Advertisement

Kalaburagi; ಖರ್ಗೆ ಸ್ಪರ್ಧಿಸುತ್ತಾರಾ? ಅಳಿಯನಿಗೆ ಟಿಕೆಟ್‌ ಕೊಡುತ್ತಾರಾ? 

11:42 PM Jan 09, 2024 | Team Udayavani |

ಕಲಬುರಗಿ: ಕಳೆದ ಸಲ ಅತ್ಯಂತರೋಚಕ ಹೋರಾಟಕ್ಕೆ ಸಾಕ್ಷಿಯಾಗಿದ್ದ ಕಲಬುರಗಿ ಲೋಕಸಭಾ ಕ್ಷೇತ್ರ ಈ ಸಲ ಸಾಕಷ್ಟು ಕುತೂಹಲಗಳನ್ನು ಮಡಿಲಲ್ಲಿ ಇಟ್ಟುಕೊಂಡಿದೆ.

Advertisement

ಸಾಮಾನ್ಯವಾಗಿ ಕಾಂಗ್ರೆಸ್ಸಿನ ಭದ್ರಕೋಟೆ ಎನಿಸಿಕೊಂಡಿ ರುವ ಈ ಕ್ಷೇತ್ರದಲ್ಲಿ ನಡೆದ ಒಟ್ಟು 19 ಚುನಾವಣೆಗಳ ಪೈಕಿ ಎರಡು ಸಲ ಬಿಜೆಪಿ ಹಾಗೂ ಒಂದು ಸಲ ಜನತಾ ಪಕ್ಷ ಬಿಟ್ಟರೆ ಉಳಿದೆಲ್ಲ ಬಾರಿ ಕಾಂಗ್ರೆಸ್ಸೇ ಗೆದ್ದಿದೆ.

ಕಳೆದ ಸಲ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸೋಲಿಸಿ ಬಿಜೆಪಿ ಹೊಸ ರಾಜಕೀಯ ತಿರುವು ನೀಡಿತ್ತು.

2019ರ ಚುನಾವಣೆ ಸಂದರ್ಭ ಕಲಬುರಗಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ 4ರಲ್ಲಿ ಕಾಂಗ್ರೆಸ್‌, 3ರಲ್ಲಿ ಬಿಜೆಪಿಹಾಗೂ ಒಂದು ಕ್ಷೇತ್ರದಲ್ಲಿ ಜೆಡಿಎಸ್‌ ಶಾಸಕರಿದ್ದರು. ಆದರೆ ಈಗ ಕಲಬುರಗಿ
ಗ್ರಾಮೀಣ-ಬಿಜೆಪಿ ಹಾಗೂ ಗುರುಮಿಠಕಲ್‌-ಜೆಡಿಎಸ್‌ ಇದ್ದರೆ ಉಳಿದ ಕ್ಷೇತ್ರಗಳಾದ ಅಫ‌ಜಲಪುರ, ಜೇವರ್ಗಿ, ಕಲಬುರಗಿ ದಕ್ಷಿಣ, ಕಲಬುರಗಿ ಉತ್ತರ, ಚಿತ್ತಾಪುರ, ಸೇಡಂನಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಈ ಬಾರಿ ಕ್ಷೇತ್ರವನ್ನು ಗೆದ್ದುಬೀಗುವ ಉತ್ಸಾಹದಲ್ಲಿದೆ.

ಈ ಸಲವೂ ಖರ್ಗೆ ಸುತ್ತಲೇ ಸ್ಥಳೀಯ ರಾಜಕಾರಣ ಸುತ್ತುತ್ತಿದೆ. ಸತತ 9 ಸಲ ವಿಧಾನಸಭೆ ಹಾಗೂ ಎರಡು ಸಲ ಲೋಕಸಭೆಗೆ ಆಯ್ಕೆಯಾಗಿದ್ದ ಖರ್ಗೆ 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಥಮ ಬಾರಿಗೆ ಸೋಲು ಅನುಭವಿಸಿದ್ದರು. ಬಳಿಕ ರಾಜ್ಯಸಭಾ ಸದಸ್ಯ, ಅನಂತರ ವಿಪಕ್ಷ ನಾಯಕ ಹಾಗೂ ಎಐಸಿಸಿ ಅಧ್ಯಕ್ಷರಾದ ಅವರು ವಿಪಕ್ಷಗಳ ಒಕ್ಕೂಟ “ಇಂಡಿಯಾ’ದ ಪ್ರಧಾನಿ ಅಭ್ಯರ್ಥಿ ಎನ್ನುವ ಮಾತು ಕೇಳಿಬಂದಿದೆ. ಹೀಗಾಗಿ ಅವರು ಈ ಬಾರಿ ಸ್ಪರ್ಧಿಸುತ್ತಾರೋ? ಇಲ್ಲವೇ ಅವರ ಕುಟುಂಬ ಸದಸ್ಯರುಕಣಕ್ಕಿಳಿಯುತ್ತಾರೋ ಅಥವಾ ಬೇರೆಯ ವರು ಅಭ್ಯರ್ಥಿಯಾಗುತ್ತಾರೋ ಎನ್ನುವ ಕುತೂಹಲ ಇದೆ.

Advertisement

ಎಐಸಿಸಿ ಅಧ್ಯಕ್ಷರಾಗಿರುವ ಕಾರಣ ದೇಶಾದ್ಯಂತ ಚುನಾವಣೆ ಪ್ರಚಾರ ನಡೆಸಬೇಕಾದ ಹಾಗೂ ರಾಜ್ಯಸಭೆ ಸದಸ್ಯತ್ವದ ಅವಧಿ ಇನ್ನೂ ಎರಡೂವರೆ ವರ್ಷಕ್ಕೂ ಹೆಚ್ಚು ಇರುವ ಕಾರಣ ಮಲ್ಲಿಕಾರ್ಜುನ ಖರ್ಗೆ ಸ್ಪರ್ಧೆ ಅನು
ಮಾನ ಎನ್ನಲಾಗುತ್ತಿದೆ. ಮತ್ತೊಂದೆಡೆ, ಖರ್ಗೆ ಕಣಕ್ಕಿಳಿದರೆ ಗೆಲುವು ಪಕ್ಕಾ ಎಂದು ಬೆಂಬಲಿಗರು ಒತ್ತಡ ಹೇರುತ್ತಿರುವ ಕಾರಣ ಹಾಗೂ ಹೈಕಮಾಂಡ್‌ ಮಟ್ಟದಲ್ಲಿ ನಿರ್ಧಾರವಾದರೆ ಕೊನೆ ಘಳಿಗೆಯಲ್ಲಿ ಅವರು ಅಭ್ಯರ್ಥಿಯಾದರೂ ಆಶ್ಚರ್ಯಪಡಬೇಕಾಗಿಲ್ಲ ಎನ್ನಲಾಗುತ್ತಿದೆ.

ಇನ್ನು ಖರ್ಗೆ ಸ್ಪರ್ಧೆಗೆ ನಿರಾಕರಿಸಿದರೆ “ಆರ್‌ಕೆ’ ಎಂದೇ ಗುರುತಿಸಲ್ಪಡುವ ಅವರ ಅಳಿಯ ರಾಧಾಕೃಷ್ಣ ಅಭ್ಯರ್ಥಿಯಾಗಲಿದ್ದಾರೆ. ನೇರವಾಗಿ ರಾಜಕೀಯ ಕ್ಷೇತ್ರದಲ್ಲಿರದಿದ್ದರೂ ಅವರು ರಾಜಕೀಯವಾಗಿ ಎಲ್ಲ ಆಳ, ಅಗಲವನ್ನು ಕಂಡವರು. ಹೀಗಾಗಿ ಸರಳತೆ ಜತೆಗೆ ಒಮ್ಮತ ಮೂಡುತ್ತದೆ ಎಂಬುದು ಕಾಂಗ್ರೆಸ್‌ನ ಲೆಕ್ಕಾಚಾರ.

ಇನ್ನೊಂದೆಡೆ ಹೈಕಮಾಂಡ್‌ ಹೇಳಿದರೆ ಸ್ಪರ್ಧಿಸಬೇಕಾಗುತ್ತದೆ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ಹೇಳಿದ್ದಾರೆ. ಜತೆಗೆ ವಿಧಾನಸಭೆ ಚುನಾವಣೆಯಲ್ಲಿ ಚಿಂಚೋಳಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿಯಾಗಿ ಸ್ಪರ್ಧಿಸಿ ಕೇವಲ 858 ಮತಗಳ ಅಂತರದಿಂದ ಸೋತಿರುವ ಸುಭಾಷ ರಾಠೊಡ್‌ ಹೆಸರೂ ಕೇಳಿಬರುತ್ತಿದೆ.
ಈ ನಡುವೆ ಈ ಹಿಂದೆ ಕಾಂಗ್ರೆಸ್‌ನಲ್ಲಿದ್ದು, ಬಳಿಕ ಬಿಜೆಪಿ ಸೇರಿ ಖರ್ಗೆ ಮಣಿಸಿದ್ದ ಸಂಸದ ಡಾ|ಉಮೇಶ ಜಾಧವ್‌ ಅವರೇ ಚುನಾವಣೆ ಹೊತ್ತಿಗೆ ಕಾಂಗ್ರೆಸ್‌ ಸೇರಿ ಅದರ ಅಭ್ಯರ್ಥಿಯಾಗುತ್ತಾರೆ ಎನ್ನುವ ಮಾತುಗಳು ಕೇಳಿಬಂದಿದ್ದರೂ, ಜಾಧವ್‌ ಇದನ್ನು ನಿರಾಕರಿಸಿದ್ದಾರೆ. ತಾವೇ ಬಿಜೆಪಿ ಅಭ್ಯರ್ಥಿ ಎಂದು ಪುನರುಚ್ಚರಿಸಿದ್ದಾರೆ.

ಬಿಜೆಪಿಯಿಂದ ಯಾರು?
ಬಿಜೆಪಿಯಲ್ಲಿ ಹಾಲಿ ಸಂಸದ ಡಾ| ಉಮೇಶ ಜಾಧವ್‌ ಅವರೇ ಅಭ್ಯರ್ಥಿ ಎಂಬುದು ಖಚಿತವಾಗಿಲ್ಲ. ಮತ್ತೂಂದೆಡೆ ಅವಕಾಶ ನೀಡಿದರೆ ಸ್ಪರ್ಧೆಗೆ ಸಿದ್ಧ ಎಂದು ಕಲಬುರಗಿ ಗ್ರಾಮೀಣ ಕ್ಷೇತ್ರದ ಶಾಸಕ ಬಸವರಾಜ ಮತ್ತಿಮಡು ವರಿಷ್ಠರಿಗೆ ತಿಳಿಸಿದ್ದಾರೆ ಎನ್ನಲಾಗಿದೆ. ಹೀಗಾಗಿ ಇಬ್ಬರಲ್ಲಿ ಅಭ್ಯರ್ಥಿ ಯಾರಾದರೆ ಸೂಕ್ತ ಎನ್ನುವ ಚರ್ಚೆ ಪಕ್ಷದಲ್ಲಿ ನಡೆದಿದೆ. ಕೆಲವು ದಿನಗಳ ಹಿಂದೆಯಷ್ಟೇ “ಚುನಾವಣೆ ಸಂಘರ್ಷಕ್ಕೂ ಸಿದ್ಧ-ಕುಸ್ತಿಗೂ ಸಿದ್ಧ’ ಎಂದು ಘೋಷಿಸಿದ್ದ ಸಂಸದ ಡಾ| ಜಾಧವ್‌ ಈಗಾಗಲೇ ಕ್ಷೇತ್ರದಲ್ಲಿ ಮಿಂಚಿನ ಸಂಚಾರ ನಡೆಸುತ್ತಿದ್ದಾರೆ.

ಬಿಜೆಪಿ ಎಸ್ಸಿ ಮೋರ್ಚಾ ಉಪಾಧ್ಯಕ್ಷ ಅಂಬಾರಾಯ ಅಷ್ಠಗಿ ಸಹಿತ ಇತರರು ಸಹ ಟಿಕೆಟ್‌ ಆಕಾಂಕ್ಷಿಗಳಾಗಿದ್ದಾರೆ. ಇಲ್ಲಿ “ಬಿಜೆಪಿಯ ದೋಸ್ತಿ’ ಜೆಡಿಎಸ್‌ ಬಲ ಅಷ್ಟಕಷ್ಟೇ. ಹೀಗಾಗಿ ಅದು ಈ ಕ್ಷೇತ್ರಕ್ಕೆ ಬೇಡಿಕೆ ಮಂಡಿಸುವ
ಸಾಧ್ಯತೆ ಇಲ್ಲ.

ಡಾ| ಉಮೇಶ ಜಾಧವ್‌
(ಹಾಲಿ ಸಂಸದ)

ಕಾಂಗ್ರೆಸ್‌ ಸಂಭಾವ್ಯರು
-ಡಾ| ಮಲ್ಲಿಕಾರ್ಜುನ ಖರ್ಗೆ
-ರಾಧಾಕೃಷ್ಣ (ಆರ್‌ಕೆ)
-ಸುಭಾಷ ರಾಠೊಡ್‌

ಬಿಜೆಪಿ ಸಂಭಾವ್ಯರು
-ಡಾ| ಉಮೇಶ ಜಾಧವ್‌
-ಬಸವರಾಜ ಮತ್ತಿಮಡು

– ಹಣಮಂತರಾವ ಭೈರಾಮಡಗಿ

Advertisement

Udayavani is now on Telegram. Click here to join our channel and stay updated with the latest news.

Next