ಕಲಬುರಗಿ: ತಾಲೂಕಿನ ಇಟಗ ಗ್ರಾಮದಲ್ಲಿ ಸೋಮವಾರ ತಡರಾತ್ರಿ ಸ್ನೇಹಿತನ ಮದುವೆ ಸಮಾರಂಭದಲ್ಲಿ ರಾಮ ಮಂದಿರ ಕುರಿತ ಹಾಡು ಹಾಕಿ ಡಾನ್ಸ್ ಮಾಡಿದ್ದ ಕಾರಣಕ್ಕೆ ಮಂಗಳವಾರ ಯುವಕನೋರ್ವನ ಮೇಲೆ ಅನ್ಯಕೋಮಿನ ಕೆಲವು ಕಿಡಿಗೇಡಿಗಳು ಮಾರಣಾಂತಿಕ ಹಲ್ಲೆ ಮಾಡಿರುವ ಘಟನೆ ನಡೆದಿದೆ.
ಹಲ್ಲೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಯುವಕನನ್ನು ಇಟಗಾ ಗ್ರಾಮದ ಭೀಮಾಶಂಕರ್ ಎಂದು ಗುರುತಿಸಲಾಗಿದೆ.
ಭೀಮಾಶಂಕರ್ ಸೇರಿದಂತೆ ಇತರರು ತಮ್ಮ ಸ್ನೇಹಿತನ ಮದುವೆಯಲ್ಲಿ “ಅಗರ್ ಛುವಾ ತೋ ಮಂದಿರಕೋ, ತೇರಿ ಔಖಾತ್ ದಿಖಾ ದೇಂಗೆ” ಎನ್ನುವ ಹಾಡು ಹಾಕಿ ಡ್ಯಾನ್ಸ್ ಮಾಡಿದ್ದರು. ಈ ಹಾಡು ಒಂದು ಕೋಮಿನ ವಿರುದ್ಧ ಅನಗತ್ಯ ಕೋಮು ಭಾವನೆ ಕೆರಳಿಸುವ ಹಾಡಾಗಿದೆ ಎಂದು ಆರೋಪಿಸಿ ಅನ್ಯಕೋಮಿನ ಕೆಲವು ಯುವಕರು ಸೋಮವಾರ ಬೆಳಗ್ಗೆ ಭೀಮಾಶಂಕರನ ಮನೆಗೆ ತೆರಳಿ ಹಲ್ಲೆ ಮಾಡಿದ್ದಾರೆ ಎಂದು ಭೀಮಾಶಂಕರ್ ತಾಯಿ ನೀಡಿದ ದೂರಿನ ಆಧಾರದ ಮೇಲೆ ನಗರದ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಘಟನೆಯಿಂದಾಗಿ ಇಟಗ ಗ್ರಾಮದಲ್ಲಿ ಆತಂಕದ ವಾತಾವರಣ ಸೃಷ್ಟಿಯಾಗಿದೆ. ಅಲ್ಲದೆ ಗ್ರಾಮದಲ್ಲಿ ಯುವಕರ ತಂಡಗಳು ಗುಂಪು ಗುಂಪಾಗಿ ಈ ವಿಷಯವನ್ನು ಚರ್ಚೆ ಮಾಡುತ್ತಿದ್ದು ಗ್ರಾಮದಲ್ಲಿ ಉದ್ರಿಕ್ತ ವಾತಾವರಣ ಉಂಟಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅಲ್ಲದೆ ದೂರಿನಲ್ಲಿ ಭೀಮಾಶಂಕರ್ ತಾಯಿ ತಮ್ಮ ಕುಟುಂಬಕ್ಕೆ ಅನ್ಯ ಕೋಮಿನವರಿಂದ ಬೆದರಿಕೆ ಇದ್ದು ಭದ್ರತೆ ನೀಡುವಂತೆ ಕೋರಿದ್ದಾರೆ.
ಇದರಿಂದಾಗಿ ವಿವಾದ ಈಗ ಎರಡು ಕೋಮಿನ ಮಧ್ಯದ ಘರ್ಷಣೆಯಾಗಿ ಪರಿವರ್ತನೆಗೊಂಡಿದ್ದು, ಮುಂಜಾಗ್ರತ ಕ್ರಮವಾಗಿ ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ತಿಳಿದು ಬಂದಿದೆ.
ಹಲ್ಲೆಯನ್ನು ಖಂಡಿಸಿ ಗ್ರಾಮಸ್ಥರು ಮಂಗಳವಾರ ಎಸ್ಪಿ ಅವರಿಗೆ ಭೇಟಿ ಮಾಡಿ ಮನವಿ ಸಲ್ಲಿದ್ದಾರೆ.