Advertisement

ಹೇಮರಡ್ಡಿ ಮಲ್ಲಮ್ಮ ಸರ್ವರಿಗೂ ದಾರಿದೀಪ

11:43 AM Mar 16, 2020 | |

ಕಲಬುರಗಿ: ಹೇಮರಡ್ಡಿ ಮಲ್ಲಮ್ಮ ಅವರ ಇಡೀ ಜೀವನವೇ ಉತ್ತಮ ಸಂದೇಶವಾಗಿದೆ. ಬದುಕಿನುದ್ದಕ್ಕೂ ಅನೇಕ ಸವಾಲುಗಳನ್ನು ಎದುರಿಸಿ ಮಾದರಿಯಾಗಿರುವ ಶರಣೆ ಹೇಮರಡ್ಡಿ ಮಲ್ಲಮ್ಮ ತಾಯಿಯವರು ಎಲ್ಲರಿಗೂ ದಾರಿದೀಪವಾಗಿದ್ದಾರೆ ಎಂದು ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.

Advertisement

ತಾಲೂಕಿನ ಕುಮಸಿವಾಡಿ ಗ್ರಾಮದ ಸಿದ್ಧಬಸವೇಶ್ವರರ 24ನೇ ಜಾತ್ರಾ ಮಹೋತ್ಸವ ನಿಮಿತ್ತ ನಡೆದ ಹೇಮರಡ್ಡಿ ಮಲ್ಲಮ್ಮ ತಾಯಿ ಮಹಾ ಪುರಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಇಂದಿನ ಆಧುನಿಕತೆ ಅಬ್ಬರದ ನಡುವೆ ಗ್ರಾಮೀಣ ಪ್ರದೇಶಗಳಲ್ಲಿ ನಡೆಯುವ ಜಾತ್ರೆ ಸೇರಿದಂತೆ ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಸಂತಸ ವೃದ್ಧಿಸಿ, ಸಂಸ್ಕೃತಿ ಉಳಿಸುವಲ್ಲಿ ಸಹಕಾರಿಯಾಗುತ್ತವೆ ಎಂದರು.

ಬಿಜೆಪಿ ಯುವ ಮುಖಂಡ ವೀರೇಶ ಬಿರಾದಾರ ಉಪಳಾಂವ ಮಾತನಾಡಿ, ಪ್ರಸ್ತುತ ದಿನಮಾನಗಳಲ್ಲಿ ಅಪಾರ ಸಂಖ್ಯೆಯಲ್ಲಿ ಯುವಕರು ನಾನಾ ರೀತಿಯ ದುಶ್ಚಟಗಳಿಗೆ ಮಾರು ಹೋಗಿ ತಮ್ಮ ಅಮೂಲ್ಯ ಜೀವನವನ್ನು ನಾಶಪಡಿಸಿಕೊಳ್ಳುತ್ತಿದ್ದು, ಅಂಥ ಯುವಕರಿಗೆ ತಿಳಿವಳಿಕೆ ನೀಡುವ ಮೂಲಕ ಅವರನ್ನು ಮತ್ತೆ ಸರಿದಾರಿಗೆ ಕರೆತರುವ ಅಗತ್ಯವಿದೆ. ಒಳ್ಳೆಯ ಮಾರ್ಗದಲ್ಲಿ ಮುನ್ನಡೆದರೆ ಜೀವನ ಅರ್ಥಪೂರ್ಣ ಎನಿಸಲಿದೆ. ಗಳಿಸಿದ್ದನ್ನು ಹಿತಮಿತವಾಗಿ ಬಳಸಿಕೊಂಡು ಪರೋಪಕಾರಿಯಾಗಿ ಸಂತೋಷ,
ನೆಮ್ಮದಿಯ ಜೀವನ ನಡೆಸಲು ಮುಂದಾಗಬೇಕಿದೆ ಎಂದರು.

ಮಕ್ತಂಪುರದ ಗುರುಬಸವ ಮಠದ ಶಿವಾನಂದ ಸ್ವಾಮೀಜಿ ಮಾತನಾಡಿ, ಚಂಚಲ ಮನಸ್ಸಿನ ಮೇಲೆ ಹತೋಟಿ ಸಾಧಿಸಿ ಧರ್ಮ ಮಾರ್ಗದಲ್ಲಿ ಮುನ್ನಡೆಯುವ ಮೂಲಕ ಸಚ್ಚಾರಿತ್ರ್ಯದ ಜೀವನ ಸಾಗಿಸುವಲ್ಲಿ ಪ್ರತಿಯೊಬ್ಬರೂ ಮುಂದಾಗಬೇಕಿದೆ. ತಾಯಿಯಾದವಳು ಮಕ್ಕಳಿಗೆ ಉತ್ತಮ ಸಂಸ್ಕೃತಿ, ಸಂಸ್ಕಾರ ನೀಡುವಲ್ಲಿ ಕಾಳಜಿ ನೀಡಬೇಕಿದೆ. ಇತ್ತೀಚಿನ ದಿನಗಳಲ್ಲಿ ಮಕ್ಕಳು ಪಾಶ್ಚಿಮಾತ್ಯ ಸಂಸ್ಕೃತಿಯತ್ತ ಹೆಚ್ಚಾಗಿ ವಾಲುತ್ತಿರುವುದು ದೇಶದ ಸಂಸ್ಕೃತಿ ನಾಶವಾಗಲು ಕಾರಣವಾಗುತ್ತಿದೆ ಎಂದು ಹೇಳಿದರು.

ಕುಮಸಿವಾಡಿ ಸಿದ್ಧಶರಣಗಿರಿ ವಿರಕ್ತ ಮಠದ ಬಾಲ ಶಿವಯೋಗಿ ಚನ್ನವೀರ ಸ್ವಾಮೀಜಿ ಸಮಾರಂಭದ ನೇತೃತ್ವ ವಹಿಸಿದ್ದರು. ಸಂತೋಷ ಪಾಟೀಲ ಹರಸೂರ, ಶಫೀಕ್‌ ಪಾಶುಮಿಯಾ, ಮಹಾದೇವ ಬಡಾ, ಹಣಮಂತರಾಯ ಅಟ್ಟೂರ, ಮಲ್ಲಿನಾಥ ಎ. ರಾಜೇಶ್ವರ ಕುಮಸಿ, ಪ್ರವಚನಕಾರ ಶಿವಕುಮಾರ ಶಾಸ್ತ್ರಿಗಳು ಹಿರೇಮಠ ಧುತ್ತರಗಾಂವ, ಸಂಗೀತ ಕಲಾವಿದರಾದ ಸಿದ್ಧರಾಮ ಯಡ್ರಾಮಿ ನೆಲೋಗಿ, ರವಿಕುಮಾರ ವಿಭೂತಿ ಮೊರಟಗಿ, ರಾಜು ಹೆಬ್ಟಾಳ, ಮಹೇಶ ತೆಲಾಕುಣಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಭಾಗವಹಿಸಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next