ಕಲಬುರಗಿ: ಫೆ.5ರಿಂದ ನಡೆಯುವ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತಂತೆ ಬುಧವಾರ ಮಹಾನಗರ ಹಾಗೂ ವಿವಿಧ ತಾಲೂಕಾ ಕೇಂದ್ರ ಸ್ಥಾನ, ಗ್ರಾಮಗಳಲ್ಲಿ ಪ್ರಚಾರ ಕಾರ್ಯ ನಡೆಸಲಾಯಿತು.
ಸಮ್ಮೇಳನದ ಪ್ರಚಾರ ಸಮಿತಿಯಿಂದ ನಗರದ ರೈಲ್ವೆ ನಿಲ್ದಾಣ, ಚಲನಚಿತ್ರ ಮಂದಿರಗಳು, ವಿಮಾನ ನಿಲ್ದಾಣದಲ್ಲಿ ಪೋಸ್ಟರ್ ಅಂಟಿಸುವುದು, ಹೆದ್ದಾರಿ ಫಲಕಗಳ ಮೇಲೆ ಬ್ಯಾನರ್ ಪೇಸ್ಟಿಂಗ್, ಎಲ್‌ಇಡಿ ವಾಹನದ ಮೂಲಕ ನುಡಿ ಸಮ್ಮೇಳನಕ್ಕೆ ಆಹ್ವಾನಿಸುವ ದೃಶ್ಯ ಪ್ರಸಾರ ಮಾಡುವ ಮೂಲಕ ಭರ್ಜರಿ ಪ್ರಚಾರ ಕಾರ್ಯ ಆರಂಭಿಸಲಾಯಿತು.
ಎಲ್‌ಇಡಿ ವಾಹನದಲ್ಲಿ ನುಡಿ ಸಮ್ಮೇಳನಕ್ಕೆ ಆಹ್ವಾನಿಸುವ ಪ್ರೊಮೋಸ್ ಮತ್ತು ವಾರ್ತಾ ಇಲಾಖೆಯಿಂದ ನಿರ್ಮಿಸಿದ “ಬಾರಿಸು ಕನ್ನಡ ಡಿಂಡಿಮವ ಓ ಕರ್ನಾಟಕ ಹೃದಯ ಶಿವಾ’ ಹಾಡು ಪ್ರಸಾರ ಎಲ್ಲೆಡೆ ಜೋರಾಗಿದೆ. ಈ ಹಾಡು ಕೇಳುತ್ತಿದ್ದಂತೆ ರಸ್ತೆ ಮೇಲೆ ಸಂಚರಿಸುವ ಸಂಚಾರಿಗಳು ಒಂದು ಕ್ಷಣ ನಿಂತು ನೋಡಿಯೇ ಮುಂದೆ ಸಾಗುತ್ತಿದ್ದಾರೆ. ಅಷ್ಟರ ಮಟ್ಟಿಗೆ ಈ ಹಾಡು ಕೇಳುಗರನ್ನು ತನ್ನತ್ತ ಸೆಳೆಯುವುದಲ್ಲದೆ ನಾಡು-ನುಡಿ ಅಭಿಮಾನ ಮೂಡಿಸುತ್ತಿದೆ.
ಸರ್ದಾರ ವಲ್ಲಭಬಾಯಿ ಪಟೇಲ್, ಜಗತ್ ವೃತ್ತ, ಸೂಪರ್ ರ್ಮಾರ್ಕೆಟ್, ಕಿರಾಣಾ ಬಜಾರ್, ಗುಲಬರ್ಗಾ ವಿಶ್ವವಿದ್ಯಾಲಯ ಸೇರಿದಂತೆ ಇತರ ಪ್ರದೇಶಗಳಲ್ಲಿ ಸಂಚರಿಸಿ ಕನ್ನಡ ಕುಲಪುತ್ರರಿಗೆ ಆಹ್ವಾನ ನೀಡಲಾಗುತ್ತಿದೆ. ಅಲ್ಲದೇ, ಎಲ್ಲ ಚಲನಚಿತ್ರ ಮಂದಿರದಲ್ಲಿ ನುಡಿ ಸಮ್ಮೇಳನಕ್ಕೆ ಆಹ್ವಾನಿಸುವ ದೃಶ್ಯ ಪ್ರಸಾರಕ್ಕೂ ಕ್ರಮ ಕೈಗೊಳ್ಳಲಾಗಿದೆ ಎಂದು ಪ್ರಚಾರ ಸಮಿತಿ ಕಾರ್ಯಧ್ಯಕ್ಷರಾದ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ರವಿರಾಜ್ ಎಚ್.ಜಿ. ತಿಳಿಸಿದ್ದಾರೆ.