Advertisement

Kalaburagi; ಜಯದೇವ ಆಸ್ಪತ್ರೆ ಕಟ್ಟಿದ್ದು ಡಾ.ಮಂಜುನಾಥ ಅಲ್ಲ: ಸಚಿವ ಪ್ರಿಯಾಂಕ್ ಖರ್ಗೆ

12:29 PM Jun 22, 2024 | Team Udayavani |

ಕಲಬುರಗಿ: ಡಾ.ಸಿ.ಎನ್.‌‌ ಮಂಜುನಾಥ್ ಅವರು ಕಟ್ಟಿದ ಜಯದೇವ ಆಸ್ಪತ್ರೆಯ ಗೌರವ ರಾಜ್ಯ ಕಾಂಗ್ರೆಸ್ ಸರಕಾರ ಹಾಳು ಮಾಡುತ್ತಿದೆ ಎನ್ನುವ ಅಶೋಕ ಹೇಳಿಕೆಗೆ ತಿರುಗೇಟು ನೀಡಿದ ಸಚಿವ ಪ್ರಿಯಾಂಕ್ ಖರ್ಗೆ, ಜಯದೇವ ಆಸ್ಪತ್ರೆ ಮಂಜುನಾಥ್ ಕಟ್ಟಿದ್ದಲ್ಲ, ಸರಕಾರ ಕಟ್ಟಿ ಬೆಳೆಸಿದ ಆಸ್ಪತ್ರೆಯಾಗಿದೆ ಎಂದರು.‌

Advertisement

ಕಲಬುರಗಿಗೆ ಜಯದೇವ ತಂದಿದ್ದು ಸಚಿವ ಡಾ. ಶರಣಪ್ರಕಾಶ ಪಾಟೀಲ್ ಹೊರತು ಬೇರೆಯವರಲ್ಲ ಎಂದು ಸಚಿವ ಖರ್ಗೆ ಹೇಳಿದರು.

ಸಿಎಸ್ಆರ್ ಅಡಿ ಶಾಲಾ ಕೋಣೆಗಳ ನಿರ್ಮಾಣ: ಕಾರ್ಪೋರೆಟ್ ಸಾಮಾಜಿಕ ಹೊಣೆಗಾರಿಕೆ (ಸಿಎಸ್ಆರ್) ಅಡಿ ಸುಮಾರು 2000 ಸಾವಿರ ಕೋ.ರೂ ವೆಚ್ಚದಲ್ಲಿ ಶಾಲಾ ಕೋಣೆಗಳನ್ನು‌ ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಸಚಿವ ಖರ್ಗೆ ಇದೇ ಸಂದರ್ಭದಲ್ಲಿ ತಿಳಿಸಿದರು.

ಸಿಎಸ್ ಆರ್ ಅಡಿಯಲ್ಲಿ ರೂ 2,000 ಕೋಟಿಯಲ್ಲಿ ಅನುದಾನ ಸಂಗ್ರಹಿಸಿ ಬೆಂಗಳೂರು ಹೊರತುಪಡಿಸಿ ಗ್ರಾಮೀಣ ಮಟ್ಟದ ಶಾಲೆಗಳಿಗೆ ಮೂಲಭೂತ ಸೌಲಭ್ಯ ಒದಗಿಸುವ ಯೋಚನೆ‌ ಇದ್ದು ಎನ್ಆರ್ ಐ ಗಳು ಸೇರಿದಂತೆ ಇತರೆ ದಾನಿಗಳಿಂದ ಅನುದಾನ ಸಂಗ್ರಹಿಸಲಾಗುವುದು ಎಂದು ಹೇಳಿದರು.

L& T ಕಂಪನಿ ವಿರುದ್ದ ಕ್ರಮ: ಎಲ್ ಅಂಡ್ ಟಿ ಸಂಸ್ಥೆ ಕೈಗೆತ್ತಿಕೊಂಡಿರುವ ಕಾಮಗಾರಿಗಳನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ ಎನ್ನುವ ದೂರುಗಳ ಹಿನ್ನೆಲೆ‌ ನಿನ್ನೆ ಬೆಂಗಳೂರಿನಲ್ಲಿ ಸಿಎಸ್ ಮಟ್ಟದಲ್ಲಿ ಸಿಎಂ ಸಭೆ ನಡೆಸಿ ಕಂಪನಿಯ ಎಂಡಿಯೊಂದಿಗೆ ಚರ್ಚಿಸಿದ್ದು ಸಚಿವ ಸಂಪುಟ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವ ಖರ್ಗೆ ಹೇಳಿದರು.

Advertisement

ಕಲಬುರಗಿ ನಗರದಲ್ಲಿ ಕುಡಿಯುವ ನೀರು ಪೂರೈಕೆ ಮಾಡುವ ಕಾಮಗಾರಿ ಗುತ್ತಿಗೆ ತೆಗೆದುಕೊಂಡಿರುವ ಎಲ್ ಅಂಡ್ ಟಿ ಕಂಪನಿ ಹಲವಾರು ಕಡೆ‌ ಭೂಮಿ ಅಗೆದು ವೈಜ್ಞಾನಿಕವಾಗಿ ಮುಚ್ಚದೆ ಬಿಟ್ಟಿರುವ ಬಗ್ಗೆ ಪತ್ರಕರ್ತರು ಸಚಿವರ ಗಮನಕ್ಕೆ ತಂದಾಗ ಉತ್ತರಿಸಿದ ಸಚಿವರು ಈಗಾಗಲೇ ಜಿಲ್ಲಾ ಮಟ್ಟದ ಸಭೆಯಲ್ಲಿ ಎಚ್ಚರಿಕೆ ನೀಡಲಾಗಿದೆ. ಆದರೂ‌ ಕೆಲವು ಕಡೆ ಲೋಪದೋಷಗಳು ಕಂಡು ಬಂದಿರುವುದರಿಂದ ಕಂಪನಿಯ ಎಂಡಿಯನ್ನು ದೆಹಲಿಯಿಂದ‌‌ ಕರೆಸಿ‌ ಚರ್ಚೆ ನಡೆಸಲಾಗಿದೆ ಎಂದರು.

ಕಲಬುರಗಿ ನಗರದ‌ ಕೆಲವು ಕಡೆ ರಾಡಿ‌ ಮಿಶ್ರಿತ ನೀರು ಸರಬರಾಜು ಆಗಿರುವ ಹಿನ್ನೆಲೆಯಲ್ಲಿ ಉತ್ತರಿಸಿದ ಸಚಿವರು, ಮುಂಗಾರು ಮಳೆ ಜೋರಾಗಿ ಬಂದಿದ್ದರಿಂದ ಈ‌ ತರಹದ ನೀರು ಬಂದಿದೆ. ಹಾಗಾಗಿ, ಆ ನೀರು ಮನೆಗಳಿಗೆ ಸರಬರಾಜಾಗಿ ಕಲಷಿತಗೊಂಡು ಮತ್ತಷ್ಟು ಹಾನಿಯಾಗಬಾರದು ಎಂದು ಮುನ್ನೆಚ್ಚರಿಕೆ ಕ್ರಮವಾಗಿ ಮಹಾನಗರ ಪಾಲಿಕೆ ನೀರು ಬಳಸದಂತೆ ನಾಗರಿಕರಿಗೆ ಮನವಿ ಮಾಡಿತ್ತು ಎಂದು ಸಚಿವರು ಸ್ಪಷ್ಟಪಡಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next