ಕಲಬುರಗಿ: ಕಳೆದ ಮೂರು ದಿನಗಳಿಂದ ಕೊರೊನಾ ಸೋಂಕು ಭೀತಿ ಮತ್ತಷ್ಟು ಹೆಚ್ಚಾಗಿರುವುದರಿಂದ ಜಿಲ್ಲಾದ್ಯಂತ ಲಾಕ್‌ಡೌನ್ ಮತ್ತು ನಿಷೇಧಾಜ್ಞೆ ಆದೇಶವನ್ನು ಪೊಲೀಸರು ಬಿಗಿಗೊಳಿಸಿದ್ದು, ಜನರು ಸ್ವಯಂಪ್ರೇರಿತವಾಗಿ ಎಚ್ಚೆತ್ತುಕೊಂಡಿದ್ದಾರೆ. ಮಹಾಮಾರಿ ಕೊರೊನಾ ಸೋಂಕು ಇಬ್ಬರನ್ನು ಬಲಿ ಪಡೆದಿದ್ದು, ಐವರು ಸೋಂಕಿತರು ಇಎಸ್‌ಐ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮತ್ತಿಬ್ಬರು ಕೊರೊನಾ ಪೀಡಿತರು ಗುಣಮುಖರಾಗಿ ಮನೆಗೆ ಮರಳಿದ್ದರೂ ಜಿಲ್ಲಾಡಳಿತ ನಿಗಾವಣೆಯಲ್ಲಿ ಇದ್ದಾರೆ. 20 ಜನ ಕೊರೊನಾ ಶಂಕಿತರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಬುಧವಾರ ಎರಡನೇ ಸಾವು ಖಚಿತವಾಗುತ್ತಿದ್ದಂತೆ ಜನರು ಹೈ-ಅಲರ್ಟ್ ಆಗಿದ್ದು, ಗುರುವಾರ ಕೆಲ ಬಡಾವಣೆಗಳಲ್ಲಿ ತಾವೇ ರಸ್ತೆ ಬಂದ್ ಮಾಡಿದ್ದಾರೆ. ಗಂಗಾನಗರ, ಉದಯ ನಗರ, ಸಂತೋಷ ಕಾಲೋನಿ, ಮಕ್ತಂಪುರ ಬಡಾವಣೆ, ಬಸವೇಶ್ವರ ಕಾಲೋನಿ ಮತ್ತಿತರ ಕಡೆಗಳಲ್ಲಿ ಸ್ಥಳೀಯ ನಾಗರಿಕರು ಬೇರೆ ಪ್ರದೇಶದ ಜನರು ಪ್ರವೇಶದಂತೆ ಹಾಗೂ ಅಲ್ಲಿದ್ದ ಜನರೂ ಹೊರ ಹೋಗದಂತೆ ಕ್ರಮ ಕೈಗೊಂಡಿದ್ದಾರೆ.
ಬಡಾವಣೆಗಳ ಮುಖ್ಯ ರಸ್ತೆಗಳಿಗೆ ಅಡ್ಡವಾಗಿ ಮುಳ್ಳಿನ ಕಂಟಿ, ಕಟ್ಟಿಗೆ ದಿಣ್ಣೆಗಳು, ಸಿಮೆಂಟ್ ಇಟ್ಟಿಗೆ ಹಾಗೂ ಪತ್ರಾಗಳು ಹಾಕಿದ್ದಾರೆ. ಕೆಲವರು ಗಾಜಿನ ಚೂರುಗಳು ಹಾಕಿದ್ದಾರೆ. ಮತ್ತೆ ಕೆಲ ಬಡಾವಣೆಯವರು ತಳ್ಳುಬಂಡಿ, ಟಾಂಗಾಗಳನ್ನು ನಿಲ್ಲಿಸಿ ಸ್ವಯಂ ನಿರ್ಬಂಧ ಹೇರಿದ್ದಾರೆ. ನಿಷೇಧಾಜ್ಞೆಯನ್ನು ಜಿಲ್ಲಾಡಳಿತ ಹಾಗೂ ಪೊಲೀಸರು ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸಿದ್ದು, ಅನಗತ್ಯವಾಗಿ ಜನರು ಹೊರಬರದಂತೆ ತಡೆಯಲು ಕಠಿಣ ಕ್ರಮ ತೆಗೆದುಕೊಳ್ಳುತ್ತಿದ್ದಾರೆ. ಕಿರಾಣಿ ಅಂಗಡಿಗಳು, ಸೂಪರ್ ಮಾರ್ಕೆಟ್ ಹಾಗೂ ರಿಲಯನ್ಸ್, ಬಿಗ್ ಬಜಾರ್ ಸೇರಿದಂತೆ ಜನ ಸಂದಣಿಗೆ ಹೆಚ್ಚಾಗಿ ಸೇರುತ್ತಿದ್ದ ಅಂಗಡಿಗಳನ್ನು ಬಂದ್ ಮಾಡಿಸಿದ್ದಾರೆ.
ಆಸ್ಪತ್ರೆಗಳು ಹಾಗೂ ಔಷಧಿಗಳು, ಕೆಲ ಅಗತ್ಯ ವಸ್ತುಗಳು ಮತ್ತು ಸೇವೆಗಳಿಗೆ ತೊಂದರೆ ಆಗದಂತೆ ಕ್ರಮ ವಹಿಸಿ, ಬೇಕಾಬಿಟ್ಟಿ ಸಂಚಾರಕ್ಕೆ ಕಡಿವಾಣ ಹಾಕಿದ್ದಾರೆ. ಕೆಲ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ನಿಲ್ಲಿಸಿದ್ದಾರೆ. ಪ್ರತಿಯೊಬ್ಬ ವಾಹನ ಸವಾರರ ದಾಖಲೆ ತಪಾಸಣೆ ಮಾಡಿಯೇ ಬಿಡುತ್ತಿದ್ದಾರೆ. ಅನಗತ್ಯವಾಗಿ ರಸ್ತೆಗಿಳಿದ ಸವಾರರ ವಾಹನಗಳನ್ನು ಪೊಲೀಸರು ವಶಕ್ಕೆ ಪಡೆದು, ಲಾಠಿ ರುಚಿ ತೋರಿಸುತ್ತಿದ್ದಾರೆ.