Advertisement

ವಲಸಿಗರಿಗೂ ನರೇಗಾ ಜಾಬ್‌ಕಾರ್ಡ್‌

03:41 PM May 18, 2020 | Naveen |

ಕಲಬುರಗಿ: ಕೋವಿಡ್ ನಿಂದಾಗಿ ಹೊರ ರಾಜ್ಯಗಳಿಂದ ತಮ್ಮ ಊರಿಗೆ ಮರಳಿರುವ ಎಲ್ಲಾ ವಲಸಿಗರಿಗೂ ಜಾಬ್‌ಕಾರ್ಡ್‌ ವಿತರಿಸಿ, ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ನೀಡುವಂತೆ ಲೋಕಸಭಾ ಸದಸ್ಯ ಡಾ| ಉಮೇಶ ಜಾಧವ ಎಲ್ಲ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ರವಿವಾರ ಕೋವಿಡ್‌-19 ಹಿನ್ನೆಲೆಯಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಉದ್ಯೋಗ ಖಾತ್ರಿ ಯೋಜನೆ ಕುರಿತಂತೆ ಕೈಗೊಂಡ ಕ್ರಮಗಳ ಬಗ್ಗೆ ಸಭೆಯಲ್ಲಿ ಚರ್ಚಿಸಿ ಅವರು ಮಾತನಾಡಿ,ಉದ್ಯೋಗ ಖಾತ್ರಿ ಯೋಜನೆಗೆ ಅನುದಾನ ಕೊರತೆ ಇದ್ದಲ್ಲಿ ತಿಳಿಸಿ, ಎಷ್ಟೇ ಅನುದಾನ ಬೇಕಾದರೂ ಸರ್ಕಾರದಿಂದ ತರಲು ಸಿದ್ಧ, ಯಾವ ವಲಸಿಗರಿಗೂ ಸಮಸ್ಯೆಯಾಗದಂತೆ ಕೂಲಿ ಕೆಲಸ ನೀಡಬೇಕೆಂದರು.

ಪ್ರತಿ ತಾಲೂಕಿನಲ್ಲಿ ಇದು ವರೆಗೆ ನೀಡಿರುವ ಜಾಬ್‌ಕಾರ್ಡ್‌ ಹಾಗೂ ನೀಡಿರುವ ಮಾನವ ದಿನಗಳ ಕೆಲಸಗಳ ಬಗ್ಗೆ ಆಯಾ ತಾಲೂಕಿನ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿಗಳಿಂದ ಮಾಹಿತಿ ಪಡೆದ ಸಂಸದರು, 20 ಸಾವಿರಕ್ಕಿಂತ ಹೆಚ್ಚು ಜಾಬ್‌ ಕಾರ್ಡ್‌ ವಿತರಿಸಿ ಉದ್ಯೋಗ ನೀಡಬೇಕು. ನಂತರ ಬೇಗ ಕೂಲಿ ವೇತನ ತಲುಪುವಂತೆ ಮಾಡಬೇಕು ಎಂದರು.

ಉದ್ಯೋಗ ಖಾತ್ರಿ ಯೋಜನೆ ಬಗ್ಗೆ ಹಳ್ಳಿ ಜನರಿಗೆ ಹೆಚ್ಚಾಗಿ ಗೊತ್ತಿಲ್ಲ. ಪ್ರತಿ ಹಳ್ಳಿ-ಹಳ್ಳಿಗೆ ಹೋಗಿ ಯೋಜನೆ ಬಗ್ಗೆ ಅರಿವು ಮೂಡಿಸಿ. ಈ ಯೋಜನೆಯಲ್ಲಿ ಜನರಿಗೆ ಅನ್ಯಾಯಗದಂತೆ ನೋಡಿಕೊಳ್ಳಿ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದರು. ಶಾಸಕ ದತ್ತಾತ್ರೇಯ ಪಾಟೀಲ ರೇವೂರ ಮಾತನಾಡಿ, ಹಳ್ಳಿಯಲ್ಲಿನ ಪ್ರತಿ ಮನೆಗೆ ಕನಿಷ್ಟಪಕ್ಷ ಒಂದು ಜಾಬ್‌ಕಾರ್ಡ್‌ನ್ನಾದರೂ ಕಡ್ಡಾಯವಾಗಿ ನೀಡುವಂತೆ ವ್ಯವಸ್ಥೆ ಮಾಡಿ. ವಲಸೆ ಕಾರ್ಮಿಕರು ಹಾಗೂ ಹಳ್ಳಿಯ ಜನರಿಗೆ ಸಾಮಾಜಿಕ ನ್ಯಾಯ ಸಿಗುವಂತೆ ನೋಡಿಕೊಳ್ಳಿ ಎಂದರು.

ಅಫಜಲಪುರ ಶಾಸಕ ಎಂ.ವೈ. ಪಾಟೀಲ ಮಾತನಾಡಿ, ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸುವಂತೆ ತಾವು ಈಗಾಗಲೇ ಜಿಲ್ಲಾ ಪಂಚಾಯತ್‌ಗೆ ಪತ್ರ ಬರೆದಿದ್ದು, ಶೀಘ್ರ ಆರ್‌ಓ ಪ್ಲಾಂಟ್‌ ಸ್ಥಾಪಿಸಬೇಕು ಎಂದರು. ಈ ಸಂದರ್ಭದಲ್ಲಿ ಮಾತನಾಡಿದ ಸಂಸದರು, ಪ್ರಸಕ್ತ ಬೇಸಿಗೆ ಕಾಲವಾಗಿದ್ದರಿಂದ ಎಲ್ಲೆಲ್ಲಿ ಕುಡಿಯುವ ನೀರಿನ ಅಗತ್ಯ ಇದೆಯೋ ಅಲ್ಲಿ ಬೋರ್‌ವೆಲ್‌ ಕೊರೆಸಬೇಕು. ಆರ್‌ಓ ಪ್ಲಾಂಟ್‌ ಸ್ಥಾಪನೆಗೆ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಎಂಜಿನಿಯರ್‌ಗಳಿಗೆ ಸೂಚಿಸಿದರು.

Advertisement

ಚಿಂಚೋಳಿ ಮತಕ್ಷೇತ್ರದ ಶಾಸಕ ಅವಿನಾಶ ಜಾಧವ, ವಿಧಾನ ಪರಿಷತ್‌ ಸದಸ್ಯ ಬಿ.ಜಿ.ಪಾಟೀಲ, ಕೃಷಿ ಮತ್ತು ಕೈಗಾರಿಕಾ ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಿ, ಜಿ.ಪಂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ| ಪಿ.ರಾಜಾ, ಜಿ.ಪಂ ಉಪ ಕಾರ್ಯದರ್ಶಿ ಮೊಹಮ್ಮದ್‌ ಇಸ್ಮಾಯಿಲ್‌, ಗ್ರಾಮೀಣ ಕುಡಿಯುವ ನೀರು ಪೂರೈಕೆ ವಿಭಾಗದ ಕಾರ್ಯಕಾರಿ ಎಂಜಿನಿಯರ್‌ ಸತೀಶ, ನರೇಗಾದ ಡಿಎಂಐಎಸ್‌ ರಾಜು ಒಂಟಿ ಸೇರಿದಂತೆ 11 ತಾಲೂಕಿನ ತಾ.ಪಂ ಕಾರ್ಯನಿರ್ವಹಣಾ ಅಧಿಕಾರಿಗಳು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next