ಕಲಬುರಗಿ: ನಮ್ಮ ಗುರಿಗಳಿಗೆ ನಿರ್ದಿಷ್ಟ ಆಕಾರ ನೀಡುವ ದೈವತ್ವ ನಮ್ಮಲ್ಲಿಯೇ ಇದ್ದು, ತನ್ನ ವಿಚಾರದಂತೆ ಮನುಷ್ಯನ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಕರ್ನಾಟಕ ರಾಜ್ಯ ಲೋಕಾಯುಕ್ತ ನ್ಯಾ.ಬಿ.ಎಸ್. ಪಾಟೀಲ್ ಹೇಳಿದರು.
ಇಲ್ಲಿನ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ಏಳನೇ ಘಟಿಕೋತ್ಸವ ಭಾಷಣ ಮಾಡಿದ ಅವರು, ವಿಚಾರದಂತೆ ವ್ಯಕ್ತಿತ್ವ ಎಂಬುದನ್ನು ಉಪನಿಷತ್ತುಗಳಲ್ಲಿ ಹೇಳಲಾಗಿದೆ. ಅದರಂತೆ ನಿನ್ನ ಆಲೋಚನಯಂತೆ ನಿನ್ನ ವ್ಯಕ್ತಿತ್ವ ರೂಪುಗೊಳ್ಳುತ್ತದೆ ಎಂದು ಮಹಾತ್ಮ ಬುದ್ದನ ಬರಹದಲ್ಲಿ ಹೇಳಲಾಗಿದೆ ಎಂದು ವಿವರಣೆ ನೀಡಿದರು.
ಪ್ರಮುಖವಾಗಿ ತತ್ವ ಜ್ಞಾನಿ ಮಾರ್ಕಸ್ ಆರಿಲೀಯಸ್ ಸಹ ನಿಮ್ಮ ಜೀವನ ನಿಮ್ಮ ಆಲೋಚನೆಗಳ ಪ್ರತಿಸ್ಪಂದನವಾಗಿದೆ ಎಂದು ಹೇಳಿದ್ದು, ಆದ್ದರಿಂದ ಒಳ್ಳೆಯ ಆಲೋಚನೆಗಳು ಒಳ್ಳೆಯ ಫಲವನ್ನು ನೀಡುತ್ತವೆ. ಕೆಟ್ಟ ವಿಚಾರಗಳು ಕೆಟ್ಟ ಫಲವನ್ನು ನೀಡುತ್ತವೆ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕೆಂದರು.
ನಮ್ಮ ಆಲೋಚನೆಗಳು ನಮ್ಮ ಕ್ರಿಯೆಗಳಿಗಿಂತ ಮುಂಚಿತವಾಗಿ ಸಂಭವಿಸುತ್ತವೆ. ಹೀಗಾಗಿ ನಮ್ಮ ಕ್ರಿಯೆಗಳ ಕುರಿತಾದ ನಮ್ಮ ಆಲೋಚನೆಗಳು ಸ್ಪಷ್ಟವಾಗಿರಬೇಕು. ಆದ್ದರಿಂದ ನಮ್ಮ ಆಲೋಚನೆಗಳ ಮೇಲೆ ನಿಗಾ ವಹಿಸುವುದು ನಮ್ಮ ಕಾರ್ಯಕ್ಷಮತೆ ಮತ್ತು ಜೀವನದ ಗುಣಮಟ್ಟದ ಮೂಲಭೂತ ಸಂಗತಿಯಾಗಿದೆ. ಇದೇ ಕಾರಣಕ್ಕೆ ನಮ್ಮ ಹಿರಿಯರು ಮತ್ತು ಶಿಕ್ಷಕರು ಎಚ್ಚರಿಕೆಯಿಂದಿರಿ, ಜಾಗೃತರಾಗಿರಿ, ಜಾಗರೂಕರಾಗಿರಿ, ಪ್ರಜ್ಞಾ ಪೂರ್ವಕವಾಗಿರಿ ಎಂದು ಸಲಹೆ ನೀಡುವುದನ್ನು ಕೇಳಿದ್ದೇವೆ. ಆದ್ದರಿಂದ ನಾವೆಲ್ಲವನ್ನು ಅರಿತು ಮುನ್ನಡೆಯಬೇಕು ಎಂದರು.
ನಾವು ನಮ್ಮ ಆಲೋಚನೆಗಳ ಮೇಲೆ ಕಟ್ಟುನಿಟ್ಟಾದ ಎಚ್ಚರ ವಹಿಸದಿದ್ದರೆ ದುರಾಸೆ, ಸ್ವಾರ್ಥ, ವಂಚನೆ, ಕುಚೇಷ್ಟೆಯನ್ನು ಉತ್ತೇಚಿಸುವಂತಹ ಭ್ರಷ್ಟ ಮತ್ತು ಅನೈತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಪ್ರಚೋದನೆ ನೀಡುವಂತಹ ನೆಗೆಟಿವ್ ಆಲೋಚನೆಗಳು ನಮ್ಮಲ್ಲಿ ಉಂಟಾಗುತ್ತವೆ. ಇದರ ಪರಿಣಾಮ ಇಂದಿನ ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ಕಾಣಬಹುದಾಗಿದೆ ಎಂದು ನ್ಯಾ. ಬಿ.ಎಸ್. ಪಾಟೀಲ್ ಹೇಳಿದರು.
ಲೋಕಾಯುಕ್ತ ಸಂಸ್ಥೆಯಿಂದ ದಾಳಿ ಮೂಲಕ ಭ್ರಷ್ಟಾಚಾರ ಹತ್ತಿಕ್ಕಲಾಗುತ್ತಿದೆ. ಜನರಿಂದ ಲಂಚ ಪಡೆಯುವಾಗ ಅಧಿಕಾರಿಗಳು ಸಿಕ್ಕು ಬೀಳುತ್ತಿದ್ದಾರೆ. ಸರ್ಕಾರಿ ಕಚೇರಿ ಭೇಟಿ ನೀಡಿದಾಗ ಅನಧಿಕೃತ ಗೈರು ಹಾಜರಿ, ಕೆಲಸದಲ್ಲಿ ಉದಾಸೀನತೆ ಕಂಡು ಬರುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಅವರು, ಅದಲ್ಲದೇ ಈಗಂತು ನಿತ್ಯವೊಂದು ಪರೀಕ್ಷೆಯ ಹಗರಣಗಳು, ನೇಮಕಾತಿ ಹಗರಣಗಳು, ವರ್ಗಾವಣೆ ಮತ್ತು ಸ್ಥಳ ನಿಯುಕ್ತಿಯಲ್ಲಿ ಹಲವಾರು ಹಗರಣಗಳು ಬಯಲಿಗೆ ಬರುತ್ತಿವೆ. ಇದಕ್ಕೆಲ್ಲ ಸ್ವಾರ್ಥ ಮತ್ತು ತಕ್ಷಣ ಗಳಿಸಬೇಕೆಂಬ ಅನೈತಿಕ ಅಶುದ್ಧ ಆಲೋಚನೆಗಳು ಸಾಮಾಜಿಕ ಅವನತಿಗೆ ಕಾರಣವಾಗಿವೆ ಎಂದು ನ್ಯಾ. ಬಿ.ಎಸ್. ಪಾಟೀಲ್ ಹೇಳಿದರು.
ಕರ್ನಾಟಕ ಕೇಂದ್ರೀಯ ವಿವಿಯ ಕುಲಾಧಿಪತಿ ವಿಜಯ ಕೇಶವ ಗೋಖಲೆ, ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಸೇರಿದಂತೆ ಮುಂತಾದವರಿದ್ದರು.