ಕಲಬುರಗಿ: ಜಿಲ್ಲೆಯಲ್ಲಿ ದಿನದಿಂದ ಕೋವಿಡ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು, ಶಂಕಿತರ ಮೇಲೆ ನಿಗಾ ವಹಿಸಲು ಜಿಲ್ಲಾಡಳಿತ ಪ್ರತ್ಯೇಕ ವ್ಯವಸ್ಥೆ ಮಾಡುತ್ತಿದೆ. ರವಿವಾರ ರಜೆ ದಿನವೂ ಅಧಿಕಾರಿಗಳು ಸಿದ್ಧತಾ ಕಾರ್ಯದಲ್ಲಿ ತೊಡಗಿಕೊಂಡಿದ್ದರು.
ಜಗತ್ತನ್ನೇ ತಲ್ಲಣಗೊಳಿಸಿರುವ ಕೋವಿಡ್ ಹೆಮ್ಮಾರಿ ರಣಕೇಕೆ ಜಿಲ್ಲೆಯಲ್ಲಿ ಮುಂದುವರಿದಿದೆ. ದೇಶದಲ್ಲೇ ಮೊದಲು ಬಿಸಿಲೂರಿನ ವೃದ್ಧನನ್ನು ಬಲಿ ಪಡೆದು ಜನತೆಯ ನೆಮ್ಮದಿ ಕಿತ್ತುಕೊಂಡಿದೆ. ಸೋಂಕು ನಿಯಂತ್ರಣಕ್ಕೆ ಜಿಲ್ಲಾಡಳಿತದ ಗಂಭೀರ ಪ್ರಯತ್ನ ನಡುವೆಯೂ ಕೋವಿಡ್ ತನ್ನ ಕಬಂಧಬಾಹು ವಿಸ್ತರಿಸಿಕೊಳ್ಳುತ್ತಲೇ ಇದೆ. ಆರಂಭದಲ್ಲಿ ಕಲಬುರಗಿ ನಗರ ಪ್ರದೇಶಕ್ಕೆ ಸೀಮಿತವಾಗಿದ್ದ ಕೊರೊನಾ ಸೋಂಕು ಇದೀಗ ಜಿಲ್ಲೆಯ ಶಹಾಬಾದ, ವಾಡಿ ಪಟ್ಟಣಕ್ಕೂ ವ್ಯಾಪಿಸಿದೆ. ಮೇಲಾಗಿ ವಾಡಿ ಪಟ್ಟಣದಲ್ಲಿ ಅಲೆಮಾರಿ ಕುಟುಂಬದಲ್ಲಿ 2 ವರ್ಷದ ಮಗುವಿಗೆ ಮಹಾಮಾರಿ ರೋಗ ಕಾಣಿಸಿಕೊಂಡಿದ್ದು ಆತಂಕ ಹೆಚ್ಚಿಸಿದೆ. ಹೀಗಾಗಿ ಸೋಂಕು ನಿಯಂತ್ರಿಸಲು ಜಿಲ್ಲಾಡಳಿತದ ಅಧಿಕಾರಿಗಳು ಮತ್ತಷ್ಟು ಶ್ರಮಿಸುತ್ತಿದ್ದಾರೆ.
ಕ್ವಾರಂಟೈನ್‌ಗೂ ವ್ಯವಸ್ಥೆ: ಕೊರೊನಾ ಸೋಂಕಿತರು ಹಾಗೂ ಶಂಕಿತರಿಗೆ ಚಿಕಿತ್ಸೆಗೆಂದು ಜಿಮ್ಸ್ ಮತ್ತು ಇಎಸ್‌ಐ ಆಸ್ಪತ್ರೆ ಮೀಸಲಿರಿಸಲಾಗಿದೆ. ಇಎಸ್‌ಐ ಆಸ್ಪತ್ರೆಯಲ್ಲಿ 360 ಐಸೋಲೇಷನ್ ಬೆಡ್, ಜಿಮ್ಸ್ ಆಸ್ಪತ್ರೆಯಲ್ಲಿ 330 ಐಸೋಲೇಷನ್ ಬೆಡ್‌ಗಳನ್ನು ಸಿದ್ಧಪಡಿಸಲಾಗಿದೆ. ಅಲ್ಲದೇ, ಪರ್ಯಾಯವಾಗಿ ಸೂಪರ್‌ವೈಸ್ಡ್ ಐಸೋಲೇಷನ್ ಸೆಂಟರ್ ಸ್ಥಾಪನೆಗೂ ಕ್ರಮ ಕೈಗೊಳ್ಳಲಾಗಿದೆ. ಇದಕ್ಕಾಗಿ ಹಿಂದುಳಿದ ವರ್ಗ, ಸಮಾಜ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತ ಇಲಾಖೆ ಮತ್ತು ಎಸ್‌ಸಿ/ಎಸ್‌ಟಿ ಸೇರಿದಂತೆ 21 ಹಾಸ್ಟೆಲ್‌ಗಳನ್ನು ಗುರುತಿಸಲಾಗಿದೆ. ಅಲ್ಲಿ ವ್ಯವಸ್ಥೆ ಮಾಡಲು ಏಳು ಜನರ ಅಧಿಕಾರಿಗಳ ತಂಡ ರಚಿಸಲಾಗಿದೆ. ಇದೀಗ ಮುನ್ನೆಚ್ಚರಿಕೆ ಕ್ರಮವಾಗಿ ಶಂಕಿತರನ್ನು 14 ದಿನ, 28 ದಿನಗಳ ಕಾಲ ಕ್ವಾರಂಟೈನ್ ಮಾಡಲು ಜಿಲ್ಲಾಡಳಿತ ವ್ಯವಸ್ಥೆ ಮಾಡಿಕೊಳ್ಳುತ್ತಿದೆ.
ಎಲ್ಲಿ ಕ್ವಾರಂಟೈನ್ ಸೆಂಟರ್?: ನಗರದ ಮೂರು ಕಡೆಗಳಲ್ಲಿ ಕ್ವಾರಂಟೈನ್‌ಗೆ ವ್ಯವಸ್ಥೆ ಮಾಡಲಾಗುತ್ತಿದೆ. ಬುದ್ಧ ವಿಹಾರ ಸಮೀಪದ ಪಾಲಿ ಹೌಸ್, ಹಳೆ ಜೇವರ್ಗಿ ರಸ್ತೆಯ ಲೋಕೋಪಯೋಗಿ ಇಲಾಖೆ ವಸತಿ ಗೃಹ ಹಾಗೂ ಯುನಾನಿ ಆಸ್ಪತ್ರೆಯನ್ನು ಕ್ವಾರಂಟೈನ್ ಸೆಂಟರ್ ಮಾಡಲಾಗಿದೆ. ಈ ಮೂರು ಕಡೆಗಳಲ್ಲಿ 300 ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕಳೆದ ಎರಡ್ಮೂರು ದಿನಗಳಿಂದ ಕ್ವಾರಂಟೈನ್ ಬೆಡ್‌ಗಳ ವ್ಯವಸ್ಥೆಯಲ್ಲಿ ಅಧಿಕಾರಿಗಳು ತೊಡಗಿದ್ದಾರೆ. ಯುನಾನಿ ಆಸ್ಪತ್ರೆಯು 50 ಬೆಡ್‌ಗಳ ಸಾಮರ್ಥ್ಯ ಹೊಂದಿದ್ದು, ಸ್ವತಃ ಜಿಲ್ಲಾಧಿಕಾರಿ ಶರತ್ ಬಿ. ನೇತೃತ್ವದಲ್ಲಿ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಈಗಾಗಲೇ ಅಲ್ಲಿ 34 ಬೆಡ್‌ಗಳನ್ನು ಸಿದ್ಧಪಡಿಸಲಾಗಿದೆ. ಪಾಲಿ ಹೌಸ್‌ಗೆ ಹಿಂದುಳಿದ ವರ್ಗ ಹಾಸ್ಟೆಲ್‌ಗಳಿಂದ 100 ಬೆಡ್‌ಗಳನ್ನು ಸಾಗಿಸಲಾಗಿದೆ. ಇಲ್ಲಿ ಎಲ್ಲ ಸಿದ್ಧತೆ ಪೂರ್ಣಗೊಂಡಿದ್ದು, ರವಿವಾರ ಸಮಿತಿಯ ಸಹಾಯಕ ಆಯುಕ್ತ ರಾಮಚಂದ್ರ ಗಡದೆ, ಜಿಲ್ಲಾ ಹಿಂದುಳಿದ ವರ್ಗಗಳ ಇಲಾಖೆ ಅಧಿಕಾರಿ ರಮೇಶ ಸಂಗಾ, ತಾಲೂಕಾಧಿಕಾರಿ ಸಂತೋಷ ರೆಡ್ಡಿ ಪರಿಶೀಲನೆ ನಡೆಸಿದರು. ಇತ್ತ, ಲೋಕೋಪಯೋಗಿ ಇಲಾಖೆ ವಸತಿ ಗೃಹದಲ್ಲಿ ಬಿಎಸಿಂ ಸಿಬ್ಬಂದಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿದ್ದರು.