ಕಲಬುರಗಿ: ದೇಶವಲ್ಲದೇ ಇಡೀ ವಿಶ್ವವನ್ನೇ ಕಾಡುತ್ತಿರುವ ಕೋವಿಡ್ ಹೊಡೆದೊಡಿಸುವಲ್ಲಿ ಎಲ್ಲರ ಪಾತ್ರ ಬಹು ಮುಖ್ಯವಾಗಿದ್ದು, ಇಲ್ಲಿನ ಪ್ರಖ್ಯಾತ ಯುನೈಟೆಡ್ ಆಸ್ಪತ್ರೆಯಲ್ಲಿ ಭಾರತೀಯ
ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಅನುಮೋದಿತ ಕೋವಿಡ್ -19 ಪರೀಕ್ಷಾ ಕೇಂದ್ರ ಆರಂಭವಾಗಿದೆ.
ಯುನೈಟೆಡ್ ಆಸ್ಪತ್ರೆಯಲ್ಲಿ ಏ. 30ರಿಂದ ಆಸ್ಪತ್ರೆಗೆ ದಾಖಲಾಗುವ ಎಲ್ಲ ರೋಗಿಗಳಿಗೆ ಕಡ್ಡಾಯವಾಗಿ ಕೋವಿಡ್-19 ಕ್ಷೀಪ್ರ ಪರೀಕ್ಷೆಯನ್ನು ಪ್ರಾರಂಭಿಸಲಾಗಿದೆ ಎಂದು ಆಸ್ಪತ್ರೆಯ ಅಧ್ಯಕ್ಷ ಡಾ| ವಿಕ್ರಮ್ ಸಿದ್ಧಾರೆಡ್ಡಿ ತಿಳಿಸಿದ್ದಾರೆ. ಕೋವಿಡ್-19 ಭಯಾನಕ ರೋಗ ವೇಗವಾಗಿ ಹಬ್ಬುತ್ತಿರುವುದನ್ನು ತಪ್ಪಿಸಲು ಆಸ್ಪತ್ರೆಗೆ ದಾಖಲಾಗುವ ರೋಗಿಗಳ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳುವ ಮಹತ್ವದ ಕಾರ್ಯ ಅರಿತು ಪರೀಕ್ಷಾ ಕೇಂದ್ರ ಆರಂಭಿಸಲಾಗಿದೆ. ಈ ಭಾಗದಲ್ಲಿ ಕೋವಿಡ್-19 ವೇಗ ಪರೀಕ್ಷೆಯ ಕೇಂದ್ರ ಆರಂಭಿಸಲಾದ ಮೊದಲ ಆಸ್ಪತ್ರೆ ತಮ್ಮದಾಗಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ವಿವರಣೆ ನೀಡಿದ್ದಾರೆ.
ಪರೀಕ್ಷಾ ಕೇಂದ್ರಕ್ಕೆ ಕೀಟ್‌ಗಳನ್ನು ದಕ್ಷಿಣ ಕೋರಿಯಾದಿಂದ ತರಿಸಿಕೊಳ್ಳಲಾಗಿದ್ದು, ಬಳಕೆಗೆ ಭಾರತೀಯ ವೈದ್ಯಕೀಯ ಸಂಶೋಧನಾದ ಮಂಡಳಿ ಅನುಮೋದನೆ ನೀಡಿದೆ. ನೆರೆಯ ಆಂಧ್ರಪ್ರದೇಶ ಸರ್ಕಾರ ಹಾಗೂ ಅಮೇರಿಕಾ ಸಂಯುಕ್ತ ಸರ್ಕಾರಗಳು ಜನಸಮೂಹ ತಪಾಸಣೆಗಾಗಿ ಇದೇ ಕಿಟ್‌ಗಳನ್ನು ವ್ಯಾಪಕವಾಗಿ ಬಳಸುತ್ತಿವೆ. ಇದು ಕೇವಲ ತಪಾಸಣಾ ಪರೀಕ್ಷಾ ಕೇಂದ್ರವಾಗಿದ್ದು, ಇದರಲ್ಲಿ ಪಾಸಿಟಿವ್ ಬಂದರೆ ಅದನ್ನು ಸರ್ಕಾರವೇ ತನ್ನ ಅಧೀನ ಆರೋಗ್ಯ ಸಂಸ್ಥೆಗಳ ಮೂಲಕ ಆರ್‌ಟಿ-ಪಿಸಿಆರ್ ಪರೀಕ್ಷೆ ನಡೆಸಿ ದೃಢಪಡಿಸುತ್ತದೆ. ಯುನೈಟೆಡ್ ಆಸ್ಪತ್ರೆಯು ರೋಗಿಗಳ ಸುರಕ್ಷತೆ ವಿಷಯದಲ್ಲಿ ಅತ್ಯುನ್ನತ ಮಾದರಿಗಳನ್ನು ಯಾವಾಗಲು ಅನುಸರಿಸುತ್ತಾ ಬಂದಿದ್ದು, ಅದೇ ಬದ್ಧತೆ ಮುಂದುವರೆದ ಭಾಗವಾಗಿ ಈಗ ಕೋವಿಡ್-19 ಪರೀಕ್ಷಾ ಕೇಂದ್ರ ಆರಂಭಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಡಾ| ವಿಕ್ರಮ್ ಸಿದ್ಧಾರೆಡ್ಡಿ ತಿಳಿಸಿದ್ದಾರೆ.