬಾವಿ 600 ವರ್ಷಗಳ ಐತಿಹಾಸಿಕ ಹಿನ್ನೆಲೆ ಹೊಂದಿದ್ದು, ಎಂದಿಗೂ ಈ ಬಾವಿ ಬತ್ತಿಲ್ಲ. ಜನರ ಕುಡಿಯವ ನೀರಿನ ಬವಣೆ ನೀಗಿಸುವ ಉದ್ದೇಶದಿಂದ ಬಾವಿ ನೀರನ್ನು ನಮ್ಮ ತಂದೆ ಸಜ್ಜಾದೆ ನಶೀನ್‌ ಅವರ ಒಪ್ಪಿಗೆ ಮೇರೆಗೆ ಉಚಿತವಾಗಿ ಪೂರೈಸಲಾಗುತ್ತಿದೆ. ನಾವೀಗ ಖಾಜಾ ಬಂದೇ ನವಾಜ್‌ ದರ್ಗಾ ಬಳಿಯ ಮತ್ತೂಂದು ಬಾವಿ ಶುಚಿಗೊಳಿಸಿದ್ದೇವೆ. ಅಲ್ಲಿಯೂ ನೀರು ಸಂಗ್ರಹವಾಗಿದೆ. ಈ ಬಾವಿ ನೀರನ್ನು ಸಾರ್ವಜನಿಕ ಉಪಯೋಗಕ್ಕೆ ಬಳಸಲಾಗುವುದು.
ನಿಜಾಮ್‌ ಬಾಬಾ, ಛೋಟಿ ದರ್ಗಾದ ಸಾಹೇಬ್‌

ರಂಗಪ್ಪ ಗಧಾರ

Advertisement

Udayavani is now on Telegram. Click here to join our channel and stay updated with the latest news.

Next