ಕಲಬುರಗಿ: ಕೋವಿಡ್-19 ಸೋಂಕಿಗೆ ಜಿಲ್ಲೆಯಲ್ಲಿ ಇಬ್ಬರು ವೃದ್ಧರು ಬಲಿಯಾಗಿದ್ದಲ್ಲದೇ, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಶುಕ್ರವಾರ ಮತ್ತೂಂದು ಹೊಸ ಪ್ರಕರಣ ಪತ್ತೆಯಾಗಿದ್ದು, ಕೊರೊನಾ ಪೀಡಿತರ ಸಂಖ್ಯೆ ಹತ್ತಕ್ಕೆ ಏರಿಕೆಯಾಗಿದೆ.
ದೆಹಲಿಯ ನಿಜಾಮುದ್ದೀನ್ ಮಸೀದಿಯಲ್ಲಿ ನಡೆದ ತಬ್ಲೀಘಿ-ಎ-ಜಮಾತ್ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡ ವ್ಯಕ್ತಿಯ ಸಂಪರ್ಕದಲ್ಲಿದ್ದ 55 ವರ್ಷದ ವ್ಯಕ್ತಿಗೆ ಸೋಂಕು ದೃಢಪಟ್ಟಿದೆ. ದೆಹಲಿಗೆ ಹೋಗಿದ್ದ ವ್ಯಕ್ತಿಗೆ ಕೊರೊನಾ ನೆಗೆಟಿವ್ ಇದೆ. ಆತನ ಸಂಪರ್ಕಕ್ಕೆ ಬಂದ ಈ ವ್ಯಕ್ತಿಯಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜನತೆ ಮತ್ತು ಜಿಲ್ಲಾಡಳಿತಕ್ಕೂ ತಲೆ ನೋವಾಗಿದೆ. ಸೋಂಕಿತ ವ್ಯಕ್ತಿ ನಗರದ ಮೋಮಿನಪುರ ನಿವಾಸಿಯಾಗಿದ್ದು, ಬಟ್ಟೆ ವ್ಯಾಪಾರ ಮಾಡುತ್ತಿದ್ದ ಎಂದು ಗೊತ್ತಾಗಿದೆ. ದೆಹಲಿ ಮಸೀದಿಗೆ ಹೋದವರ ಸಂಪರ್ಕಕ್ಕೆ ಬಂದ ನಂತರ ತನಗೆ ಜ್ವರ, ಕೆಮ್ಮು ಕಾಣಿಸಿಕೊಂಡಿತ್ತು. ಆದ್ದರಿಂದ ಸ್ವತಃ ತಾನೇ ಆಸ್ಪತ್ರೆಗೆ ತೆರಳಿ ತಪಾಸಣೆಗೆ ಒಳಗಾಗಿದ್ದ. ಸದ್ಯ ಇಎಸ್‌ಐ ಆಸ್ಪತ್ರೆಯಲ್ಲಿ ಸೋಂಕಿತ ವ್ಯಕ್ತಿ ಚಿಕಿತ್ಸೆ ಪಡೆಯುತ್ತಿದ್ದು, ಆತನ ಸಂಪರ್ಕಕ್ಕೆ ಬಂದವರನ್ನು ಪತ್ತೆ ಹಚ್ಚುವ ಕೆಲಸಕ್ಕೆ ಅಧಿಕಾರಿಗಳು ಮುಂದಾಗಿದ್ದಾರೆ.
ಜಿಲ್ಲೆಯಿಂದ ದೆಹಲಿಯ ಮಸೀದಿಗೆ ಹೋಗಿದ್ದ 26 ಜನರನ್ನು ಪತ್ತೆ ಹಚ್ಚಲಾಗಿದೆ. ಯಾರಿಗೂ ಸೋಂಕಿಲ್ಲ ಎಂದು ಪ್ರಯೋಗಾಲಯದ ವರದಿ ಬಂದಿತ್ತು. ಆದರೂ, ಶಹಾಬಾದ ಪಟ್ಟಣದ ವ್ಯಕ್ತಿಯಪತ್ನಿ ಮತ್ತು ಸೊಸೆಗೆ ಸೋಂಕು ಣಿಸಿಕೊಂಡಿದೆ. ಹೀಗಾಗಿ ದೆಹಲಿಗೆ ಹೋದವರಿಗೆ ಸೋಂಕು ಹಬ್ಬದೇ ಅವರ ಸಂಪರ್ಕಕ್ಕೆ ಬಂದವರಿಗೆ ಮಹಾಮಾರಿ ಬೆನ್ನಟ್ಟಿದ್ದು, ಎಲ್ಲೆಡೆ ಭೀತಿ ಹೆಚ್ಚಿಸಿದೆ.
ಸೀಲ್‌ಡೌನ್ ಆಗುತ್ತಾ?: ಕೊರೊನಾ ಭೀತಿಯಿಂದ ಒಂದು ತಿಂಗಳಿಂದ ಲಾಕ್‌ಡೌನ್ ಜಾರಿಯಲ್ಲಿದ್ದರೂ ಸೋಂಕು ಹರಡುವಿಕೆ ನಿರಂತರವಾಗಿದೆ. ಆರಂಭದಲ್ಲಿ ಒಂದು ವಾರ ತೀವ್ರ ಆತಂಕ ಸೃಷ್ಟಿಸಿದ್ದ ಹೆಮ್ಮಾರಿ ನಂತರ ಎರಡು ವಾರಗಳ ಕಾಲ ನಿಯಂತ್ರಣದಲ್ಲಿ ಇತ್ತು. ಮೊದಲು ಬಲಿಯಾದ ವೃದ್ಧನ ಪುತ್ರಿ ಹಾಗೂ ಆತನಿಗೆ ಚಿಕಿತ್ಸೆ ನೀಡಿ ವೈದ್ಯ ಗುಣಮುಖರಾಗಿದ್ದರೂ, ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಅದರಲ್ಲೂ ತಬ್ಲೀಘಿ ಸಂಪರ್ಕಕ್ಕೆ ಬಂದವರಲ್ಲಿ ಸೋಂಕು ಕಾಣಿಕೊಳ್ಳುತ್ತಿರುವುದು ಭೀತಿ ಅಧಿಕವಾಗಿದೆ. ಹೀಗಾಗಿ ಜನರು ಮನೆಯಿಂದ ಹೊರಗೆ ಹೋಗುವುದನ್ನು ತಡೆಯಲು ಪೊಲೀಸರು ಲೌಕ್‌ಡೌನ್ ಮತ್ತು ನಿಷೇಧಾಜ್ಞೆ ಕಠಿಣಗೊಳಿಸಿದ್ದಾರೆ.
ಸೋಂಕು ದೃಢಪಟ್ಟ ವಾರ್ಡ್‌ಗಳಾದ 2, 14 ಮತ್ತು 30ರಲ್ಲಿ ಬಿಗಿ ಕ್ರಮ ತೆಗೆದುಕೊಂಡಿದ್ದು, ವಾರ್ಡ್‌ಗಳ ಪ್ರವೇಶಕ್ಕೆ ಸಂಪೂರ್ಣ ನಿಷೇಧ ಹೇರಲಾಗಿದೆ. ದರ್ಗಾ ಪ್ರದೇಶ, ಮೋಮಿನಪುರ, ಮುಸ್ಲಿಂ ಚೌಕ್, ಖಾರಿ ಬಾವಡಿ ಸೇರಿದಂತೆ ಹಲವು ಕಡೆಗಳಲ್ಲಿ ಪ್ರಮುಖ ರಸ್ತೆಗಳನ್ನು ಪೊಲೀಸರೇ ಬಂದ್ ಮಾಡಿದ್ದಾರೆ. ಸೂಪರ್ ಮಾರ್ಕೆಟ್, ಕಿರಾಣ ಬಜಾರ್, ಜಗತ್ ವೃತ್ತದಿಂದ ದರ್ಗಾ ಕಡೆಗೆ ಹೋಗುವ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಸಂಪೂರ್ಣವಾಗಿ ಬಂದ್ ಮಾಡಲಾಗಿದೆ. ಗಲ್ಲಿ-ಗಲ್ಲಿಗಳಲ್ಲಿ ಪೊಲೀಸರು ಸಂಚರಿಸುತ್ತಿದ್ದು, ಮನೆಗಳಿಂದ ರಸ್ತೆಗೆ ಬಂದವರ ಮೇಲೆ ಲಾಠಿ ಬೀಸಿ ಚುರುಕು ಮುಟ್ಟಿಸುತ್ತಿದ್ದಾರೆ. ಆದ್ದರಿಂದ ಬೆಂಗಳೂರಿನಲ್ಲಿ ಈಗಾಗಲೇ ಎರಡು ಪ್ರದೇಶಗಳನ್ನು ಸೀಲ್ ಡೌನ್ ಮಾಡಿರುವ ಮಾದರಿಯಲ್ಲೇ ಕಲಬುರಗಿ ನಗರವನ್ನು ಸೀಲ್‌ಡೌನ್ ಮಾಡಲಾಗುತ್ತಾ ಎನ್ನುವ ಅನುಮಾನ ಸಾರ್ವಜನಿಕರಲ್ಲಿ ಮೂಡಿದೆ.