Advertisement

Kalaburagi: ಕೆಕೆಆರ್‌ಡಿಬಿ ಅನುದಾನ ಅಕ್ರಮ ತನಿಖೆಗೆ ಸರ್ಕಾರದ ಆದೇಶ: ಚು.ಆಯೋಗಕ್ಕೆ ದೂರು

07:04 PM Nov 12, 2024 | Team Udayavani |

ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ವ್ಯಾಪ್ತಿಯಲ್ಲಿ ಬರುವ ಸಂಡೂರು ವಿಧಾನಸಭಾ ಚುನಾವಣೆಯಲ್ಲಿ ಮತದಾರರ ಮೇಲೆ ಪ್ರಭಾವ ಬೀರಲು ರಾಜ್ಯ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರದ ಸಂದರ್ಭದಲ್ಲಿನ ಕೆಕೆಆರ್ ಡಿಬಿ ಅನುದಾನ ಅಕ್ರಮ ತನಿಖೆಗೆ ಆದೇಶಿಸಲಾಗಿದೆ ಎಂದು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಮಾಜಿ ಶಾಸಕ, ಬಿಜೆಪಿ ನಾಯಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದರು.

Advertisement

ಪತ್ರಿಕಾಗೋಷ್ಠಿಯಲ್ಲಿ ಮಂಗಳವಾರ (ನ.12) ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ (ಕೆಕೆಆರ್‌ಡಿಬಿ) ಮಂಡಳಿಯಿಂದ 300 ಕೋ. ರೂ ಅನುದಾನ ನೀಡಲಾಗಿದ್ದರೆ ರಾಜ್ಯ ಸರ್ಕಾರ ಸಾಂಸ್ಕೃತಿಕ ಸಂಘದಲ್ಲಿ 1200 ಕೋ.ರೂ ಅಕ್ರಮವಾಗಿದೆ ಎಂಬುದಾಗಿ ರಾಜ್ಯ ಸರ್ಕಾರ ತನಿಖೆಗೆ ಆದೇಶ ಹೊರಡಿಸಿರುವುದು ಮೂರ್ಖತನವಾಗಿದೆಯಲ್ಲದೇ ಉಪಚುನಾವಣೆ ಮತದಾನ ದಿನದ ಸಮಯದಲ್ಲಿ ಜನರ ಗಮನ ಬೇರೆಡೆ ಸೆಳೆಯಲು ಕುತಂತ್ರಕ್ಕೆ ಮುಂದಾಗಿದೆ ಎಂದು ದೂರಿದರು.‌

ಆರ್ಥಿಕ ತಜ್ಞ, ಮುಖ್ಯಮಂತ್ರಿ ಸಿದ್ಧರಾಮಯ್ಯ ಕೆಕೆಆರ್‌ಡಿಬಿ ಹಾಗೂ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ನೀಡಲಾದ ಅನುದಾನದಲ್ಲಿ ಅಕ್ರಮವಾಗಿದೆ ಎಂದು ಈಗಾಗಲೇ ಹಿಂದಿನ ಅಪರ ಮುಖ್ಯ ಕಾರ್ಯದರ್ಶಿ ಡಾ. ರಮಣರೆಡ್ಡಿ ನೇತೃತ್ವದ ತನಿಖಾ ವರದಿ ಇರುವಾಗಲೇ ತರಾತುರಿಯಲ್ಲಿ ನ. 11ರಂದು ಮತ್ತೊಂದು ತನಿಖೆಗೆ ಆದೇಶ ಹೊರಡಿಸಿರುವುದು ಯಾವ ಪುರುಷಾರ್ಥಕ್ಕೆ ಎಂದು ತೇಲ್ಕೂರ ಖಾರವಾಗಿ ಪ್ರಶ್ನಿಸಿದರು.

ಕಕ ವ್ಯಾಪ್ತಿಯ ಸಂಡೂರು ವಿಧಾನಸಭಾ ಕ್ಷೇತ್ರದ ಉಪಚುನಾವಣೆ ನ. 13ರಂದು ಇರುವುದರಿಂದ ವಕ್ಪ್ ದಿಂದ ಜನರ ನೋಟ ಬೇರೆಡೆ ಸೆಳೆಯಲು ಸಿಎಂ ಸಿದ್ಧರಾಮಯ್ಯ ನಿವೃತ್ತ ಐಎಎಸ್ ಅಧಿಕಾರಿ ಸುಧೀರಕುಮಾರ ಅವರನ್ನು ತನಿಖಾಧಿಕಾರಿಯಾಗಿ ನೇಮಿಸಲಾಗಿದೆ. ಇದೊಂದು ನಾಟಕದ ಹಾಗೂ ಸುಳ್ಳಿನ ಭಾಗವಾಗಿದೆ ಎಂದು ತೇಲ್ಕೂರ ಆಕ್ರೋಶ ವ್ಯಕ್ತಪಡಿಸಿದರು.

ಸಂಘದಲ್ಲಿ ಅಧಿಕಾರಿ ವ್ಯಾಪ್ತಿ ಮೀರಿ 327.40 ಕೋ.ರೂ ದೇಶಿ ಹಸುಗಳ ಸಾಕಾಣಿಕೆಗೆ ಪ್ರೋತ್ಸಾಹ ಧನ ರೂಪದಲ್ಲಿ ವೆಚ್ಚ ಮಾಡಲಾಗಿದೆ ಹಾಗೂ ಅದೇ ರೀತಿ 310.56 ಕೋ.ರೂ ವೆಚ್ಚದಲ್ಲಿ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಒಂದು ಕೋಟಿ ಸಸಿಗಳನ್ನು ನೆಟ್ಟು ಅನುದಾನ ದುರುಪಯೋಗ ಪಡಿಸಿಕೊಳ್ಳಲಾಗಿದೆ ಎಂದು ತನಿಖೆಯಲ್ಲಿ ಆದೇಶಿಸಲಾಗಿದೆ. ಆದರೆ ಅನುದಾನ 300 ಕೋ.ರೂ ಇಷ್ಟೊಂದು ಅಕ್ರಮ ನಡೆಯಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.

Advertisement

ರಮಣರೆಡ್ಡಿ ವರದಿ ಕಸದ ಬುಟ್ಟಿಗೆ ಏಕೆ?: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘಕ್ಕೆ ನೀಡಲಾದ ಅನುದಾನದಲ್ಲಿ ಅಕ್ರಮವಾಗಿದೆ ಎಂದು ಹಿಂದಿನ ಅಪರ ಮುಖ್ಯ ಕಾರ್ಯದರ್ಶಿ ಡಾ. ಇ.ವಿ. ರಮಣರೆಡ್ಡಿ ಅವರನ್ನು ಇದೇ ಸಿಎಂ ಸಿದ್ಧರಾಮಯ್ಯ ತನಿಖಾಧಿಕಾರಿಯನ್ನಾಗಿ ನಿಯೋಜಿಸಿದ್ದರು. ಅದರ ಹಿನ್ನೆಲೆಯಲ್ಲಿ ರಮಣರೆಡ್ಡಿ ಅವರು ವರದಿಯನ್ನು ನೀಡಿದ್ದಾರೆ. ತಾವು ಹೇಳಿದ ಪ್ರಕಾರ ರಮಣರೆಡ್ಡಿ ವರದಿ ನೀಡಿಲ್ಲವೆಂದು ಯಾವುದೇ ಕ್ರಮ ಕೈಗೊಳ್ಳದೇ ತರಾತುರಿಯಲ್ಲಿ ಈಗ ಹೊಸದಾಗಿ ನಿವೃತ್ತ ಐಎಎಸ್ ಅಧಿಕಾರಿ ಸುಧೀರ್‌ ಕುಮಾರ್ ಅವರನ್ನು ತನಿಖಾಧಿಕಾರಿಯಾಗಿ ಮಾಡುವ ಹುನ್ನಾರದಲ್ಲಿ ಏನಡಗಿದೆ. ಇದರ ಬದಲು ಐದು ಜನ ನಿವೃತ್ತ ನ್ಯಾಯಾಧೀಶರ ಹೆಸರನ್ನು ರಾಜ್ಯಪಾಲರಿಗೆ ಕಳುಹಿಸಿ ಕೊಟ್ಟರೆ ಅವರೇ ಅಂತಿಮಗೊಳಿಸುತ್ತಾರೆ ಎಂದರು.

ಡಾ. ಬಸವರಾಜ ಪಾಟೀಲ್ ಸಜ್ಜನ ರಾಜಕಾರಣಿ: ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವ ಸಂಪುಟದಲ್ಲಿ ಚರ್ಚಿಸಿ ಒಮ್ಮತದ ನಿರ್ಣಯದ ಮೇರೆಗೆ ಕಾನೂನು ಬದ್ಧವಾಗಿ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘ ರಚನೆಯಾಗಿ ಮಾಜಿ ಸಂಸದ ಡಾ. ಬಸವರಾಜ ಪಾಟೀಲ್ ಸೇಡಂ ಅವರು ಅಧ್ಯಕ್ಷರಾಗಿದ್ದರು. ಆದರೆ ಇವರ ಅಧ್ಯಕ್ಷತೆಯಲ್ಲೇ ಅಕ್ರಮವಾಗಿದೆ ಎಂದು ಹೇಳುವುದು ಎಷ್ಟೊಂದು ಸರಿ. ಡಾ. ಸೇಡಂ ಎಂತಹ ಸಜ್ಜನ ರಾಜಕಾರಣಿ ಎಂಬುದು ಸ್ವತ: ಕಾಂಗ್ರೆಸ್ ನಾಯಕರಿಗೆ ಮನವರಿಕೆಯಿದೆ. ಅದಲ್ಲದೇ ಕಾಂಗ್ರೆಸ್ ನಾಯಕರು ದೂರು ಕೊಡವ ಬದಲು ಡಾ. ಸೇಡಂ ಅವರು ಭ್ರಷ್ಟರು ಎಂದು ಹೇಳಲಿ ಎಂದು ತೇಲ್ಕೂರ ಸವಾಲು ಹಾಕಿದರಲ್ಲದೇ ನಿವೃತ್ತ ಐಎಎಸ್ ಅಧಿಕಾರಿ ಮದನಗೋಪಾಲ ಸಂಘಕ್ಕೆ ಸಲಹೆಗಾರರಾಗಿದ್ದರು. ಅವರ ಮೇಲೂ ಗೂಬೆ ಹಾಕಿಸುವುದು ಎಷ್ಟೊಂದು ಸಮಂಜಸ ಎಂದರು.

ರಾಜ್ಯಪಾಲರ ಬಳಿ ತೆರಳಿ ಸಿಬಿಐಗೆ ಆಗ್ರಹ: ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ ಹಾಗೂ ಸಾಂಸ್ಕೃತಿಕ ಸಂಘದಲ್ಲಿ 12000 ಕೋ.ರೂ ಅವ್ಯವಹಾರವಾಗಿದೆ ಎಂದು ಸರ್ಕಾರವೇ ಹೊಸದಾಗಿ ತನಿಖೆಗೆ ಆದೇಶಿಸಿದ್ದರಿಂದ ಇದನ್ನು ಹಾಗೂ ಜತೆಗೆ 371 ಜೆ ವಿಧಿ ಜಾರಿಯಾದಾಗಿನಿಂದ ಅಂದರೆ 2013ರಿಂದ 2023ರವರೆಗೆ ಕೆಕೆಆರ್‌ಡಿಬಿಗೆ ಬಂದಿರುವ ಅನುದಾನ ಸಂಪೂರ್ಣ ತನಿಖೆಗೆಯನ್ನು ಸಿಬಿಐ ಇಲ್ಲವೇ ಇಡಿ ತನಿಖೆಗೆ ವಹಿಸುವಂತೆ ರಾಜ್ಯಪಾಲರ ಬಳಿ ಬಿಜೆಪಿ ತೆರಳಿ ಆಗ್ರಹಿಸಲಿದೆ ಎಂದು ತೇಲ್ಕೂರ ಇದೇ ಸಂದರ್ಭದಲ್ಲಿ ತಿಳಿಸಿದರು.

ಸರ್ಕಾರಕ್ಕೆ ಬಿಜೆಪಿ ಮೇಲೆ ಗೂಬೆ ಕೂರಿಸುವ ಬದಲು ಕೆಕೆಆರ್‌ಡಿಬಿ ಕಳೆದ 10 ವರ್ಷಗಳ ಅನುದಾನ ಹಾಗೂ ಕಾಮಗಾರಿಗಳ ತನಿಖೆ ನಡೆಸಲಿ. ಸಿಎಂ ಅವರಿಂದ ಮತ್ತೊಂದು ತನಿಖೆಗೆ ಆದೇಶಿಸಲು ಆಸಕ್ತಿ ತೋರಿರುವ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ಮಾಜಿ ಸಂಸದ ಡಾ. ಬಸವರಾಜ ಸೇಡಂ ಅವರ ಭೃಷ್ಟಾಚಾರ ಕುರಿತು ಮಾತನಾಡಲಿ ಎಂದು ತೇಲ್ಕೂರ ಪುನರುಚ್ಚರಿಸಿದರು. ಶಾಸಕ ಬಸವರಾಜ ಮತ್ತಿಮಡು, ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಚಂದು ಪಾಟೀಲ್ ಹಾಗೂ ಸಂತೋಷ ಹಾದಿಮನಿ, ಚಂದ್ರಶೇಖರರೆಡ್ಡಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next