ಕಲಬುರಗಿ: ಇಲ್ಲಿನ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಆಯುಕ್ತ ದಯಾನಂದ ಪಾಟೀಲ್ ವರ್ಗಾವಣೆಗೆ ಕೆಎಟಿ ಮತ್ತೆ ತಡೆಯಾಜ್ಞೆ ನೀಡಿದೆ.
ಕಳೆದ ಜುಲೈ ತಿಂಗಳಲ್ಲಿ ವರ್ಗಾವಣೆ ಹಾಗೂ ಅಕ್ಟೋಬರ್ ದಲ್ಲಿ ಅಮಾನತ್ತು ಮಾಡಿದ್ದಾಗಲೂ ಕೆಇಟಿಗೆ ಮೊರೆ ಹೋಗಿದ್ದಾಗ ತಡೆಯಾಜ್ಞೆ ನೀಡಲಾಗಿತ್ತು. ಎರಡು ಸಲ ವರ್ಗಾವಣೆ ಹಾಗೂ ಒಂದು ಸಲ ಅಮಾನತ್ತು ಸೇರಿ ಒಟ್ಟಾರೆ ಮೂರು ಸಲವೂ ಸರ್ಕಾರದ ಕ್ರಮದ ವಿರುದ್ದ ತಡೆಯಾಜ್ಞೆ ನೀಡಿದಂತಾಗಿದೆ. ಹೀಗೆ ಮೂರು ಸಲ ಕೆಎಟಿ ತಡೆಯಾಜ್ಞೆ ನೀಡಿದ್ದರಿಂದ ಈ ಪ್ರಕರಣ ರಾಜ್ಯದ ಗಮನ ಸೆಳೆಯುವಂತಾಗಿದೆ.
ಸರ್ಕಾರಿ ನೌಕರರ ನಿಯಾಮವಳಿ ಪ್ರಕಾರ ನಿವೃತ್ತಿಯ ಆರು ತಿಂಗಳು ಮುಂಚೆ ವರ್ಗಾವಣೆ ಮಾಡಬಾರದು ಎಂಬುದಿದ್ದರೂ ಇಲ್ಲಿ ವರ್ಗಾವಣೆ ಮಾಡಿರುವುದು ನಿಜಕ್ಕೂ ಆತ್ಮಾವಲೋಕನಕ್ಕೆ ಎಡೆ ಮಾಡಿ ಕೊಟ್ಟಿದೆ.
ಪ್ರಮುಖವಾಗಿ ಮೊದಲ ಸಲ ವರ್ಗಾವಣೆಗೆ ತಡೆಯಾಜ್ಞೆ ನೀಡಲಾಗಿದ್ದರೂ ಮತ್ತೆ ಅಕ್ಟೋಬರ್ ತಿಂಗಳಲ್ಲಿ ವಿನಾಕಾರಣ ಹಿಂದಿನ ಪ್ರಕರಣ ಉಲ್ಲೇಖಿಸಿ ಅಮಾನತ್ತುಗೊಳಿಸಲಾಗಿತ್ತು. ಆಗಲೂ ಸಹ ಕೆಎಟಿ ಮೊರೆ ಹೋಗಿ ತಡೆಯಾಜ್ಞೆ ತರಲಾಗಿತ್ತು. ತದನಂತರ ಅಖಿಲ ಭಾರತ ವೀರಶೈವ- ಲಿಂಗಾಯತ ಮಹಾಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ವೀರಶೈವ- ಲಿಂಗಾಯತ ಅಧಿಕಾರಿಗಳನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಸೂಕ್ತ ಸ್ಥಳ ಕೊಡುತ್ತಿಲ್ಲ ಎಂದು ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು. ಇದಾದ ನಂತರ ಕಲಬುರಗಿ ಆಯುಕ್ತ ದಯಾನಂದ ಪಾಟೀಲ್ ವರ್ಗಾವಣೆ ಪ್ರಹಸನ ಕೆಲ ಕಾಲ ತೆರೆ ಹಿಂದೆ ಸರಿದಿತ್ತು.
ಆದರೆ ಕಳೆದೆರಡು ದಿನಗಳ ಹಿಂದೆ ಅಂದರೆ ಫೆ.9 ರಂದು ದಯಾನಂದ ಪಾಟೀಲ್ ಅವರನ್ನು ರಾಜ್ಯ ಸರ್ಕಾರ ಕುಡಾ ಆಯುಕ್ತರ ಹುದ್ದೆಯಿಂದ ವರ್ಗಾವಣೆಗೊಳಿಸಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (ಕೆಕೆಆರ್ ಡಿಬಿ) ಮಂಡಳಿಯ ಅಧೀನ ಕಾರ್ಯದರ್ಶಿ ಹುದ್ದೆಗೆ ನಿಯೋಜಿಸಲಾಗಿತ್ತು. ಕುಡಾ ಆಯುಕ್ತರ ಹುದ್ದೆಗೆ ದಯಾನಂದ ಬದಲು ಗಂಗಾಧರ ಶಿವಾನಂದ ಮಾಳಗೆ ಅವರನ್ನು ವರ್ಗಾವಣೆಗೊಳಿಸಲಾಗಿದ್ದರಿಂದ ಮಂಗಳವಾರ ಫೆ.13 ರಂದು ಬೆಳಿಗ್ಗೆ 10 ಕ್ಕೆ ಕುಡಾ ಆಯುಕ್ತರಾಗಿ ಕಾರ್ಯಭಾರ ವಹಿಸಿಕೊಂಡಿದ್ದಾರೆ.
ಆದರೆ ಇದೀಗ ದಯಾನಂದ ಪಾಟೀಲ್ ಅವರ ವರ್ಗಾವಣೆಗೆ ಕೆಎಟಿ ತಡೆಯಾಜ್ಞೆ ನೀಡಿದ್ದರಿಂದ ಮತ್ತೆ ಕುಡಾ ಆಯುಕ್ತರಾಗಿ ಕಾರ್ಯಭಾರ ವಹಿಸಲು ಮುಂದಾಗಿರುವುದರಿಂದ ಸಂಘರ್ಷವೇ ಏರ್ಪಟ್ಟಿದಂತಾಗಿದೆ.
ವರ್ಷದಿಂದ ನಡೆಯದ ಕುಡಾ ಸಭೆ: ಆಯುಕ್ತರ ವರ್ಗಾವಣೆ ಸಂಘರ್ಷ ಹಿನ್ನೆಲೆಯಲ್ಲಿ ಕಳೆದೊಂದು ವರ್ಷದಿಂದ ಕುಡಾ ಸಭೆಯೇ ನಡೆದಿಲ್ಲ. ಸಭೆ ನಡೆಯದ ಹಿನ್ನೆಲೆಯಲ್ಲಿ ಮಹಾನಗರದ ಅಭಿವೃದ್ಧಿಗೆ ಹಿನ್ನೆಡೆಯಾಗಿದೆ ಎಂದೇ ವಿಶ್ಲೇಷಿಸಲಾಗುತ್ತಿದೆ.
ಕಳೆದೆರಡು ದಿನಗಳ ಹಿಂದೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಕುಡಾದಲ್ಲಿನ ಅಧಿಕಾರಿಗಳ ವರ್ಗಾವಣೆ ನಂತರವೇ ಕುಡಾ ಸಭೆ ನಡೆಯುವುದು ಎಂಬುದಾಗಿ ಹೇಳಿದ್ದರು. ಕುಡಾದಲ್ಲಿ ಕೆಲವು ಅಕ್ರಮ ನಡೆದಿರುವ ಹಿನ್ನೆಲೆಯಲ್ಲಿ ಸಭೆ ನಡೆಯಲಿಲ್ಲ ಎಂಬುವುದಾಗಿ ಪ್ರತಿಕ್ರಿಯೆ ನೀಡಿದ್ದರು. ಒಟ್ಟಾರೆ ಈ ಪ್ರಹಸನವು ಸಮಾಜದಲ್ಲಿ ಹಾಗೂ ರಾಜಕೀಯ ಕ್ಷೇತ್ರದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.