ಕಲಬುರಗಿ: ಕೋವಿಡ್ ಸಂಕಷ್ಟ ಮತ್ತು ಲಾಕ್ ಡೌನ್ ನಿರುದ್ಯೋಗ ಸಮಸ್ಯೆಯಲ್ಲಿರುವ ಕೂಲಿ ಕಾರ್ಮಿಕರು ಮತ್ತು ರೈತಾಪಿ ವರ್ಗದ ದುಡಿಯುವ ಕೈಗಳಿಗೆ ರಾಷ್ಟ್ರೀಯ ಮಹಾತ್ಮಾ ಗಾಂಧಿ ಉದ್ಯೋಗ ಖಾತ್ರಿ ಯೋಜನೆ ವರವಾಗಿದ್ದು, ಹಲವು ಕಾಮಗಾರಿಗಳು ರಾಜ್ಯಾದ್ಯಂತ ಭರದಿಂದ ಸಾಗಿವೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯಿತಿ ರಾಜ್ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ತಾಲೂಕಿನ ಹೊನ್ನಕಿರಣಗಿ ಗ್ರಾಮದ ರೈತರ ಜಮೀನಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿದ್ದ ಬದು ನಿರ್ಮಾಣ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ 6,021 ಗ್ರಾಮ ಪಂಚಾಯಿತಿಗಳ ಪೈಕಿ 5,900 ಗ್ರಾಪಂಗಳಲ್ಲಿ ಈಗಾಗಲೇ ಉದ್ಯೋಗ ಖಾತ್ರಿ ಕೆಲಸಗಳು ಆರಂಭಿಸಲಾಗಿದೆ. ಕೆರೆ ಹೂಳೆತ್ತುವ, ಬದು ನಿರ್ಮಾಣ, ಚೆಕ್ ಡ್ಯಾಂದಂತಹ ಕಾಮಗಾರಿಗಳು ಪ್ರತಿ ಹಳ್ಳಿಯಲ್ಲಿ ಕಾಣಬಹುದಾಗಿದೆ ಎಂದರು.
ಪ್ರತಿ ಕೂಲಿ ಕಾರ್ಮಿಕನಿಗೂ ಉದ್ಯೋಗ ಸಿಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ಇದಕ್ಕಾಗಿ ಉದ್ಯೋಗ ಖಾತ್ರಿ ಯೋಜನೆಗೆ 60 ಸಾವಿರ ಕೋಟಿ ರೂ. ಜತೆಗೆ ಇತ್ತೀಚೆಗೆ 20 ಲಕ್ಷ ಕೋಟಿ ಪ್ಯಾಕೇಜ್‌ನಲ್ಲಿ 40 ಸಾವಿರ ಕೋಟಿ ರೂ. ನರೇಗಾ ಕೆಲಸಗಳಿಗೆ ಮೀಸಲಿರಿಸಲಾಗಿದೆ. ಅಲ್ಲದೇ, ಪ್ರತಿ ವ್ಯಕ್ತಿಗೆ ಕೂಲಿ ದಿನಗಳನ್ನು 100ರಿಂದ 150ಕ್ಕೆ ಹೆಚ್ಚಿಸಲು ಕ್ರಮ ವಹಿಸಲಾಗಿದೆ ಎಂದರು.
ಸರ್ಕಾರಿ ನೌಕರರು, ತರಿಗೆ ಪಾವತಿದಾರರು ಹೊರತುಪಡಿಸಿ ಉದ್ಯೋಗ ಕೇಳಿ ಬರುವ ಎಲ್ಲರಿಗೂ ಉದ್ಯೋಗ ನೀಡಲಾಗುತ್ತದೆ. ರೈತರು ತಮ್ಮ ಹೊಲದಲ್ಲಿ ಪಪ್ಪಾಯ, ಬಾಳೆ ಬೆಳೆಯಲು ಸಹ ಮುಂದೆ ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು. ನರೇಗಾ ಯೋಜನೆಯಡಿ ಅಂತರ್ಜಲ ಹೆಚ್ಚಳಕ್ಕೆ ಒತ್ತು ನೀಡಲಾಗುತ್ತಿದೆ. ಇದಕ್ಕಾಗಿ ಕೆರೆ ಹೂಳೆತ್ತುವುದು, ಕೃಷಿ ಹೊಂಡ, ಪುಷ್ಕರಣಿ, ಗೋಕಟ್ಟಾ ಕಾಮಗಾರಿಗಳನ್ನು ಹೆಚ್ಚು ಕೈಗೆತ್ತಿಕೊಳ್ಳಲಾಗಿದೆ. ಆರ್ಟ್ ಆಫ್ ಲೀವಿಂಗ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡು “ಅಂತರ್ಜಲ ಚೇತನ’ ಎಂಬ ನೂತನ ಕಾರ್ಯಕ್ರಮ ಆರಂಭಿಸಲಾಗಿದೆ ಎಂದರು.
ಇದೇ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೈಗೆತ್ತಿಕೊಂಡ ಗೋಕಟ್ಟಾದಲ್ಲಿ ಇತ್ತೀಚೆಗೆ ಸುರಿದ ಮಳೆಯಿಂದ ನೀರು ಸಂಗ್ರಹಣೆಗೊಂಡಿರುವುದುನ್ನು ಸಚಿವರು ವೀಕ್ಷಿಸಿದರು. ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಗ್ರಾಮದ ರಸ್ತೆ ಬದಿಯಲ್ಲಿ ಸಸಿ ನೆಟ್ಟು ನೀರೆರೆದರು. ಜಿಲ್ಲೆಯ ಚುನಾಯಿತ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸಾಥ್ ನೀಡಿದರು. ಸಂಸದ ಡಾ.ಉಮೇಶ ಜಾಧವ, ಶಾಸಕರಾದ ಎಂ.ವೈ.ಪಾಟೀಲ, ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ, ವಿಧಾನ ಪರಿಷತ್ ಸದಸ್ಯ ಬಿ.ಜಿ ಪಾಟೀಲ, ಜಿಪಂ ಅಧ್ಯಕ್ಷೆ ಸುವರ್ಣ ಮಾಲಾಜಿ, ಜಿಪಂ ಉಪಾಧ್ಯಕ್ಷೆ ಶೋಭಾ ಸಿರಸಗಿ, ಮಾಜಿ ಸಚಿವ ಮಾಲೀಕಯ್ಯ ಗುತ್ತೇದಾರ, ಮಾಜಿ ಶಾಸಕ ದೊಡ್ಡಪ್ಪಗೌಡ ಪಾಟೀಲ ನರಿಬೋಳ, ಜಿಪಂ ಕೃಷಿ ಮತ್ತು ಕೈಗಾರಿಕೆ ಸಮಿತಿ ಅಧ್ಯಕ್ಷ ಶಿವರಾಜ ಪಾಟೀಲ ರದ್ದೇವಾಡಿ, ಜಿಪಂ ಸದಸ್ಯರಾದ ದಿಲೀಪ್ ಪಾಟೀಲ, ರೇವಣಸಿದ್ದಪ್ಪ ಸಂಕಾಲಿ, ಸಂಜೀವನ್ ಯಾಕಾಪುರ, ಅರವಿಂದ ಚವ್ಹಾಣ್, ಶಿವಶರಣ ಶಂಕರ, ಜಿಪಂ ಸಿಇಒ ಡಾ.ರಾಜಾ ಪಿ., ತಾಪಂ ಅಧ್ಯಕ್ಷ ಶಿವರಾಜ ಸಜ್ಜನ್, ಗ್ರಾಪಂ ಅಧ್ಯಕ್ಷೆ ಜಗದೇವಿ ಗುರುನಾಥ ಜುಲಿ , ತಾಪಂ ಇಒ ಮಾನಪ್ಪ ಕಟ್ಟಿಮನಿ, ಪಿಡಿಒ ಮೇನಕಾ ಜಾಧವ ಸೇರಿ ಹಲವರು ಉಪಸ್ಥಿತರಿದ್ದರು.